ಹೆಲ್ಮೆಟ್‌ ಹಾಕದ 6 ವರ್ಷದ ಮೇಲ್ಪಟ್ಟ ಮಕ್ಕಳ ವಿರುದ್ಧ ಕ್ರಮವಿಲ್ಲ: ಪೊಲೀಸ್‌

| Published : Feb 11 2024, 01:46 AM IST

ಹೆಲ್ಮೆಟ್‌ ಹಾಕದ 6 ವರ್ಷದ ಮೇಲ್ಪಟ್ಟ ಮಕ್ಕಳ ವಿರುದ್ಧ ಕ್ರಮವಿಲ್ಲ: ಪೊಲೀಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಹೆಲ್ಮೆಟ್ ಹಾಕದ 6 ವರ್ಷ ಮೇಲ್ಪಟ್ಟವರ ವಿರುದ್ಧ ಸಹ ಸಂಚಾರ ವಿಭಾಗದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಲಿದ್ದಾರೆ ಎಂಬ ಸುದ್ದಿ ಸಾರ್ವಜನಿಕ ವಲಯದಲ್ಲಿ ಹಬ್ಬಿದ್ದು, ಇದು ಕೇವಲ ವದಂತಿ ಎಂದು ಸಂಚಾರ ವಿಭಾಗದ ಜಂಟಿ ಆಯುಕ್ತ (ಸಂಚಾರ) ಎಂ.ಎನ್‌.ಅನುಚೇತ್ ಸ್ಪಷ್ಟಪಡಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹೆಲ್ಮೆಟ್‌ ಹಾಕದ 6 ವರ್ಷದ ಮೇಲ್ಪಟ್ಟ ಮಕ್ಕಳ ವಿಚಾರವಾಗಿ ಪೊಲೀಸರು ಪ್ರಕರಣ ದಾಖಲಿಸುತ್ತಾರೆ ಎಂಬುದು ಕೇವಲ ವದಂತಿ ಎಂದು ಸಂಚಾರ ವಿಭಾಗದ ಜಂಟಿ ಆಯುಕ್ತ (ಸಂಚಾರ) ಎಂ.ಎನ್‌.ಅನುಚೇತ್ ಸ್ಪಷ್ಟಪಡಿಸಿದ್ದಾರೆ.

‘6 ವರ್ಷ ಮೇಲ್ಪಟ್ಟ ಎಲ್ಲರು (ಸವಾರ ಹಾಗೂ ಹಿಂಬದಿ ಸವಾರರು) ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂಬ ನಿಯಮವಿದೆ. ಈ ನಿಯಮವು ಹೊಸದೇನೂ ಅಲ್ಲ. ಆದರೆ ಈ ಸಂಬಂಧ ಸಂಚಾರ ಪೊಲೀಸರಿಗೆ, ಶಾಲೆಗಳ ಬಳಿ ವಿಶೇಷ ಕಾರ್ಯಾಚರಣೆ ನಡೆಸುವ ಯಾವುದೇ ಚಿಂತನೆ ಇಲ್ಲ’ ಎಂದು ಜಂಟಿ ಆಯುಕ್ತರು ಖಚಿತಪಡಿಸಿದ್ದಾರೆ.

ಇತ್ತೀಚೆಗೆ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ಆಟೋಗಳು, ನೀರು ಪೂರೈಕೆ ವಾಹನಗಳು ಹಾಗೂ ಖಾಸಗಿ ಶಾಲೆಗಳ ವಿರುದ್ಧ ಪೊಲೀಸರು ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡು ದಂಡ ಪ್ರಯೋಗಿಸಿದ್ದರು. ಅದೇ ರೀತಿ ಹೆಲ್ಮೆಟ್ ಹಾಕದ 6 ವರ್ಷ ಮೇಲ್ಪಟ್ಟವರ ವಿರುದ್ಧ ಸಹ ಸಂಚಾರ ವಿಭಾಗದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಲಿದ್ದಾರೆ ಎಂಬ ಸುದ್ದಿ ಸಾರ್ವಜನಿಕ ವಲಯದಲ್ಲಿ ಹಬ್ಬಿತ್ತು.

ಅಪರಿಚಿತ ವಾಹನ ಡಿಕ್ಕಿ: ಪಾದಚಾರಿ ವೃದ್ಧೆ ಸಾವು

ಬೆಂಗಳೂರು: ರಸ್ತೆ ದಾಟುವಾಗ ಅಪರಿಚಿತ ವಾಹನ ಡಿಕ್ಕಿಯಾಗಿ ವೃದ್ಧೆಯೊಬ್ಬರು ಸಾವನ್ನಪ್ಪಿರುವ ಘಟನೆ ಮಲ್ಲೇಶ್ವರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ. ಮಹಾಲಕ್ಷ್ಮಿ ಲೇಔಟ್‌ ನಿವಾಸಿ ಆಶಾರಾಣಿ (70) ಮೃತ ದುರ್ದೈವಿ. ಅಪಘಾತದ ಬಳಿಕ ತಪ್ಪಿಸಿಕೊಂಡಿರುವ ವಾಹನ ಪತ್ತೆಗೆ ತನಿಖೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ತಮ್ಮ ಮಗಳ ಜತೆ ನೆಲೆಸಿದ್ದ ಆಶಾರಾಣಿ ಅವರು, ಮುಂಜಾನೆ 5.30ರಲ್ಲಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣಕ್ಕೆ ಹೊರಡಲು ಮಹಾಲಕ್ಷ್ಮಿ ಲೇಔಟ್ ಬಸ್‌ ನಿಲ್ದಾಣ ಸಮೀಪ ರಸ್ತೆ ದಾಟುವಾಗ ಅಪರಿಚಿತ ವಾಹನ ಡಿಕ್ಕಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.