ಮೂಲ ಸೌಲಭ್ಯಗಳಿದ್ದರೆ ಮಾತ್ರವೇ ಹೊಸ ಬಡಾವಣೆಗಳಿಗೆ ಅನುಮತಿ

| Published : Aug 07 2025, 12:45 AM IST

ಮೂಲ ಸೌಲಭ್ಯಗಳಿದ್ದರೆ ಮಾತ್ರವೇ ಹೊಸ ಬಡಾವಣೆಗಳಿಗೆ ಅನುಮತಿ
Share this Article
  • FB
  • TW
  • Linkdin
  • Email

ಸಾರಾಂಶ

ಈ ಹಿಂದೆ ಪಟ್ಟಣದಲ್ಲಿ ಖಾಸಗಿಯವರು ಅಭಿವೃದ್ಧಿಪಡಿಸಿದ ಬಹುತೇಕ ಬಡಾವಣೆಗಳಲ್ಲಿ ಮೂಲಸೌಲಭ್ಯಗಳು ಇನ್ನೂ ಮರೀಚಿಕೆಯಾಗಿವೆ. ಸಮರ್ಪಕ ರಸ್ತೆ, ನೀರು, ಚರಂಡಿ, ತ್ಯಾಜ್ಯ ನಿರ್ವಹಣೆ, ಬೀದಿ ದೀಪ ಮೊದಲಾದವುಗಳನ್ನು ವ್ಯವಸ್ಥಿತವಾಗಿ ಕಲ್ಪಿಸುವ ಕಾರ್ಯ ನಡೆದಿಲ್ಲ. ಪಟ್ಟಣದಲ್ಲಿ ವಸತಿ ಪ್ರದೇಶವು ವಿಸ್ತೀರ್ಣವಾಗಿ ಬೆಳೆಯುತ್ತಿದ್ದು, ಮೂಲಭೂತ ಸೌಕರ್ಯಗಳಿರುವ ಅಧಿಕೃತ ವಸತಿ ಬಡಾವಣೆಗಳಿಗೆ ಮಾತ್ರ ಪುರಸಭೆಯಿಂದ ಅನುಮತಿ ನೀಡಲಾಗುವುದು ಎಂದರು. ಮೂಲ ಸೌಕರ್ಯಗಳನ್ನು ನಿರ್ಮಿಸಿದರೆ ಮಾತ್ರ ಪುರಸಭೆಯಿಂದ ಅನುಮತಿ ನೀಡಲಾಗುವುದೆಂದು ಶಾಸಕ ಸಿ.ಎನ್ ಬಾಲಕೃಷ್ಣ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ನೂತನವಾಗಿ ನಿರ್ಮಿಸುವ ಬಡಾವಣೆಗಳಲ್ಲಿ ಮೂಲ ಸೌಕರ್ಯಗಳನ್ನು ನಿರ್ಮಿಸಿದರೆ ಮಾತ್ರ ಪುರಸಭೆಯಿಂದ ಅನುಮತಿ ನೀಡಲಾಗುವುದೆಂದು ಶಾಸಕ ಸಿ.ಎನ್ ಬಾಲಕೃಷ್ಣ ತಿಳಿಸಿದರು.

ಪಟ್ಟಣದ ರೇಣುಕಾ ನಗರದಲ್ಲಿ ಅಲ್ಪಸಂಖ್ಯಾತರ ನೂತನವಾಗಿ ಕೋಶದ ಅನುದಾನದಲ್ಲಿ ನಿರ್ಮಿಸಿರುವ ಕಾಂಕ್ರೀಟ್ ರಸ್ತೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಈ ಹಿಂದೆ ಪಟ್ಟಣದಲ್ಲಿ ಖಾಸಗಿಯವರು ಅಭಿವೃದ್ಧಿಪಡಿಸಿದ ಬಹುತೇಕ ಬಡಾವಣೆಗಳಲ್ಲಿ ಮೂಲಸೌಲಭ್ಯಗಳು ಇನ್ನೂ ಮರೀಚಿಕೆಯಾಗಿವೆ. ಸಮರ್ಪಕ ರಸ್ತೆ, ನೀರು, ಚರಂಡಿ, ತ್ಯಾಜ್ಯ ನಿರ್ವಹಣೆ, ಬೀದಿ ದೀಪ ಮೊದಲಾದವುಗಳನ್ನು ವ್ಯವಸ್ಥಿತವಾಗಿ ಕಲ್ಪಿಸುವ ಕಾರ್ಯ ನಡೆದಿಲ್ಲ. ಪಟ್ಟಣದಲ್ಲಿ ವಸತಿ ಪ್ರದೇಶವು ವಿಸ್ತೀರ್ಣವಾಗಿ ಬೆಳೆಯುತ್ತಿದ್ದು, ಮೂಲಭೂತ ಸೌಕರ್ಯಗಳಿರುವ ಅಧಿಕೃತ ವಸತಿ ಬಡಾವಣೆಗಳಿಗೆ ಮಾತ್ರ ಪುರಸಭೆಯಿಂದ ಅನುಮತಿ ನೀಡಲಾಗುವುದು ಎಂದರು. ಜಿಲ್ಲೆ ಹೊರತುಪಡಿಸಿದರೆ ತಾಲೂಕು ಅತಿ ವೇಗವಾಗಿ ಬೆಳೆಯುತ್ತಿದ್ದು, ಭವಿಷ್ಯದ ದೃಷ್ಟಿಯಿಂದ ಪಟ್ಟಣದಾದ್ಯಂತ ವಿದ್ಯುತ್ ಪೂರೈಕೆಯ ಭೂಗತ ಕೇಬಲ್ ಅಳವಡಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುಮೋದನೆ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಅನುಮೋದನೆ ಸಿಗುವ ನಿರೀಕ್ಷೆ ಇದೆ ಎಂದರು.

ಪಟ್ಟಣದಾದ್ಯಂತ ಕುಡಿಯುವ ನೀರು ಹಾಗೂ ವಿದ್ಯುತ್ ಸರಬರಾಜಿಗೆ ಅಗತ್ಯ ಕ್ರಮ ಕೈಗೊಂಡಿದ್ದು, ಶೇ. ೮೦ರಷ್ಟು ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಲಾಗುವುದು. ಬಾಕಿ ಉಳಿದಿರುವ ಸಮುದಾಯ ಭವನ ನವೀಕರಣ ಕಾಮಗಾರಿಗೆ ಮುಂದಿನ ದಿನಗಳಲ್ಲಿ ಆದ್ಯತೆ ನೀಡಲಾಗುವುದು. ರೇಣುಕಾ ನಗರದಲ್ಲಿ ಪೌರಕಾರ್ಮಿಕರೇ ಹೆಚ್ಚಾಗಿ ವಾಸಿಸುತ್ತಿದ್ದು ಪೌರಕಾರ್ಮಿಕರಿಗೆ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ದೊಡ್ಡಮ್ಮದೇವಿಯ ದೇವಸ್ಥಾನದ ನಿರ್ಮಾಣಕ್ಕೆ ಅನುದಾನದ ಲಭ್ಯತೆ ಮೇಲೆ ಮುಂದಿನ ದಿನಗಳಲ್ಲಿ ಸಹಕಾರ ನೀಡಲಾಗುವುದು. ನೂತನವಾಗಿ ನಿರ್ಮಾಣಗೊಂಡಿರುವ ಈ ರಸ್ತೆಯು ಬಿ.ಎಂ. ರಸ್ತೆಯಿಂದ ಬಾಗೂರು ರಸ್ತೆಗೆ ಸಂಪರ್ಕಿಸುವ ರಸ್ತೆಯಾಗಿದ್ದು, ಈ ಬಡಾವಣೆಗಳ ನಾಗರಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷ ಸಿ.ಎನ್. ಮೋಹನ್, ಉಪಾಧ್ಯಕ್ಷೆ ಕವಿತಾ ರಾಜು, ಸ್ಥಾಯಿ ಸಮಿತಿ ಅಧ್ಯಕ್ಷ ಧರಣೇಶ್, ಪುರಸಭಾ ಸದಸ್ಯರಾದ ಯೋಗೇಶ್, ರಾಣಿಕೃಷ್ಣ, ರಾಮು, ಇಲಿಯಾಸ್, ಟಿಎಟಿಸಿಎಂಎಸ್ ಅಧ್ಯಕ್ಷ ಅನಿಲ್ ಮರಗೂರು, ಮುಖಂಡರಾದ ಬ್ರೆಡ್ ರಾಜಣ್ಣ, ನಾಗರಾಜು, ಗಾರೆಕೃಷ್ಣ, ಹರೀಶ್ ಸೇರಿದಂತೆ ಇತರರು ಭಾಗವಹಿಸಿದ್ದರು.