ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಇಂಡುವಾಳು ಅಂಗನವಾಡಿ ಕಟ್ಟಡ ನಿರ್ಮಾಣಗೊಂಡು ಆರು ತಿಂಗಳಾದರೂ ಇದುವರೆಗೂ ವಿದ್ಯುತ್ ಸಂಪರ್ಕವಿಲ್ಲ, ನೀರಿನ ವ್ಯವಸ್ಥೆ ಇಲ್ಲ. ಆದರೂ ಅಂಗನವಾಡಿ ಉದ್ಘಾಟನೆಗೊಂಡು ಕಾರ್ಯಾರಂಭ ಮಾಡಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ೨೭೫ರ ಪರಿಹಾರ ಬಾಬ್ತು ೨೨.೦೨ ಲಕ್ಷ ರು. ವೆಚ್ಚದಲ್ಲಿ ಕೆಆರ್‌ಐಡಿಎಲ್ ಮೂಲಕ ಕಟ್ಟಡವನ್ನು ನಿರ್ಮಿಸಲಾಗಿದೆ. ಕಟ್ಟಡದ ಪಕ್ಕದಲ್ಲೇ ನೀರಿನ ಸಂಪನ್ನೂ ನಿರ್ಮಿಸಲಾಗಿದೆ ನಳ ಸಂಪರ್ಕವನ್ನೂ ಒದಗಿಸಿದೆ. ಆದರೆ, ಮೋಟಾರ್‌ನ್ನು ಇದುವರೆಗೂ ಅಳವಡಿಸಿಲ್ಲ. ಅದೇ ರೀತಿ ಕಟ್ಟಡಕ್ಕೆ ವಿದ್ಯುತ್ ವೈರ್ ಎಳೆದು ಸ್ವಿಚ್ ಬೋರ್ಡ್, ಬಲ್ಬ್ ಹಾಕುವುದಕ್ಕೆ ಹೋಲ್ಡರ್‌ಗಳನ್ನೆಲ್ಲಾ ಅಳವಡಿಸಲಾಗಿದೆ. ಆದರೆ, ಸಂಪರ್ಕವನ್ನೇ ಕಲ್ಪಿಸಿಲ್ಲ. ಅಂಗನವಾಡಿಯಲ್ಲಿ ಫ್ಯಾನ್ ಅಳವಡಿಸಿಲ್ಲ, ಮಕ್ಕಳ ಕಲಿಕೆಗೊಂದು ಬೋರ್ಡ್‌ನ್ನೂ ಅಳವಡಿಸದೆ ಹಾಗೆಯೇ ಬಿಡಲಾಗಿದೆ.

ಕೆಆರ್‌ಐಡಿಎಲ್ ಅಧಿಕಾರಿಗಳು ಅಂಗನವಾಡಿಗೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸದೆ ಅವ್ಯವಸ್ಥಿತ ಕಟ್ಟಡವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹಸ್ತಾಂತರ ಮಾಡಿ ಕೈ ತೊಳೆದುಕೊಂಡರು. ಹಸ್ತಾಂತರ ಮಾಡಿಕೊಂಡ ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ಕೂಡ ಯಥಾಸ್ಥಿತಿಯಲ್ಲೇ ಕಟ್ಟಡವನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಇಲ್ಲಿಯವರೆಗೆ ಅಧಿಕಾರಿಗಳು ಯಾರೂ ಅಂಗನವಾಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ಅಲ್ಲಿನ ವ್ಯವಸ್ಥೆಗಳು, ಮಕ್ಕಳು ಅನುಭವಿಸುತ್ತಿರುವ ಸಂಕಷ್ಟಗಳನ್ನು ಅರಿಯುವ ಕನಿಷ್ಠ ಕಾಳಜಿಯನ್ನೂ ಅಧಿಕಾರಿಗಳು ಪ್ರದರ್ಶಿಸದಿರುವುದು ದುರದೃಷ್ಟಕರ ಸಂಗತಿ.

ಗ್ರಾಮ ಪಂಚಾಯ್ತಿಯವರು ನೀಡಿರುವ ನಳ ಸಂಪರ್ಕದಿಂದ ಸಂಪಿಗೆ ನೀರು ಬರುತ್ತದೆ. ಸಂಪಿನಿಂದ ನೀರನ್ನು ಮೇಲೆತ್ತುವುದಕ್ಕೆ ಮೋಟಾರ್ ಅಳವಡಿಸಿಲ್ಲ, ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಮಕ್ಕಳು ಶೌಚ ಮಾಡಿದಾಗ ಅದನ್ನು ಸ್ವಚ್ಛಗೊಳಿಸಲು ಸಂಪಿನೊಳಗಿನಿಂದಬಿಂದಿಗೆಯಲ್ಲಿ ನೀರನ್ನು ಮೇಲೆತ್ತಬೇಕು. ಮಕ್ಕಳು ತಿಂದುಂಡ ತಟ್ಟೆ, ಅಡುಗೆ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಕಷ್ಟವಾಗುತ್ತಿದೆ. ಜೊತೆಗೆ ಅಂಗನವಾಡಿಯೊಳಗೆ ಫ್ಯಾನ್ ವ್ಯವಸ್ಥೆ ಇಲ್ಲ. ಬಿಸಿಲ ತಾಪದಿಂದ ಉರಿವ ಧಗೆಯನ್ನು ಮಕ್ಕಳು ಸಹಿಸಿಕೊಂಡು ಕೂರುವಂತಾಗಿದೆ. ಮಕ್ಕಳಿಗೆ ಪಾಠ ಹೇಳಿಕೊಡುವುದಕ್ಕೆ ಶಿಕ್ಷಕರಿದ್ದರೂ ಬರೆಯುವುದಕ್ಕೆ ಬೋರ್ಡೇ ಇಲ್ಲ. ಹೀಗಿರುವಾಗ ಮಕ್ಕಳಿಗೆ ಅಂಗನವಾಡಿಯಲ್ಲಿ ಏನನ್ನು ಕಲಿಸಲು ಸಾಧ್ಯ ಎಂಬ ಪ್ರಶ್ನೆ ಮೂಡಿದೆ.


ನೀರಿಗಾಗಿ ಸಂಪನ್ನು ನಿರ್ಮಿಸಿ, ನೀರು ಸರಬರಾಜಿಗೆ ಪೈಪ್‌ಗಳನ್ನು ಅಳವಡಿಸಿದ ಮೇಲೆ ಅದಕ್ಕೊಂದು ಮೋಟಾರ್ ಅಳವಡಿಸಬೇಕು, ವಿದ್ಯುತ್ ಕೇಬಲ್‌ಗಳನ್ನು ಕಟ್ಟಡಕ್ಕೆ ಅಳವಡಿಸಿದ ಮೇಲೆ ಕೇಬಲ್ ಅಳವಡಿಸಬೇಕೆಂಬ ಸಾಮಾನ್ಯ ಪ್ರಜ್ಞೆ ಕೆಆರ್‌ಐಡಿಎಲ್ ಅಧಿಕಾರಿಗಳಿಗಿಲ್ಲ. ಅತಂತ್ರ ಸ್ಥಿತಿಯಲ್ಲಿ ಕಟ್ಟಡವನ್ನಿಟ್ಟು ಹಸ್ತಾಂತರ ಮಾಡಿ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಅಧಿಕಾರಿಗಳಿಂದ ಏನೂ ಅರಿಯದ ಮುಗ್ಧ ಮಕ್ಕಳು ಸಂಕಷ್ಟ ಎದುರಿಸುವಂತಾಗಿದೆ.

ಕಟ್ಟಡವನ್ನು ಕಟ್ಟಿಸಿ ಅಲಂಕಾರಿಕವಾಗಿ ಬಣ್ಣ ಬಳೆದು, ಹೊರ ಮತ್ತು ಒಳಭಾಗದಲ್ಲಿ ಚಿತ್ರಗಳನ್ನು ಮೂಡಿಸಲಾಗಿದೆ. ಮೇಲೆಲ್ಲಾ ಹೊಳಪು, ಒಳಗೆಲ್ಲಾ ಹುಳುಕು ಎಂಬ ಮಾತಿನಂತೆ ಮೇಲ್ನೊಟಕ್ಕೆ ಕಟ್ಟಡ ಸುಂದರವಾಗಿರುವಂತೆ ಕಂಡರೂ ಒಳಗೆ ಕಾಣದ ಹುಳುಕುಗಳೇ ಹೆಚ್ಚಾಗಿವೆ. ಮುಖ್ಯಾಂಶ

- ೬ ತಿಂಗಳಾದರೂ ನೀರಿಗೆ ಮೋಟಾರ್ ಅಳವಡಿಸಿಲ್ಲ, ವಿದ್ಯುತ್ ಸಂಪರ್ಕವಿಲ್ಲ

- ಕೆಆರ್‌ಐಡಿಎಲ್ ಅಧಿಕಾರಿಗಳ ಅವಾಂತರ; ಕಟ್ಟಡಕ್ಕೆ ೨೨ ಲಕ್ಷ ರು. ವೆಚ್ಚ

- ಸೌಲಭ್ಯ ಕಲ್ಪಿಸದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹಸ್ತಾಂತರ