ಮಂಗಳೂರು: ರಾಷ್ಟ್ರೀಯ ಹೆದ್ದಾರಿ 169ರ ಸಾಣೂರು- ಬಿಕರ್ನಕಟ್ಟೆ ವರೆಗಿನ ಚತುಷ್ಪಥ ಕಾಮಗಾರಿ ಪ್ರಗತಿಯಲ್ಲಿದ್ದು, ಇದೀಗ ಬನ್ನಡ್ಕ ವ್ಯಾಪ್ತಿಯಲ್ಲಿ ಸರ್ವೀಸ್ ರಸ್ತೆ ನಿರ್ಮಾಣ ಸೇರಿದಂತೆ 5.83 ಕೋಟಿ ರು. ವೆಚ್ಚದ ಇತರ ಕಾಮಗಾರಿಗಳಿಗೆ ಹೆದ್ದಾರಿ ಪ್ರಾಧಿಕಾರ ತಾತ್ವಿಕ ಅನುಮೋದನೆ ನೀಡಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.

ಸ್ಥಳೀಯ ನಿವಾಸಿಗಳು ಹಾಗೂ ಸಂಘ-ಸಂಸ್ಥೆಗಳ ಮನವಿಗೆ ಸ್ಪಂದಿಸಿ, ಬನ್ನಡ್ಕ ಪ್ರದೇಶದಲ್ಲಿ ಕೈಬಿಡಲಾಗಿದ್ದ ಸರ್ವೀಸ್ ರಸ್ತೆ ಹಾಗೂ ವಾಮಂಜೂರು ಜಂಕ್ಷನ್ ಬಳಿ ನೂತನ ಪಾದಚಾರಿ ಮೇಲ್ಸೇತುವೆ ನಿರ್ಮಾಣಕ್ಕೆ ಈಗಾಗಲೇ ತಾತ್ವಿಕ ಅನುಮೋದನೆ ದೊರಕಿದೆ. ಈ ಯೋಜನೆಯಡಿ ಒಟ್ಟು 5,83,86,051 ರು. ವೆಚ್ಚದ ಕಾಮಗಾರಿಯಡಿ ಬನ್ನಡ್ಕ ವ್ಯಾಪ್ತಿಯಲ್ಲಿ ಬಿಟ್ಟು ಹೋಗಿರುವ 700 ಮೀಟರ್ ಸರ್ವೀಸ್ ರಸ್ತೆ ಮತ್ತು ಚರಂಡಿ ನಿರ್ಮಾಣ ಹಾಗೂ ಬಾಕ್ಸ್ ಕಲ್ವರ್ಟ್‌ಗಳ ಅಗಲೀಕರಣ ಕಾಮಗಾರಿಗಳು( ಒಟ್ಟು 4.12 ಕೋಟಿ ರು.) ಒಳಗೊಂಡಿವೆ. ಇದರೊಂದಿಗೆ ವಾಮಂಜೂರು ಚರ್ಚ್, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಆಸುಪಾಸಿನ ಪ್ರದೇಶದ ನಾಗರಿಕರು ಸುರಕ್ಷಿತವಾಗಿ ರಸ್ತೆ ದಾಟಲು ವಾಮಂಜೂರು ಸಮೀಪ ಸುಸಜ್ಜಿತವಾದ ಪಾದಚಾರಿ ಮೇಲ್ಸೇತುವೆಯನ್ನು(1.7 ಕೋ.ರು.) ನಿರ್ಮಿಸಲಾಗುವುದು. ಈ ಸಂಬಂಧ ಎನ್ಎಚ್ಐಎ ಬೆಂಗಳೂರು ಪ್ರಾದೇಶಿಕ ಕಚೇರಿ ಈ ಚತುಷ್ಪಥ ನಿರ್ಮಾಣದ ಗುತ್ತಿಗೆ ಸಂಸ್ಥೆ ದಿಲೀಪ್ ಬಿಲ್ಡ್‌ಕಾನ್‌ಗೆ ಅಧಿಕೃತವಾಗಿ ಪತ್ರ ರವಾನಿಸಿದೆ ಎಂದು ಸಂಸದರು ತಿಳಿಸಿದ್ದಾರೆ.ಬನ್ನಡ್ಕದಲ್ಲಿ ಸರ್ವೀಸ್ ರಸ್ತೆ ಇಲ್ಲದೆ ಅಪಘಾತಗಳು ಸಂಭವಿಸುತ್ತಿರುವ ಬಗ್ಗೆ ಸ್ಥಳೀಯರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅವರೊಂದಿಗೆ ಕ್ಯಾ. ಬ್ರಿಜೇಶ್ ಚೌಟ ಅವರು ಇತ್ತೀಚೆಗೆ ಸ್ಥಳ ಪರಿಶೀಲನೆ ನಡೆಸಿ, ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದು ಸರ್ವೀಸ್‌ ರಸ್ತೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದರು. ಸಂಸದರ ಸೂಚನೆಯ ಮೇರೆಗೆ ರಸ್ತೆ ನಿರ್ಮಾಣದ ವಿವರವಾದ ಅಂದಾಜು ವೆಚ್ಚದ ಪ್ರಸ್ತಾವನೆಯನ್ನು ತಕ್ಷಣವೇ ಸಲ್ಲಿಸುವಂತೆ ಉಸ್ತುವಾರಿ ಸಂಸ್ಥೆಗೆ ಪ್ರಾಧಿಕಾರ ಸೂಚಿಸಿತ್ತು.