ನೈಸ್‌ ರಸ್ತೆಯಲ್ಲಿ ಅಪಘಾತಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾತ್ರಿ ಬೈಕ್ ಸಂಚಾರ ನಿಷೇಧ

| Published : Aug 03 2024, 01:33 AM IST / Updated: Aug 03 2024, 06:17 AM IST

ಸಾರಾಂಶ

ಅಪಘಾತ ಹೆಚ್ಚಳದ ಬೆನ್ನಲ್ಲೇ ನೈಸ್ ರಸ್ತೆಯಲ್ಲಿ ರಾತ್ರಿ ವೇಳೆ ಬೈಕ್‌ ಸಂಚಾರ ನಿಷೇಧಿಸಲಾಗಿದೆ. ಅಲ್ಲದೆ ಇನ್ನಿತರ ವಾಹನಗಳ ವೇಗಕ್ಕೂ ಮಿತಿ ಹೇರಲಾಗಿದೆ.

  ಬೆಂಗಳೂರು :  ನೈಸ್‌ ರಸ್ತೆಯಲ್ಲಿ ಅಪಘಾತಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪಥ ಶಿಸ್ತು, ಎಲ್ಲಾ ಮಾದರಿಯ ವಾಹನಗಳ ಸಂಚಾರಕ್ಕೆ ವೇಗ ಮೀತಿ ನಿಗದಿಗೊಳಿಸಿ ಹಾಗೂ ರಾತ್ರಿ ವೇಳೆ ದ್ವಿಚಕ್ರ ವಾಹನ ಸಂಚಾರ ನಿಷೇಧಿಸಿ ಶುಕ್ರವಾರದಿಂದಲೇ ಅನ್ವಯವಾಗುವಂತೆ ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ಆದೇಶಿಸಿದ್ದಾರೆ.

ನಗರ ಸಂಚಾರ ಪಶ್ಚಿಮ ವಿಭಾಗದ ಕೆಂಗೇರಿ, ಕಾಮಾಕ್ಷಿಪಾಳ್ಯ, ಜ್ಞಾನಭಾರತಿ, ಬ್ಯಾಟರಾಯನಪುರ ಸಂಚಾರ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ 23.5 ಕಿ.ಮೀ. ಹಾಗೂ ಸಂಚಾರ ದಕ್ಷಿಣ ವಿಭಾಗದದ ತಲಘಟ್ಟಪುರ, ಕೆ.ಎಸ್‌.ಲೇಔಟ್‌, ಹುಳಿಮಾವು, ಎಲೆಕ್ಟ್ರಾನಿಕ್‌ ಸಿಟಿ ಸಂಚಾರ ಠಾಣೆಗಳ ವ್ಯಾಪ್ತಿಯಲ್ಲಿ 21 ಕಿ.ಮೀ. ನೈಸ್‌ ರಸ್ತೆ ಬರುತ್ತದೆ. ಈ ರಸ್ತೆಗಳಲ್ಲಿ ವಾಹನ ಚಾಲಕರ ಅಜಾಗರೂಕತೆ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದ ಮಾರಣಾಂತಿಕ/ ಮಾರಣಾಂತಿಕವಲ್ಲದ ರಸ್ತೆ ಅಪಘಾತ ಪ್ರಕರಣಗಳು ಸಂಭವಿಸುತ್ತಿವೆ. ಪ್ರತಿ ವರ್ಷವೂ ಅಪಘಾತದಿಂದ ಸಾವನಪ್ಪುವವರು ಹಾಗೂ ಗಾಯಗೊಂಡವರ ಸಂಖ್ಯೆ ಹೆಚ್ಚಳವಾಗುತ್ತಿದೆ.

ಅತಿವೇಗ-ಅಜಾಗರೂಕತೆ ಚಾಲನೆ:

ನೈಸ್‌ ರಸ್ತೆಯಲ್ಲಿ ವೇಗ ಮಿತಿ ಎಚ್ಚರಿಕೆ ಸೂಚನಾ ಫಲಕಗಳು ಹಾಗೂ ಎಲ್‌ಇಡಿ ಫಲಕಗಳು ಅಳವಡಿಸಲಾಗಿದೆ. ಆದರೂ ರಸ್ತೆ ಅಪಘಾತಗಳು ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗುತ್ತಿವೆ. ಈ ರಸ್ತೆಯಲ್ಲಿ ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆಯಿಂದಲೇ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ. ರಸ್ತೆಯಲ್ಲಿ ಸಂಚರಿಸುವ ವಾಹನಗಳು ಪಥ ಶಿಸ್ತು ನಿಯಮ ಪಾಲಿಸದಿರುವುದೂ ಅಪಘಾತಕ್ಕೆ ಕಾರಣವಾಗಿರುವುದು ವಿಶ್ಲೇಷಣೆಯಿಂದ ತಿಳಿದು ಬಂದಿದೆ.

ಈ ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ, ಲಘು, ಭಾರಿ ವಾಹನಗಳಿಗೆ ಯಾವುದೇ ವೇಗ ಮೀತಿಯ ಅಧಿಸೂಚನೆ ಹೊರಡಿಸಿಲ್ಲ. ಹೀಗಾಗಿ ಎಲ್ಲಾ ಮಾದರಿ ವಾಹನಗಳಿಗೆ ವೇಗದ ಮಿತಿ ನಿಗದಿಗೊಳಿಸಿ ಅಧಿಸೂಚನೆ ಹೊರಡಿಸುವಂತೆ ಕೆಂಗೇರಿ ಸಂಚಾರ ಠಾಣೆ ಪೊಲೀಸರು ಪ್ರಸ್ತಾವನೆ ಸಲ್ಲಿಸಿದ್ದಾರೆ. ರಾತ್ರಿ ವೇಳೆ ದ್ವಿಚಕ್ರ ವಾಹನಗಳ ಸಂಚಾರದ ನಿಷೇಧಿಸಿ ಅಧಿಸೂಚನೆ ಹೊರಡಿಸುವಂತೆ ಪತ್ರ ಬರೆದು ಮನವಿ ಮಾಡಿದ್ದಾರೆ.

ರಾತ್ರಿ ಬೈಕ್‌ ಸಂಚಾರ ನಿಷೇಧ

ಈ ಹಿನ್ನೆಲೆಯಲ್ಲಿ ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ಮೇಲ್ಕಂಡ ಸಂಚಾರ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿನ ನೈಸ್‌ ರಸ್ತೆಯಲ್ಲಿ ಸಂಚರಿಸುವ ವಿವಿಧ ಮಾದರಿಯ ವಾಹನಗಳಿಗೆ ಪ್ರತ್ಯೇಕ ವೇಗ ಮಿತಿ ನಿಗದಿಗೊಳಿಸಿದ್ದಾರೆ. ಅಂತೆಯೆ ರಾತ್ರಿ 10 ಗಂಟೆಯಿಂದ ಮುಂಜಾನೆ 5 ಗಂಟೆ ವರೆಗೆ ನೈಸ್‌ ರಸ್ತೆಯಲ್ಲಿ ದ್ವಿಚಕ್ರ ವಾಹನಗಳ ಸಂಚಾರ ನಿಷೇಧಿಸಿ ಆದೇಶಿಸಿದ್ದಾರೆ.ಯಾವುದಕ್ಕೆ ಎಷ್ಟು ವೇಗ ಮಿತಿ?*ಚಾಲಕ ಸೇರಿ 8 ಕ್ಕಿಂತ ಹೆಚ್ಚು ಮಂದಿ ಪ್ರಯಾಣಿಸುವ ವಾಹನಗಳಿಗೆ ಗಂಟೆಗೆ 120 ಕಿ.ಮೀ.*ಚಾಲಕ ಸೇರಿ 9ಕ್ಕಿಂತ ಹೆಚ್ಚು ಮಂದಿ ಪ್ರಯಾಣಿಸುವ ವಾಹನಗಳಿಗೆ ಗಂಟೆಗೆ 100 ಕಿ.ಮೀ.* ಗೂಡ್ಸ್‌ ವಾಹನಗಳಿಗೆ ಗಂಟೆಗೆ 80 ಕಿ.ಮೀ.* ದ್ವಿಚಕ್ರ ವಾಹನಗಳಿಗೆ ಗಂಟೆಗೆ 80 ಕಿ.ಮೀ.

ನೈಸ್‌ ರಸ್ತೆಯ ಅಪಘಾತಗಳ ಮಾಹಿತಿವರ್ಷಮಾರಣಾಂತಿಕ ಅಪಘಾತಗಳ ಸಂಖ್ಯೆಮಾರಣಾಂತಿಕವಲ್ಲದ ಅಪಘಾತಗಳ ಸಂಖ್ಯೆ

2022 -42 

69 - 2023

3783 

2024(ಜೂ.30)1352 

ಒಟ್ಟು9 - 2204