ಸಾರಾಂಶ
ಸಂಘದ ರಾಜ್ಯ ಕಾರ್ಯದರ್ಶಿ ಪ್ರಸನ್ನಕುಮಾರ್ ಮಾಹಿತಿ । ಸಂಘಕ್ಕೆ 2023-24ರಲ್ಲಿ ₹5.25 ಕೋಟಿ ಲಾಭ
ಕನ್ನಡಪ್ರಭ ವಾರ್ತೆ ಶಿವಮೊಗ್ಗಮಲೆನಾಡಿನ ಪ್ರತಿಷ್ಠಿತ ಸಂಸ್ಥೆಯಾದ ಮ್ಯಾಮ್ಕೋಸ್‌ಗೆ ಫೆ.4 ರಂದು ಚುನಾವಣೆ ನಡೆಯಲಿದ್ದು, ಈ ಚುನಾವಣೆಯಲ್ಲಿ ಸಹಕಾರ ಭಾರತಿಯ ತಂಡದ 19 ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಅಭ್ಯರ್ಥಿಗಳಿಗೆ ಮತ ನೀಡಿ ಸದಸ್ಯರ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಸಹಕಾರ ಭಾರತಿಯ ರಾಜ್ಯ ಕಾರ್ಯದರ್ಶಿ ಪ್ರಸನ್ನಕುಮಾರ್ ಹೇಳಿಡರು.
ನಗರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚಿನದ ದಿನಗಳಲ್ಲಿ ಸಹಕಾರ ವಲಯದಲ್ಲಿ ಹಣ ಬಲ, ತೋಳ್ಬಲದ ಮೂಲಕ ಜಾತಿ ಬಲದಿಂದ ಚುನಾವಣೆಯಲ್ಲಿ ಹಣ ತೊಡಗಿಸಿ ಅದನ್ನು ಹಿಂಪಡೆಯುವ ದೃಷ್ಟಿಯಿಂದ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿರುವುದನ್ನು ನಾವು ಕಾಣುತ್ತೇವೆ. ಇದಕ್ಕೆ ವ್ಯತಿರಿಕ್ತವಾಗಿ ಸಹಕಾರ ಭಾರತಿ ತಂಡ ಭ್ರಷ್ಟಾಚಾರರಹಿತವಾಗಿ ಉತ್ತಮ ಆಡಳಿತ ನಿರ್ವಹಣೆಯನ್ನು ಅತ್ಯಂತ ಪಾರದರ್ಶಕವಾಗಿ ಆಡಳಿತ ನಡೆಸುವ ಸಂಕಲ್ಪದಿಂದ ಕಾರ್ಯಪ್ರವೃತ್ತರಾಗಿರುತ್ತಾರೆ ಎಂದರು.ಕಳೆದ ೨೦ ವರ್ಷಗಳಿಂದ ಸಹಕಾರ ಭಾರತಿ ನೇತೃತ್ವದ ತಂಡ ಮ್ಯಾಮ್ಕೋಸ್ ಸದಸ್ಯರ ಆಶೋತ್ತರಗಳ ಈಡೇರಿಕೆಗಾಗಿ ಶ್ರಮಿಸುತ್ತಿದೆ. ಸಹಕಾರ ಭಾರತಿ ಸಹಕಾರ ವ್ಯವಸ್ಥೆಯ ಶುದ್ಧೀಕರಣದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ. ಯಾವುದೇ ರೂಪದ ಭ್ರಷ್ಟಾಚಾರ ಮತ್ತು ಭೇದ-ಭಾವ ರಹಿತ ಸದಸ್ಯ ಕೇಂದ್ರಿತ ಸೇವೆ ನೀಡುವ ದೃಷ್ಟಿಕೋನ ಹೊಂದಿರುವ ಸ್ವಯಂಸೇವಾ ಸಂಸ್ಥೆಯಾಗಿದೆ ಎಂದರು.
ಸಹಕಾರ ಭಾರತಿ ಮ್ಯಾಮ್ಕೋಸ್ ಆಡಳಿತದ ಚುಕ್ಕಾಣಿ ಹಿಡಿದಾಗ 2005-06 ನೇ ಸಾಲಿನಲ್ಲಿ 16778 ಸದಸ್ಯರನ್ನು ಹೊಂದಿದ್ದು, ಅಡಕೆ ಆವಕದ ಪ್ರಮಾಣ 1,28,350 ಮೂಟೆ ಇದ್ದು, 2023-24ನೇ ಸಾಲಿನಲ್ಲಿ 31,665 ಸದಸ್ಯರನ್ನು ಹೊಂದಿ 3.03,910 ಮೂಟೆ ಅಡಕೆ ಆವಕವಾಗಿದೆ. 2005-06 ನೇ ಸಾಲಿನಲ್ಲಿ 1.05 ಕೋಟಿ ರು. ಲಾಭ ಗಳಿಸಿದ್ದ ಸಂಸ್ಥೆ 2023-24ನೇ ಸಾಲಿನಲ್ಲಿ 5.25 ಕೋಟಿ ರು. ಲಾಭ ಗಳಿಸಿದೆ ಎಂದು ಮಾಹಿತಿ ನೀಡಿದರು.ಕಳೆದ ಚುನಾವಣೆಯಲ್ಲಿ ಸಹಕಾರ ಭಾರತಿ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದು, ಮುಂದಿನ 5 ವರ್ಷದಲ್ಲಿ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಈ ಯೋಜನೆಗಳನ್ನು ಕಾರ್ಯಗತಗೊಳಿಸಿ ವ್ಯವಸ್ಥಿತ ಆಡಳಿತ ಮುಂದುವರೆಸಿಕೊಂಡು ಹೋಗುವ ದೃಷ್ಟಿಯಿಂದ ನಮ್ಮ ತಂಡಕ್ಕೆ ಸದಸ್ಯರು ಮತ ನೀಡಿ ಎಂದು ಮನವಿ ಮಾಡಿದರು.
ಈ ವೇಳೆ ಸಹಕಾರ ಭಾರತಿ ರಾಜ್ಯ ಉಪಾಧ್ಯಕ್ಷ ಯಡಗೆರೆ ಸುಬ್ರಹ್ಮಣ್ಯ, ಕೆ. ಮಹೇಶ್, ನಂದೀಶ್, ಸ್ಪರ್ಧಿಗಳಾದ ಜಿ.ಇ. ವಿರೂಪಾಕ್ಷಪ್ಪ, ಸತೀಶ್ ರಾಮನಕೊಪ್ಪ, ಕುಬೇಂದ್ರಪ್ಪ, ಸಹನಾ ಸುಭಾಷ್, ಇತರರು ಹಾಜರಿದ್ದರು.