ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಎರಡು ಹೊಸ ಟ್ರ್ಯಾಕ್‌ಗಳನ್ನು ಸೇರಿಸಲು ಬೆಂಗಳೂರು ಅಭಿವೃದ್ಧಿ (ಬಿಡಿಎ) ಕಾಮಗಾರಿಯನ್ನು ಆರಂಭಿಸುವ ಹಿನ್ನೆಲೆಯಲ್ಲಿ ಹೆಬ್ಬಾಳ ಮೇಲ್ಸೇತುವೆಯಲ್ಲಿ ಏ.17ರಿಂದ ನಾಲ್ಕು ತಿಂಗಳು ತಾತ್ಕಾಲಿಕವಾಗಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಸಾರ್ವಜನಿಕರ ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಪೊಲೀಸರು ಸೂಚಿಸಿದ್ದಾರೆ.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯುಕ್ತ ದಯಾನಂದ್ ಅವರು, ಹೆಬ್ಬಾಳ ಮೇಲ್ಸೇತುವೆಗೆ ಕೆ.ಆರ್.ಪುರ ಲೂಪ್ ಸೇರುವ ಮುಖ್ಯ ಟ್ರ್ಯಾಕ್ ಬಳಿ ಎರಡು ಸ್ಪ್ಯಾನ್‌ಗಳನ್ನು ತೆರವುಗೊಳಿಸಿ ಹೊಸದಾಗಿ ಎರಡು ಟ್ರ್ಯಾಕ್‌ಗಳನ್ನು ಸೇರಿಸುವ ಯೋಜನೆಯನ್ನು ಬಿಡಿಎ ಕೈಗೆತ್ತಿಕೊಂಡಿದೆ ಎಂದರು. ಈ ಹಿನ್ನೆಲೆಯಲ್ಲಿ ಕೆ.ಆರ್,ಪುರ ಲೂಪ್‌ನಲ್ಲಿ ನಾಲ್ಕು ತಿಂಗಳವರೆಗೆ ವಾಹನ ಸಂಚಾರ ನಿಧಾನವಾಗಲಿದೆ. ಈ ಮಾರ್ಗದಲ್ಲಿ ಸಾಗುವ ವಾಹನಗಳು ಪರ್ಯಾಯ ಹಾದಿಯಲ್ಲಿ ಸಂಚರಿಸಬೇಕು ಎಂದು ಮನವಿ ಮಾಡಿದರು.ಬದಲಾದ ಮಾರ್ಗ
-ಹೆಬ್ಬಾಳ ಮೇಲ್ಸೇತುವೆ ಕಡೆಗೆ ಸಾಗುವ ವಾಹನಗಳ ಪೈಕಿ ದ್ವಿ ಚಕ್ರ ವಾಹನಗಳ ಹೊರತುಪಡಿಸಿ ಉಳಿದ ವಾಹನಗಳಿಗೆ ಕೆ.ಆರ್.ಪುರ ಅಪ್ ರ್ಯಾಂಪ್ ಮುಚ್ಚಲಾಗಿದೆ.-ನಾಗವಾರ (ಹೊರ ವರ್ತುಲ ರಸ್ತೆ) ಕಡೆಯಿಂದ ವಾಹನಗಳ ಚಾಲಕರು ಹೆಬ್ಬಾಳ ಸರ್ಕಲ್ ಮೇಲ್ಸೇತುವೆ ಕೆಳಗಿನಿಂದ ಬಲ ತಿರುವು ಪಡೆದು ಕೊಡಿಗೇಹಳ್ಳಿ ಜಂಕ್ಷನ್ ಬಳಿ ಯೂ ಟರ್ನ್ ಪಡೆದು ಸರ್ವಿಸ್ ರಸ್ತೆ ಹಾದು ಹೆಬ್ಬಾಳ ಮೇಲ್ಸೇತುವೆ ರ್ಯಾಂಪ್ ಮೂಲಕ ನಗರದ ಕಡೆಗೆ ಚಲಿಸಬಹುದು.
-ಕೆ.ಆರ್.ಪುರ, ನಾಗವಾರ ಕಡೆಯಿಂದ ನಗರದ ಕಡೆಗೆ ಬರುವ ವಾಹನಗಳ ಚಾಲಕರು ಐಒಸಿ-ಮುಕುಂದ ಚಿತ್ರಮಂದಿರ ರಸ್ತೆ, ಲಿಂಗರಾಜಪುರ ಮೇಲ್ಸೇತುವೆ ಮಾರ್ಗ ಹಾಗೂ ನಾಗವಾರ ಟ್ಯಾನರಿ ರಸ್ತೆ ಮೂಲಕ ನಗರ ಕಡೆಗೆ ತೆರಳಬೇಕು.-ಹೆಗಡೆನಗರ-ಥಣಿಸಂದ್ರ ಕಡೆಯಿಂದ ಬರುವ ವಾಹನಗಳು ಜಿಕೆವಿಕೆ -ಜಕ್ಕೂರು ರಸ್ತೆ ಮೂಲಕ ನಗರ ಪ್ರವೇಶಿಸಬಹುದು.
-ಕೆ.ಆರ್.ಪುರ ಕಡೆಯಿಂದ ಯಶವಂತಪುರ ಕಡೆಗೆ ಚಲಿಸುವ ವಾಹನಗಳು ಹೆಬ್ಬಾಳ ಮೇಲ್ಸೇತುವೆ ಕೆಳಗಡೆ ನೇರವಾಗಿ ಬಿಇಎಲ್ ಸರ್ಕಲ್ ತಲುಪಿ ಎಡ ತಿರುವು ಪಡೆಯಬೇಕು. ಸದಾಶಿವನಗರ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಐಐಎಸ್‌ಸಿ ಮುಖಾಂತರ ತೆರಳಿ.-ಕೆ.ಆರ್.ಪುರ, ಹೆಣ್ಣೂರು, ಎಚ್‌ಬಿಆರ್ ಲೇಔಟ್, ಕೆ.ಜಿ.ಹಳ್ಳಿ, ಬಾಣಸವಾಡಿ ಕಡೆಗಳಿಂದ ಏರ್‌ಪೋರ್ಟ್ ಕಡೆ ಸಾಗುವ ವಾಹನಗಳು ಹೆಣ್ಣೂರು-ಬಾಗಲೂರು ರಸ್ತೆಯನ್ನು ಬಳಸಬಹುದು.
ಹೆಬ್ಬಾಳ ಮೇಲ್ಸೇತುವೆಯಲ್ಲಿ ಸಂಚಾರ ವ್ಯವಸ್ಥೆ ಸುಧಾರಣೆಗೆ ಬಿಡಿಎ ಕಾಮಗಾರಿ ಕೈಗೆತ್ತಿಕೊಂಡಿದೆ. ಈ ಕಾಮಗಾರಿ ಪೂರ್ಣಗೊಳ್ಳುವವರೆಗೆ ಪರ್ಯಾಯ ಮಾರ್ಗವನ್ನು ಜನರು ಬಳಸಬೇಕು. ತಾತ್ಕಾಲಿಕ ವ್ಯವಸ್ಥೆ ಸಾರ್ವಜನಿಕರು ಸಹಕರಿಸಬೇಕು.-ಬಿ.ದಯಾನಂದ್, ಪೊಲೀಸ್ ಆಯುಕ್ತ.