ಸಾರಾಂಶ
ಉಡುಪಿ : ಇಲ್ಲಿನ ಪರ್ಯಾಯ ಪುತ್ತಿಗೆ ಮಠದಿಂದ ಕೃಷ್ಣಮಠದ ಮೇಲಂತಸ್ತಿನ ಪೌಳಿಗೆ ನೂತನ ಕಾಷ್ಟ ಯಾಳಿ (ಮಾಳಿಗೆ) ಅಲಂಕಾರವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉದ್ಘಾಟಿಸಿದರು. ನಂತರ ರಾಜಾಂಗಣದಲ್ಲಿ ನಡೆದ ಸಭೆಯಲ್ಲಿ ಅವರನ್ನು ಪುತ್ತಿಗೆ ಮಠಾಧೀಶರು, ಅದಮಾರು ಮಠದ ವಿಶ್ವಪ್ರಿಯ ತೀರ್ಥರು ಮತ್ತು ಪುತ್ತಿಗೆ ಕಿರಿಯ ಪಟ್ಟದ ಸುಶ್ರೀಂದ್ರ ತೀರ್ಥರು ಸನ್ಮಾನಿಸಿದರು. ಈ ವೇಳೆ ನಿರ್ಮಲಾ ಅವರಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ‘ಭಾರತ ಲಕ್ಷ್ಮೀ’ ಬಿರುದು ನೀಡಿ ಸನ್ಮಾನಿಸಿದರು.ಈ ಸಂದರ್ಭ ಸಚಿವೆ, ವೇದಿಕೆಯಲ್ಲಿ ಭಾರೀ ಕಡೆಗೋಲಿನ ಮೂಲಕ ಸಾಂಕೇತಿಕವಾಗಿ ಮಜ್ಜಿಗೆ ಕಡೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪರ್ಯಾಯ ಶ್ರೀಗಳು ಇನ್ಫೋಸಿಸ್‌ನ ಸುಧಾ ನಾರಾಯಣಮೂರ್ತಿ, ಚೆನ್ನೈನ ಉದ್ಯಮಿ ರವಿ ಸ್ಯಾಮ್, ಹೈಕೋರ್ಚಿನ ನಿವೃತ್ತ ನ್ಯಾಯಮೂರ್ತಿ ದಿನೇಶ್ ಕುಮಾರ್ ಅವರಿಗೆ ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿಗಳನ್ನು ನೀಡಿ ಗೌರವಿಸಿದರು.
ಸುಧಾಮೂರ್ತಿ ಅವರು ಕೃಷ್ಣಮಠದಲ್ಲಿ ಕನಕಾಂಬರ ಹೂವಿನ 2 ಮಾಲೆಗಳನ್ನು ತಯಾರಿಸಿ ಕೃಷ್ಣನಿಗೆ ಅರ್ಪಿಸಿದರು. ನಂತರ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮ್ ಮತ್ತು ಸುಧಾ ಮೂರ್ತಿ ಕೃಷ್ಣಮಠದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹೊಸ್ತಿಲು ಪೂಜೆ ನೆರವೇರಿಸಿದರು. ನಂತರ ಇಬ್ಬರೂ ಕೃಷ್ಣನ ನೈವೇದ್ಯವನ್ನು ತಯಾರಿಸಿ, ಆ ಪಾತ್ರೆಗಳನ್ನು ತೊಳೆದು ಸೇವೆ ಸಲ್ಲಿಸಿದರು. ನಂತರ ಗೋಶಾಲೆಗೆ ತೆರಳಿ ಗೋವುಗಳಿಗೆ ಚಾರ ತಿನ್ನಿಸಿದರು.
ಸಚಿವೆ ನಿರ್ಮಲಾ, ಗೀತಾಮಂದಿರದಲ್ಲಿ ಮಹಿಳೆಯರಿಗೆ ಕೌಶಲಾಭಿವೃದ್ಧಿ ತರಬೇತಿ ನೀಡುವ ಪುತ್ತಿಗೆ ವಿಶ್ವ ವಿದ್ಯಾಪೀಠಕ್ಕೆ ಚಾಲನೆ ನೀಡಿದರು. ಗೀತಾಮಂದಿರಯಲ್ಲಿರುವ ತಾಡವಾಲೆ, ಪುರಾತನ ಗ್ರಂಥಗಳ ಸಂಶೋಧನಾ ಕೇಂದ್ರಕ್ಕೂ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.