ಸಾರಾಂಶ
ತುರುವೇಕೆರೆ: ತಾಲೂಕಿನ ಹಿರಿಯ ಪತ್ರಿಕಾ ವಿತರಕ ಹಾಗೂ ಅಯೋಧ್ಯೆ ಹೋರಾಟದಲ್ಲಿ ಪಾಲ್ಗೊಂಡಿದ್ದ ಕರ ಸೇವಕರಾದ ಮಾಚೇನಹಳ್ಳಿ ಶಶಿ (60) ಶನಿವಾರ ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾದರು. ಇವರು ಕಳೆದ 30 ವರ್ಷಗಳಿಂದಲೂ ಪತ್ರಿಕೆಯ ವಿತರಕರಾಗಿ ಸೇವೆ ಸಲ್ಲಿಸುತ್ತಿದ್ದರು. ಶುಕ್ರವಾರ ರಾತ್ರಿ ಹೊಟ್ಟೆ ನೋವೆಂದು ಕುಟುಂಬಸ್ಥರಲ್ಲಿ ಹೇಳಿದ್ದರು. ಮಧ್ಯರಾತ್ರಿ ವೇಳೆಗೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಬೇಕು ಎನ್ನುವಷ್ಟರಲ್ಲಿ ಅವರು ಹೃದಯಾಘಾತಕ್ಕೆ ತುತ್ತಾಗಿ ಕೊನೆಯುಸಿರೆಳೆದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಇವರು ಆರ್ ಎಸ್ ಎಸ್ ನ ಕಟ್ಟಾಳು ಆಗಿದ್ದರು. ರಾಮಜನ್ಮಭೂಮಿ ಹೋರಾಟದ ವೇಳೆ ಅವರು ಕರಸೇವಕರಾಗಿ ಆಯೋಧ್ಯೆಗೆ ತೆರಳಿದ್ದರು. ಬಿಜೆಪಿಯ ಸಕ್ರಿಯ ಸದಸ್ಯರೂ ಆಗಿದ್ದರು. ಕೆಲ ಕಾಲ ಇವರು ದೈಹಿಕ ಶಿಕ್ಷಣ ಶಿಕ್ಷಕರಾಗಿಯೂ ಖಾಸಗಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಇವರ ನಿಧನಕ್ಕೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ. ಶಶಿಯವರ ಅಂತ್ಯ ಸಂಸ್ಕಾರವನ್ನು ಅವರ ಸ್ವಗ್ರಾಮವಾದ ಮಾಚೇನಹಳ್ಳಿಯಲ್ಲಿ ಇಂದು ನೆರವೇರಿಸಲಾಯಿತು.