ಅಂಬಲಪಾಡಿ ಯಕ್ಷಗಾನ ಮಂಡಳಿಯಿಂದ ನಿಡಂಬೂರು ಪ್ರಶಸ್ತಿ ಪ್ರದಾನ

| Published : Feb 05 2024, 01:53 AM IST

ಅಂಬಲಪಾಡಿ ಯಕ್ಷಗಾನ ಮಂಡಳಿಯಿಂದ ನಿಡಂಬೂರು ಪ್ರಶಸ್ತಿ ಪ್ರದಾನ
Share this Article
  • FB
  • TW
  • Linkdin
  • Email

ಸಾರಾಂಶ

ನಿಡಂಬೂರುಶ್ರೀ ಪ್ರಶಸ್ತಿಯನ್ನು ನಿವೃತ್ತ ಮುಖ್ಯ ಶಿಕ್ಷಕ ಜಯಕರ ಶೆಟ್ಟಿಯವರಿಗೆ, 10 ಸಾವಿರ ರು. ನಗದನ್ನೊಳಗೊಂಡ ನಿಡಂಬೂರು ಬೀಡು ಬಲ್ಲಾಳ ಪ್ರಶಸ್ತಿಯನ್ನು ಶ್ರೀ ಕರ್ನಾಟಕ ಕಲಾದರ್ಶಿನಿ ತಂಡಕ್ಕೆ ನೀಡಿ ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಅಂಬಲಪಾಡಿಯ ಶ್ರೀ ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾಮಂಡಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಯೋಗದೊಂದಿಗೆ ಅಂಬಲಪಾಡಿ ಕಂಬ್ಳಕಟ್ಟ ಶ್ರೀ ಜನಾರ್ದನ ಮಂಟಪದಲ್ಲಿ ೬೬ನೇ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು.

ನಿ.ಬೀ. ಅಣ್ಣಾಜಿ ಬಲ್ಲಾಳ ಸ್ಮರಣಾರ್ಥ ಡಾ. ವಿಜಯ ಬಲ್ಲಾಳ ಪ್ರಾಯೋಜಕತ್ವದ, ಬೆಳ್ಳಿಯ ಫಲಕದೊಂದಿಗೆ ನಿಡಂಬೂರುಶ್ರೀ ಪ್ರಶಸ್ತಿಯನ್ನು ನಿವೃತ್ತ ಮುಖ್ಯ ಶಿಕ್ಷಕ ಜಯಕರ ಶೆಟ್ಟಿಯವರಿಗೆ, 10 ಸಾವಿರ ರು. ನಗದನ್ನೊಳಗೊಂಡ ನಿಡಂಬೂರು ಬೀಡು ಬಲ್ಲಾಳ ಪ್ರಶಸ್ತಿಯನ್ನು ಮೂರು ದಶಕಗಳಿಂದ ಬೆಂಗಳೂರಿನಲ್ಲಿ ಯಕ್ಷಗಾನದ ಪ್ರವರ್ಧಮಾನಕ್ಕಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಕರ್ನಾಟಕ ಕಲಾದರ್ಶಿನಿ ತಂಡಕ್ಕೆ ನೀಡಿ ಗೌರವಿಸಲಾಯಿತು. ಕಲಾದರ್ಶಿನಿ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ಸಾಸ್ತಾನ ಅವರು ಸ್ವೀಕರಿಸಿದರು.

ಕಿದಿಯೂರು ಜನಾರ್ದನ ಆಚಾರ್ಯ ಪ್ರಶಸ್ತಿಯನ್ನು ರಾಮಕೃಷ್ಣ ಮಂದಾರ್ತಿ, ಕಪ್ಪೆಟ್ಟು ಬಾಬು ಶೆಟ್ಟಿಗಾರ್ ಪ್ರಶಸ್ತಿಯನ್ನು ಕೃಷ್ಣಸ್ವಾಮಿ ಜೋಯಿಸ್ ಬ್ರಹ್ಮಾವರ ಹಾಗೂ ಕುತ್ಪಾಡಿ ಆನಂದ ಗಾಣಿಗ ಪ್ರಶಸ್ತಿಯನ್ನು ನಾಗಪ್ಪ ಹೊಳೆಮೊಗೆ ಇವರಿಗೆ ಪ್ರದಾನ ಮಾಡಲಾಯಿತು.ಡಾಕ್ಟರೇಟ್ ಪದವಿ ಪಡೆದ ಭ್ರಮರಿ ಶಿವಪ್ರಕಾಶ್ ಇವರನ್ನು ಅಭಿನಂದಿಸಲಾಯಿತು.

ಶಾಸಕ ಯಶಪಾಲ್ ಸುವರ್ಣ ಪ್ರಶಸ್ತಿ ಪ್ರದಾನ ಮಾಡಿ, ಯಕ್ಷಗಾನವನ್ನು ಉಳಿಸಿ ಬೆಳೆಸುವಲ್ಲಿ ಅಂಬಲಪಾಡಿ ಸಂಘದ ಕೊಡುಗೆ ಬಹಳ ಮಹತ್ತ್ವದ್ದು, ಹಿರಿಯ ಸಾಧಕರನ್ನು ವೇದಿಕೆಯಲ್ಲಿ ಅಭಿನಂದಿಸಲು ಸಿಕ್ಕಿದ ಅವಕಾಶ ನನ್ನ ಸೌಭಾಗ್ಯ ಎಂದರು. ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ. ವಿಜಯ ಬಲ್ಲಾಳ ಅಧ್ಯಕ್ಷತೆ ವಹಿಸಿದ್ದರು. ಅಂಬಲಪಾಡಿ ಸ್ಕ್ಯಾನಿಂಗ್ ಸೆಂಟರ್‌ನ ಮಾಲಕ ಡಾ. ನವೀನ್ ಬಲ್ಲಾಳ್ ಉಪಸ್ಥಿತರಿದ್ದರು. ಮಂಡಳಿಯ ಅಧ್ಯಕ್ಷ ಕೆ. ಅಜಿತ್ ಕುಮಾರ್ ಸ್ವಾಗತಿಸಿದರು. ಹಿರಿಯ ಸದಸ್ಯರಾದ ಮುರಲಿ ಕಡೆಕಾರ್ ಅಭಿನಂದನಾ ಮಾತುಗಳನ್ನಾಡಿದರು. ಕೋಶಾಧಿಕಾರಿ ಎ. ನಟರಾಜ ಉಪಾಧ್ಯಾಯ ನಿರ್ವಹಿಸಿದರು. ಪ್ರಶಾಂತ್‌ ಕುಮಾರ್‌ ವಂದಿಸಿದರು. ಕಾರ್ಯಕ್ರಮದ ಬಳಿಕ ಕೋಟ ನರಸಿಂಹ ತುಂಗರ ನಿರ್ದೇಶನದಲ್ಲಿ ಮಂಡಳಿಯ ಬಾಲ ಕಲಾವಿದರಿಂದ ಶಶಿಪ್ರಭಾ ಪರಿಣಯ ಹಾಗೂ ಕೆ. ಜೆ. ಗಣೇಶ್ ನಿರ್ದೇಶನದಲ್ಲಿ ಮಂಡಳಿಯ ಸದಸ್ಯರಿಂದ ಬಭ್ರುವಾಹನ ಕಾಳಗ ಯಕ್ಷಗಾನ ಪ್ರದರ್ಶನಗೊಂಡಿತು.