ಸಾರಾಂಶ
- ಸಾರಥಿ ಗ್ರಾಮದಲ್ಲಿ ಎನ್ನೆಸ್ಸೆಸ್ ವಿಶೇಷ ವಾರ್ಷಿಕ ಶಿಬಿರದಲ್ಲಿ ಕುಂದೂರು ಮಂಜಪ್ಪ
- - -ಕನ್ನಡಪ್ರಭ ವಾರ್ತೆ ಹರಿಹರ
ರೈತರನ್ನು ಶೋಷಣೆ ಮುಕ್ತಗೊಳಿಸುವ ಇಚ್ಛಾಶಕ್ತಿ ಯಾವ ಸರ್ಕಾರಗಳಿಗೂ ಇಲ್ಲವಾಗುತ್ತಿದೆ ಎಂದು ತಾಲೂಕಿನ ಹೊಳೆಸಿರಿಗೆರೆ ಗ್ರಾಮದ ಪ್ರಗತಿಪರ ರೈತ ಕುಂದೂರು ಮಂಜಪ್ಪ ಬೇಸರ ವ್ಯಕ್ತಪಡಿಸಿದರು.ತಾಲೂಕಿನ ಸಾರಥಿ ಗ್ರಾಮದಲ್ಲಿ ಭಾನುವಾರ ನಡೆದ ಗಿರಿಯಮ್ಮ ಆರ್.ಕಾಂತಪ್ಪ ಶ್ರೇಷ್ಠಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ೨೦೨೫-೨೬ನೇ ಸಾಲಿನ ಎನ್.ಎಸ್.ಎಸ್. ವಿಶೇಷ ವಾರ್ಷಿಕ ಶಿಬಿರದಲ್ಲಿ ‘ರೈತರ ಸಮಸ್ಯೆಗಳು ಮತ್ತು ಸವಾಲುಗಳು’ ವಿಷಯ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.
ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ, ಸರ್ಕಾರ ಉಚಿತ ವಿದ್ಯುತ್, ಆದಾಯ ತೆರಿಗೆ ವಿನಾಯಿತಿ, ವರ್ಷಕ್ಕೆ ₹೬,೦೦೦ ಧನಸಹಾಯ, ಬಡ್ಡಿ-ಸಾಲ ಮನ್ನಾ ಮಾಡಬೇಕಿದೆ. ಅಳುವ ಮಗುವಿಗೆ ಪೌಷ್ಟಿಕ ಆಹಾರ ನೀಡದೇ ಚಾಕೊಲೇಟ್ ನೀಡಿದಂತೆ ಸರ್ಕಾರದ ಸ್ಪಂದನೆ ಮಾಡುತ್ತಿದೆ ಎಂದು ಟೀಕಿಸಿದರು.1 ಕ್ಷಿಂಟಲ್ ಭತ್ತಕ್ಕೆ ₹೪೦೦೦ ದರ ನೀಡದೇ, ₹೨೦೦೦ ನೀಡಿದರೆ ರೈತನಿಗೆ 1 ಎಕರೆಗೆ ಕನಿಷ್ಠ ₹೬೦,೦೦೦ ನಷ್ಟವಾಗುತ್ತದೆ. ಈ ನಷ್ಟದ ಲೆಕ್ಕಾಚಾರ ಮೆಕ್ಕೆಜೋಳ, ಕಬ್ಬು, ತೊಗರಿ, ಜೋಳ ಸೇರಿದಂತೆ ತೋಟಗಾರಿಕೆಯ ವಿವಿಧ ಬೆಳೆಗಳಿಗೂ ಅನ್ವಯಿಸುತ್ತದೆ. ರೈತರು ಬೆಳೆದ ಉತ್ಪನ್ನಗಳಿಗೆ ಸರ್ಕಾರ ವೈಜ್ಞಾನಿಕ ಬೆಲೆ ನಿಗದಿಪಡಿಸಿದರೆ, ರಾಜ್ಯ ಮತ್ತು ಕೇಂದ್ರ ಸರ್ಕಾರ ಯಾವುದೇ ಚಾಕೊಲೇಟ್ ರೀತಿಯ ರಿಯಾಯಿತಿಗಳನ್ನು ನೀಡುವ ಅಗತ್ಯವೇ ಬರುವುದಿಲ್ಲ. ಕೃಷಿ ಆಧಾರಿತ ಆಹಾರ ಸಂಸ್ಕರಣಾ ಕಾರ್ಖಾನೆಗಳು ಬಹುತೇಕ ರಾಜಕಾರಣಿಗಳದಾಗಿವೆ. ಇತರೆ ಉದ್ಯಮಿಗಳಿಗೆ ಲಾಭ ಮಾಡುವುದು ಸರ್ಕಾರಗಳ ಗುರಿಯಾಗಿದೆ ಎಂದು ಆರೋಪಿಸಿದರು.
ಸರ್ಕಾರಿ ಉದ್ಯೋಗಗಳ ಮೇಲೆ ನಿರ್ಭರವಾಗಿರದೇ, ಸ್ವಯಂ ಉದ್ಯೋಗ ಕೈಗೊಳ್ಳುವ ರೈತರಿಗೆ ನ್ಯಾಯ ಕೊಡಿಸಲು ಸರ್ಕಾರ ಮತ್ತು ಆಡಳಿತಗಾರರು ಪ್ರಾಮಾಣಿಕತೆಯಿಂದ ಪ್ರಯತ್ನಿಸಬೇಕು. ರೈತರ ಮಕ್ಕಳಿಗೆ ಹೆಣ್ಣು ಕೊಡಲು ನಾ ಮುಂದು, ನೀ ಮುಂದು ಎಂದು ಬರುವಂತಹ ವಾತಾವರಣ ಬದಲಿಸುವ ಶಕ್ತಿ ಸರ್ಕಾರಕ್ಕಿದೆ. ಈ ನಿಟ್ಟಿನಲ್ಲಿ ಮುಂದುವರಿಯಬೇಕು ಎಂದು ಅಭಿಪ್ರಾಯಪಟ್ಟರು.ಒಡಕಿನಲ್ಲಿ ಛಿದ್ರವಾಗಿರುವ ರೈತ ಸಂಘಟನೆಗಳು ಒಂದೇ ವೇದಿಕೆಗೆ ಬರಬೇಕು. ಕೃಷಿ ವಿಜ್ಞಾನಿಗಳು ನೈಜಸ್ಥಿತಿಯನ್ನು ಪ್ರಸ್ತುತಪಡಿಸಬೇಕು. ಅತಿಯಾದ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಬಳಕೆಗೆ ಪರ್ಯಾಯವನ್ನು ಕಲ್ಪಿಸಿ ವಿಷವಾಗುತ್ತಿರುವ ಮಣ್ಣನ್ನು ಆರೋಗ್ಯಪೂರ್ಣಗೊಳಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಸವಾಲು ನಮ್ಮ ಮುಂದಿದೆ ಎಂದು ಕುಂದೂರು ಮಂಜಪ್ಪ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗೋಣಿ ಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಕುಂದೂರು ಮಂಜಪ್ಪ ಅವರನ್ನು ಸತ್ಕರಿಸಲಾಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗೋಣೆಪ್ಪ ಎಚ್., ಸದಸ್ಯರಾದ ನಾಗರಾಜ್ ನಿಟ್ಟೂರು, ಪ್ರಕಾಶ ಚೌರಿ ಬಡಿಗೇರ, ನೇತ್ರಾವತಿ, ಪ್ರಾಚಾರ್ಯ ಡಾ.ಶ್ರೀನಿವಾಸ್ ಅಜೂರ್, ಎನ್.ಎಸ್.ಎಸ್. ಘಟಕ ಅಧಿಕಾರಿಗಳಾದ ಡಾ.ಪವಿತ್ರ ಎಸ್.ಟಿ., ಡಾ.ಬಾಹುಬಲಿ ವನಕುದರಿ ಹಾಗೂ ಗ್ರಾಮಸ್ಥರಿದ್ದರು.- - -
-09HRR.03(10474):ಎನ್.ಎಸ್.ಎಸ್. ವಿಶೇಷ ವಾರ್ಷಿಕ ಶಿಬಿರದಲ್ಲಿ ಪ್ರಗತಿಪರ ರೈತ ಕುಂದೂರು ಮಂಜಪ್ಪ ಅವರನ್ನು ಗೌರವಿಸಲಾಯಿತು.
;Resize=(128,128))
;Resize=(128,128))
;Resize=(128,128))
;Resize=(128,128))