ಸಾರಾಂಶ
ಶಿಗ್ಗಾಂವಿ: ಜಾನಪದ ವಿಶ್ವವಿದ್ಯಾಲಯದ ಘಟಿಕೋತ್ಸವದ ವೇದಿಕೆಗೆ ನನ್ನನ್ನು ಆಹ್ವಾನಿಸಿಲ್ಲ. ಯಾರೂ ನನ್ನನ್ನು ಸ್ವಾಗತಿಸಲಿಲ್ಲ ಎಂದು ಸಿಟ್ಟಾದ ನೂತನ ಶಾಸಕ ಯಾಸೀರ್ ಖಾನ್ ಪಠಾಣ ವಿವಿ ಸಿಬ್ಬಂದಿ ಮೇಲೆ ಹರಿಹಾಯ್ದ ಪ್ರಸಂಗ ಸೋಮವಾರ ನಡೆಯಿತು.
ಶಿಗ್ಗಾಂವಿ ಸಮೀಪದ ಗೊಟಗೋಡಿಯಲ್ಲಿ ಜಾನಪದ ವಿಶ್ವವಿದ್ಯಾಲಯ ನಿಯಮದ ಪ್ರಕಾರ ಘಟಿಕೋತ್ಸವಕ್ಕೆ ಗಣ್ಯರನ್ನು ಆಹ್ವಾನಿಸಲಾಗಿತ್ತು. ಘಟಿಕೋತ್ಸವಕ್ಕೂ ಮುನ್ನ ಜಾನಪದ ವಿಶ್ವವಿದ್ಯಾಲಯ ಆವರಣದಲ್ಲಿ ಜಾನಪದ ಶೈಲಿಯಲ್ಲಿ ಮೆರವಣಿಗೆ ಆರಂಭವಾಯಿತು. ಮೆರವಣಿಗೆಯಲ್ಲಿ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ ಪಾಲ್ಗೊಂಡಿದ್ದರು.
ಮೆರವಣಿಗೆ ವೇದಿಕೆಯತ್ತ ಸಾಗುತ್ತಿದ್ದಾಗ ಸ್ಥಳಕ್ಕೆ ಶಾಸಕ ಯಾಸೀರ್ ಖಾನ್ ಪಠಾಣ ಆಗಮಿಸಿದರು. ಮುಂದೆ ಹೋಗಿ ಸಚಿವರನ್ನು ಭೇಟಿಯಾಗಿ ಬಳಿಕ ಹಿಂದೆ ಬಂದ ಶಾಸಕರು ಬೆಂಬಲಿಗರೊಂದಿಗೆ ಗುಂಪು ಸೇರಿ ಘಟಿಕೋತ್ಸವದ ವೇದಿಕೆ ಬಳಿ ಆಗಮಿಸಿ, ನನ್ನನ್ನು ವೇದಿಕೆಗೆ ಕರೆದಿಲ್ಲಾ, ನಾನು ವಿವಿಗೆ ಬಂದರೂ ಯಾರೂ ಸ್ವಾಗತಿಸಲಿಲ್ಲ ಎಂದು ಗರಂ ಆದರು. ನಾನು ಸದ್ಯದಲ್ಲೇ ಶಾಸಕನಾಗಿ ಪ್ರಮಾಣ ವಚನ ಸ್ವೀಕರಿಸುತ್ತೇನೆ.
ಆ ಮೇಲೆ ನಾವು ವಾಪಸ್ ಬಂದು ನಿಮ್ಮನ್ನು ನೋಡಿಕೊಳ್ಳುತ್ತೇನೆ. ನಿಮಗೆ ಮುಂದೆ ಐತಿ, ಯುನಿವರ್ಸಿಟಿಯವರು ಇಲ್ಲಿ ಬಾಳ್ವೆ ಮಾಡಿ ನೋಡ್ತಿನಿ, ಕುಲಪತಿಗೆ ಕಾದಿದೆ ಮಾರಿಹಬ್ಬ ಎಂದು ಆವಾಜ್ ಹಾಕಿದರು. ಅಲ್ಲದೇ ನಮ್ಮ ಶಾಸಕರ ಹೆಸರನ್ನು ಕಾರ್ಡನಲ್ಲಿ ಹಾಕಿಲ್ಲ ಎಂದು ವಿವಿ ಪ್ರಾಧ್ಯಾಪಕರ ವಿರುದ್ಧ ಬೆಂಬಲಿಗರು ಧಿಕ್ಕಾರ ಕೂಗಿದರು. ಆಗ ವಿವಿಯ ಸಿಬ್ಬಂದಿಯನ್ನು ಎಳೆದಾಡಿದ ಶಾಸಕರ ಬೆಂಬಲಿಗರು ದರ್ಪ ತೋರಿದರು.
ಇದನೆಲ್ಲಾ ನೋಡುತ್ತಿದ್ದ ವಿದ್ಯಾರ್ಥಿಗಳು, ಸಭಿಕರು ಏನಿದು ಶಾಸಕರಿಗೆ ಘಟಿಕೋತ್ಸವದ ಶಿಷ್ಟಾಚಾರವೇ ಗೊತ್ತಿಲ್ಲ ಎಂದು ಗುನುಗುತ್ತಿದ್ದರೆ, ಶಾಸಕ ಯಾಸೀರಖಾನ್ ಪಠಾಣ ಬೆಂಬಲಿಗರು ಕುಲಪತಿ ಕೊಠಡಿಗೆ ನುಗ್ಗಿ ಅಲ್ಲೂ ದರ್ಪ ಮೆರೆದರು. ವೇದಿಕೆ ಮೇಲಿದ್ದ ಸಚಿವರು ವಿಷಯ ತಿಳಿದು ಕುಳಿತಲ್ಲಿಂದಲೇ ಮೊಬೈಲ್ ಕರೆ ಮಾಡಿ ಪಠಾಣಗೆ ಶಿಷ್ಟಾಚಾರದ ಪಾಠ ಬೋಧಿಸಿದರು.
ನಮ್ಮ ಸಚಿವರು ವಿವಿಗೆ ಬಂದಿದ್ದಾರೆ ಎಂದು ನಾನು ಬಂದಿದ್ದೆ. ಆಮಂತ್ರಣ ಪತ್ರಿಕೆಯಲ್ಲಿ ಶಾಸಕರ ಹೆಸರು ಸೇರಿಸಿಲ್ಲ, ವೇದಿಕೆಗೆ ಆಹ್ವಾನಿಸಲಿಲ್ಲ ಎಂಬ ಕುರಿತು ನಮ್ಮ ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿ ಘೋಷಣೆ ಕೂಗಿದರು. ಕೆಲ ನಿಯಮಗಳು ನನಗೆ ಗೊತ್ತಿಲ್ಲ. ಆ ಬಗ್ಗೆ ತಿಳಿದುಕೊಳ್ಳುತ್ತೇನೆ ಎಂದು ಶಾಸಕ ಯಾಸೀರಖಾನ ಪಠಾಣ ಹೇಳಿದರು.