ಪತ್ರಿಕಾ ರಂಗದಲ್ಲಿ ಸುಮಾರು ಮೂರು ದಶಕಗಳ ಸುದೀರ್ಘ ಸೇವೆ ಸಲ್ಲಿಸಿದ್ದ ಹಿರಿಯ ಪತ್ರಕರ್ತರಾದ ಸೀತಾರಾಮ ಶಾಸ್ತ್ರಿ (60) ಹೃದಯಾಘಾತದಿಂದ ನಿಧನರಾಗಿದ್ದ ಹಿನ್ನೆಲೆಯಲ್ಲಿ ಪಟ್ಟಣದ ಶ್ರೀನಿವಾಸ ನಗರದ ನಿವಾಸಕ್ಕೆ ತಾಲೂಕಿನ ಅಪಾರ ಸಂಖ್ಯೆಯ ಪತ್ರಕರ್ತರು ತೆರಳಿ ಆತ್ಮಕ್ಕೆ ಶಾಂತಿ ಕೋರಿದರು.

ಕನ್ನಡಪ್ರಭವಾರ್ತೆ ಪಾವಗಡ

ಪತ್ರಿಕಾ ರಂಗದಲ್ಲಿ ಸುಮಾರು ಮೂರು ದಶಕಗಳ ಸುದೀರ್ಘ ಸೇವೆ ಸಲ್ಲಿಸಿದ್ದ ಹಿರಿಯ ಪತ್ರಕರ್ತರಾದ ಸೀತಾರಾಮ ಶಾಸ್ತ್ರಿ (60) ಹೃದಯಾಘಾತದಿಂದ ನಿಧನರಾಗಿದ್ದ ಹಿನ್ನೆಲೆಯಲ್ಲಿ ಪಟ್ಟಣದ ಶ್ರೀನಿವಾಸ ನಗರದ ನಿವಾಸಕ್ಕೆ ತಾಲೂಕಿನ ಅಪಾರ ಸಂಖ್ಯೆಯ ಪತ್ರಕರ್ತರು ತೆರಳಿ ಆತ್ಮಕ್ಕೆ ಶಾಂತಿ ಕೋರಿದರು. ಪಾವಗಡ ತಾಲೂಕಿನ ಪಳವಳ್ಳಿ ಗ್ರಾಮದವರಾದ ಇವರು,ಪಾವಗಡ ಹಾಗೂ ಆಂಧ್ರದ ಹಿಂದೂಪುರದಲ್ಲಿ ಈನಾಡು,ಕನ್ನಡ ಪ್ರಭ ಸೇರಿದಂತೆ ಹಲವು ಪ್ರತಿಷ್ಠಿತ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದರು. ಬಳಿಕ ಬೆಂಗಳೂರಿನ ವಿಧಾನಸೌಧದ ಮೊಗಸಾಲೆಯಲ್ಲಿಯೂ ಕೆಲಸ ನಿರ್ವಹಿಸಿ,ಕಳೆದ ಮೂರು ವರ್ಷಗಳಿಂದ ಪಾವಗಡದಲ್ಲಿ ವಿಶಾಲ ಪ್ರಭ ಪತ್ರಿಕೆಯಲ್ಲಿ ಸುದ್ದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಸುದ್ದಿ ಸಿದ್ಲಿಂಗು” ಎಂಬ ಫೇಸ್ಬುಕ್ ಪುಟದ ಮೂಲಕ ಪಾವಗಡದ ಸ್ಥಳೀಯ ಸಮಸ್ಯೆಗಳು, ಘಟನೆಗಳು ಹಾಗೂ ಜನಜೀವನದ ವಿಷಯಗಳನ್ನು ಸೂಕ್ಷ್ಮವಾಗಿ ಮತ್ತು ವಿವರಣಾತ್ಮಕವಾಗಿ ಜನರಿಗೆ ತಲುಪಿಸುವಂತೆ ನಿರ್ವಹಿಸಿ ಮೆಚ್ಚುಗೆ ಪಡೆದಿದ್ದರು. ಬುಧವಾರ ಬೆಳಿಗ್ಗೆ ವಾಕಿಂಗ್‌ಗೆ ತೆರಳಿದ ವೇಳೆ ಅಚಾನಕ್ ಹೃದಯಾಘಾತವಾಗಿದ್ದು,ತಕ್ಷಣವೇ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು,ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ. ಮೃತರಿಗೆ ಪತ್ನಿ, ಪುತ್ರಿ ಹಾಗೂ ವಯೋವೃದ್ಧ ತಾಯಿ ಇದ್ದಾರೆ. ಅವರ ಪಾರ್ಥಿವ ಶರೀರವನ್ನು ಬ್ರಾಹ್ಮಣ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಂತ್ಯ ಸಂಸ್ಕಾರ ನೆರೆವೇರಿಸಲಾಯಿತು.

ವಿಷಯ ತಿಳಿಯುತ್ತಿದ್ದಂತೆ, ಸರ್ವಧರ್ಮ ಶಾಂತಿ ಪೀಠದ ಶ್ರೀ ರಾಮಮೂರ್ತಿ ಸ್ವಾಮೀಜಿ, ವಿಶಾಲಪ್ರಭ ಸಂಪಾದಕ ಸೊಗಡು ವೆಂಕಟೇಶ್‌, ಪತ್ರಕರ್ತರಾದ ಗೋರಸ್ಮಾವು ಹನುಮಂತರಾಯಪ್ಪ, ಸತ್ಯ ಲೋಕೇಶ್, ಎಸ್‌.ಎನ್‌.ಪ್ರಸನ್ನಮೂರ್ತಿ, ಮೈಕಲ್‌ ,ಓ. ರಾಮಾಂಜನೇಯಲು, ನಾಗೇಂದ್ರ, ವಡ್ಡೆ ಶ್ರೀನಿವಾಸಲು ಇಮ್ರಾನ್‌ ಉಲ್ಲಾ, ಸೂರ್ಯ ಪ್ರಕಾಶ್‌, ನರಸಿಂಹಲು ಜಿ.ಎ.ವೆಂಕಟೇಶ್‌ ಇತರರು ಅಂತಿಮ ದರ್ಶನ ಪಡೆದರು.