ಸ್ತ್ರೀ, ಪುರುಷರೆಂಬ ಭೇದಭಾವ ಬೇಡ: ಪ್ರೊ.ಕೆ.ಸಿ.ವೀರಣ್ಣ

| Published : Feb 12 2024, 01:37 AM IST

ಸ್ತ್ರೀ, ಪುರುಷರೆಂಬ ಭೇದಭಾವ ಬೇಡ: ಪ್ರೊ.ಕೆ.ಸಿ.ವೀರಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಇಬ್ಬರೂ ಕೂಡಿ ಬಾಳಿದರೆ ಬದುಕು ಹಸನು ಎಂದು ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆಗಳ ವಿಶ್ವವಿದ್ಯಾಲಯದ ಕುಲಪತಿಗಳು ನುಡಿದರು. ಬೀದರ್‌ನಲ್ಲಿ ಅಕ್ಕಮಹಾದೇವಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು.

ಕನ್ನಡಪ್ರಭ ವಾರ್ತೆ ಬೀದರ್‌

ಪುರುಷ ಹಾಗೂ ಮಹಿಳೆ ಇಬ್ಬರೂ ಕೂಡಿ ಬಾಳಿದರೆ ಬದುಕು ಹಸನಾಗುತ್ತದೆ. ಯಾವುದೇ ಭೇದ ಭಾವ ಸರಿಯಲ್ಲ ಎಂದು ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಕೆ.ಸಿ.ವೀರಣ್ಣ ತಿಳಿಸಿದರು.

ಅಕ್ಕಮಹಾದೇವಿ ಮಹಿಳಾ ಮಂಡಳ ನಾವದಗೇರಿ ಬೀದರ ಇದರ ಸಭಾಂಗಣ ಉದ್ಘಾಟನೆ ಮತ್ತು ಸಂಸ್ಕೃತಿ ಮಂತ್ರಾಲಯ ನವದೆಹಲಿ ಸಹಕಾರದಲ್ಲಿ ರಾಜಾರಾಮ್‌ ಮೋಹನರಾಯ್‌ ಅವರ 250ನೇ ಜನ್ಮ ವಾರ್ಷಿಕೋತ್ಸವದ ಪ್ರಯುಕ್ತ ಭಾನುವಾರ ನಡೆದ ಮಹಿಳಾ ಸಾಧಕಿಯರಿಗೆ ಅಕ್ಕಮಹಾದೇವಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಪುರುಷ ಮಹಿಳೆ ಎಂಬ ಭೇದಭಾವ ಮಾಡುವುದು ಸರಿಯಲ್ಲ. ಹೋಲಿಕೆಯೂ ಸರಿಯಲ್ಲ. ಮಹಿಳೆಗೆ ಒಂದಿಷ್ಟು ಪ್ರೇರಣೆ ನೀಡಿದರೆ ಮೇಲ್ಮಟ್ಟಕ್ಕೆ ಬೆಳೆಯುತ್ತಾಳೆ ಎಂದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಬಟ್ಟು ಸತ್ಯನಾರಾಯಣ ಸಭಾಂಗಣ ಉದ್ಘಾಟಿಸಿ ಮಾತನಾಡಿ, ರಾಜಾರಾಮ ಮೋಹನರಾಯ ಅವರು ಅಂದು ಸಮಾಜದಲ್ಲಿ ತಾಂಡವವಾಡುತ್ತಿದ್ದ ಸತಿ ಸಹಗಮನ ಪದ್ಧತಿಯನ್ನು ಹೋಗಲಾಡಿಸಿ ಮಹಿಳೆಯರನ್ನು ಸಮಾಜದ ಮುಖ್ಯ ವಾಹಿನಿಗೆ ತಂದಿದ್ದರು.

ಎಲ್ಲಿ ಮಹಿಳೆಯರನ್ನು ಪೂಜಿಸಲಾಗುತ್ತದೆಯೋ ಅಲ್ಲಿ ದೇವತೆ ವಾಸವಾಗುವುದರ ಜೊತೆಗೆ ಅಂತಹ ಮನೆ ಉತ್ತರೋತ್ತರವಾಗಿ ಬೆಳೆಯುತ್ತದೆ. ಅಂತಹ ಹೆಣ್ಣುಮಕ್ಕಳನ್ನು ಗೌರವಿಸುವುದು ಪೂಜಿಸುವುದು ನಮ್ಮೆಲ್ಲರ ಪ್ರಥಮ ಆದ್ಯತೆಯಾಗಬೇಕು.

ಹೆಬ್ಬಾಳೆ ಕುಟುಂಬ ಇಂದು ಅಕ್ಕಮಹಾದೇವಿ ಮಹಿಳಾ ಮಂಡಳ ವತಿಯಿಂದ ಬೃಹತ್ ಸಭಾಂಗಣ ನಿರ್ಮಿಸಿ ಉತ್ತಮ ಕಾರ್ಯ ಮಾಡಿದ್ದಾರೆ ಎಂದು ಹೇಳಿದರು.

ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ನಿರ್ಮಲ್ ವೈದ್ಯ ಮಾತನಾಡಿ, ಮಗ ಮತ್ತು ಮಗಳಿಗೆ ಸರಿ ಸಮಾನತೆ ಇರಲಿ. ಗೃಹಲಕ್ಷ್ಮೀ ಎಂದು ಹೇಳುತ್ತಲೆ ಹೆಣ್ಣನ್ನು ಅಗೌರವದಿಂದ ನಡೆಸಿಕೊಳ್ಳದಿರಲಿ. ನಮ್ಮ ಮಗಳು ನಮ್ಮ ಹೆಮ್ಮೆ ಎಂಬ ಅಭಿಯಾನ ನಮ್ಮ ಮನೆಯಿಂದಲೇ ಆರಂಭವಾಗಲಿ ಎಂದು ಪ್ರತಿಪಾದಿಸಿದರು.

ಅಕ್ಕಮಹಾದೇವಿ ಮಹಿಳಾ ಮಂಡಳ ಕಾರ್ಯದರ್ಶಿ ಡಾ. ಮಹಾದೇವಿ ಹೆಬ್ಬಾಳೆ ಪ್ರಾಸ್ತಾವಿಕ ಮಾತನಾಡಿ, ಅಕ್ಕಮಹಾದೇವಿ ಮಹಿಳಾ ಮಂಡಳ ಇಂದು ಮಹಿಳೆಯರ ಸಬಲೀಕರಣ ಹಾಗೂ ಆರ್ಥಿಕ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಮಹಿಳಾ ಸಾಧಕಿಯರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿಶೇಷವಾಗಿ ಇಂದು 6 ಜನ ಮಹಿಳಾ ಸಾಧಕಿಯರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.

ಭಾಲ್ಕಿಯ ಪೂಜ್ಯ ಗುರುಬಸವ ಪಟ್ಟದ್ದೇವರು ಸಾನ್ನಿಧ್ಯ ವಹಿಸಿದ್ದರು. ಹರಳಯ್ಯ ಪೀಠದ ಡಾ. ಗಂಗಾಂಬಿಕಾ ಅಕ್ಕ ನೇತೃತ್ವ ವಹಿಸಿದ್ದರು. ಬೀದರ್‌ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಬಿ.ಎಸ್.ಬಿರಾದಾರ ಮಾತನಾಡಿದರು.

ಬೀದರ ವಿ.ವಿ.ಯ ಕನ್ನಡ ನಿಕಾಯದ ಡೀನ್ ಡಾ. ಜಗನ್ನಾಥ ಹೆಬ್ಬಾಳೆ, ಕರ್ನಾಟಕ ಕೇಂದ್ರೀಯ ವಿವಿ ಕಲಬುರಗಿ ಅಧ್ಯಯನಾಂಗದ ನಿರ್ದೇಶಕ ಪ್ರೊ. ಬಸವರಾಜ ಡೊಣೂರ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕಿ ಸುರೇಖಾ ಮುನ್ನೋಳಿ, ಮಲ್ಲಮ್ಮ ಹೆಬ್ಬಾಳೆ, ಮಹಾನಂದ ಹೆಬ್ಬಾಳೆ ಉಪಸ್ಥಿತರಿದ್ದರು. ಅಕ್ಕಮಹಾದೇವಿ ಮಹಿಳಾ ಮಂಡಳಿಯ ಅಧ್ಯಕ್ಷೆ ಡಾ. ನೀಲಗಂಗಾ ಹೆಬ್ಬಾಳೆ ಅಧ್ಯಕ್ಷತೆ ವಹಿಸಿದ್ದರು.

ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆ ಸ್ವಾಗತಿಸಿದರು. ಡಾ. ಗೀತಾ ಪೋಸ್ತೆ, ಲಕ್ಷ್ಮೀ ಕುಂಬಾರ, ನಿರೂಪಿಸಿದರು. ಡಾ. ಸುನಿತಾ ಕೂಡ್ಲಿಕರ್, ಡಾ. ಮಹಾನಂದ ಮಡಕಿ, ಮಾನಾ ಸಂಗೀತಾ ಸಮನ್ವಯ ಮಾಡಿದರು. ನಿವೇದಿತಾ ಹೆಬ್ಬಾಳೆ ವಂದಿಸಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಡಾ. ವೈಜಿನಾಥ ಕಮಠಾಣೆ, ಸಂತೋಷ ತಾಳಂಪಳ್ಳಿ, ಎಸ್.ವಿ.ಕಲ್ಮಠ, ಮಲ್ಲಮ್ಮ ಸಂತಾಜಿ, ಪ್ರಕಾಶ ಕನ್ನಾಳೆ, ಶಿವಶರಣಪ್ಪ ಗಣೇಶಪುರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.