ಸಾರಾಂಶ
ಕನ್ನಡಪ್ರಭ ವಾರ್ತೆ ಅಫಜಲ್ಪುರ
ಇದೇ ಮೇ 7ರಂದು ನಡೆಯುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ದೊಡ್ಮನಿ ಅವರಿಗೆ ಮತ ನೀಡಿ ಗೆಲ್ಲಿಸಬೇಕು. ಕಾಂಗ್ರೆಸ್ ಗೆದ್ದರೆ ಮಾತ್ರ ಮುಂದೆ ಚುನಾವಣೆಗಳು ಬರುತ್ತವೆ, ಬಿಜೆಪಿ ಗೆದ್ದರೆ ಮುಂದೆ ಚುನಾವಣೆಗಳು ಇರುವುದಿಲ್ಲ, ಸಂವಿಧಾನ ಬದಲಾವಣೆಗೆ ಹುನ್ನಾರ ನಡೆಸುತ್ತಿದ್ದಾರೆ ಎಂದು ಶಾಸಕ ಎಂ.ವೈ. ಪಾಟೀಲ ಹೇಳಿದರು.ಅವರು ತಾಲೂಕಿನ ಮಾಶಾಳ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿ, ಬಿಜೆಪಿಯವರು ಎರಡನೇಯ ಬ್ರಿಟಿಷರಿದ್ದಂತೆ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಮಾಲೀಕರು. ದೇಶದ ರಕ್ಷಣೆ ಮತ್ತು ಸಂವಿಧಾನ ರಕ್ಷಣೆಗಾಗಿ ಕಾಂಗ್ರೆಸ್‌ಗೆ ಮತ ಹಾಕಬೇಕು, ಯುವಕರು ಕೇಸರಿ ಧ್ವಜ ಹಿಡಿದು ಭಾವನಾತ್ಮಕವಾಗಿ ಮಾತನಾಡುತ್ತಿದ್ದಾರೆ.
ಆದರೆ, ಪಾಲಕರು ಮನೆಯಲ್ಲಿ ನಿಮ್ಮ ಮಕ್ಕಳಿಗೆ ದೇಶದ ಸಂವಿಧಾನ, ಕಾಂಗ್ರೆಸ್ ಇತಿಹಾಸ ಬಗ್ಗೆ ಮನವರಿಕೆ ಮಾಡಿಕೊಡಬೇಕು, ಬೂತ್ ಗೆದ್ದರೆ ದೇಶ ಗೆದ್ದಂತೆ. ಪ್ರತಿಯೊಬ್ಬರೂ ನಿಮ್ಮ ಬೂತ್ ಮಟ್ಟದಲ್ಲಿ ಲೀಡ್ ಬರುವಂತೆ ಕೆಲಸ ಮಾಡಬೇಕು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಡವರ ಪರವಾಗಿದೆ ಎಂದು ಹೇಳಿದರು.ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಜೆ.ಎಂ. ಕೊರಬು ಮಾತನಾಡಿ, ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಡಾ.ಮಲ್ಲಿಕಾರ್ಜುನ ಖರ್ಗೆ ಅವರ ಸೋಲು ಇವತ್ತಿಗೂ ಆ ನೋವು ಕಾಡುತ್ತಿದೆ. ಕಳೆದ ಬಾರಿ ಬಿಜೆಪಿಗೆ 37 ಸಾವಿರ ಮತಗಳ ಲೀಡ್‌ಗಳನ್ನು ನೀಡಲಾಗಿತ್ತು. ಅದನ್ನು ಅಳಿಸಿ ಹಾಕಿ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಲೀಡ್ ನೀಡಬೇಕಾಗಿದೆ. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ, 5 ಗ್ಯಾರಂಟಿಗಳನ್ನು ನೀಡುವ ಮೂಲಕ ಬಡಜನರಿಗೆ ಅನುಕೂಲ ಮಾಡಿಕೊಟ್ಟಿದೆ. ಆದರೆ ಬಿಜೆಪಿ ಅಧಿಕಾರದಲ್ಲಿರುವ ಯಾವುದೇ ರಾಜ್ಯದಲ್ಲಿ ಬಡಜನರಿಗೆ ಅನುಕೂಲ ಮಾಡಿಕೊಡುವ ಯಾವುದೇ ಯೋಜನೆಗಳು ಜಾರಿಗೆ ತಂದಿಲ್ಲ ಎಂದರು.
ಈ ಸಂದರ್ಭದಲ್ಲಿ ಜ್ಞಾನೇಶ್ವರಿ ಪಾಟೀಲ್, ಶೀವು ಪ್ಯಾಟಿ, ಖೇಮಸಿಂಗ್ ರಾಠೋಡ, ಭೀಮರಾವ್ ನಿಂಬರ್ಗಿ, ಮಕ್ಬೂಲ್ ಶೇಖ, ಶಿವರುದ್ರಪ್ಪ ಅವಟೆ, ಅಣ್ಣಪ್ಪ ಶಿವಗೊಂಡ, ದತ್ತು ವಗ್ಗೆ, ಮರೇಪ್ಪ ಮುಗಳಿ ಸೇರಿದಂತೆ ಇತರರಿದ್ದರು.