ಸಾರಾಂಶ
ಕನ್ನಡಪ್ರಭ ವಾರ್ತೆ ಕೆಜಿಎಫ್
ಸೂರ್ಯನಿಲ್ಲದೇ ಬೆಳಕಿಲ್ಲ, ಮುಗಿಲು ಇಲ್ಲದೆ ಮಳೆಯಿಲ್ಲ, ಕಾರ್ಮಿಕರು ಇಲ್ಲದೆ ಕಾರ್ಖಾನೆ ಎಲ್ಲೂ ಇಲ್ಲವೆಂದು ಒಂದನೇ ಅಪರ ಸಿವಿಲ್ ನ್ಯಾಯಾಧೀಶ ಎಂ.ವಿನೋದ್ ಕುಮಾರ್ ತಿಳಿಸಿದರು.ಕೇಂದ್ರ ಸರಕಾರ ಸಾಮ್ಯದ ಬೆಮೆಲ್‌ನ ಸೇವಾ ತರಬೇತಿ ಕೇಂದ್ರದಲ್ಲಿ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರಮಜೀವಿಗಳಿಗೆ ಕಾರ್ಮಿಕ ದಿನದ ಶುಭಾಶಯ ತಿಳಿಸಿದ ಅವರು, ದೇಶದ ಆರ್ಥಿಕ ಪರಿಸ್ಥಿತಿ ಬೆಳವಣಿಗೆಗೆ ಪ್ರತಿಯೊಬ್ಬ ಕಾರ್ಮಿಕನ ಕೊಡುಗೆಯೂ ಅಪಾರವಾಗಿದೆ ಎಂದರು.ದೇಶವನ್ನು ಸದೃಢವಾಗಿಸುವಲ್ಲಿ ಕಾರ್ಮಿಕರ ಕೊಡುಗೆ ಅಪಾರವಾಗಿದೆ, ಕಾರ್ಮಿಕರ ಕಾರ್ಯತತ್ಪರತೆ ಗುರುತಿಸಿ ಶ್ಲಾಘಿಸೋಣ, ಕಾರ್ಮಿಕರ ಕಠಿಣ ಪರಿಶ್ರಮ, ಸಮರ್ಪಣಾ ಭಾವ ಮತ್ತು ಇಚ್ಛಾಶಕ್ತಿಯನ್ನು ನಾವೆಲ್ಲರೂ ಗೌರವಿಸೋಣ ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ರಾಜಗೋಪಾಲಗೌಡ ಮಾತನಾಡಿ, ಪ್ರತಿಯೊಂದು ದೇಶದ ಅರ್ಥಿಕ ಅಭಿವೃದ್ಧಿಯು ಆ ದೇಶದ ಕಾರ್ಮಿಕರ ಮೇಲೆ ಅವಲಂಬಿತವಾಗಿದೆ, ದಕ್ಷತೆಯಿಂದ ಕೂಡಿದ ಕಾರ್ಮಿಕರ ವರ್ಗದಿಂದ ಮಾತ್ರ ಆ ದೇಶ ಆರ್ಥಿಕ ಪ್ರಗತಿ ಸಾಧಿಸುತ್ತಿರುತ್ತದೆ, ಕಾರ್ಮಿಕರ ಎಂದರೆ ಸಾಮಾನ್ಯ ಅರ್ಥದಲ್ಲಿ ದೈಹಿಕ ಇಲ್ಲವೇ ಬೌದ್ಧಿಕ ಶ್ರಮ ಮಾರಾಟ ಮಾಡಿ ಹಣ ಗಳಿಸುತ್ತಿರುವ ವ್ಯಕ್ತಿಯೇ ಆಗಿರುತ್ತಾನೆ ಎಂದು ತಿಳಿಸಿದರು.ಕಾರ್ಮಿಕ ದಿನ ಆಚರಣೆ ಏಕೆ?:
ಬಂಡವಾಳ ಶಾಹಿಗಳು ಅನಿರ್ಧಿಷ್ಟ ಅವಧಿ ದುಡಿಸಿಕೊಳ್ಳುತ್ತಿದ್ದರು, ಇದನ್ನು ವಿರೋಧಿಸಿದ ಕಾರ್ಮಿಕರು ದಿನದ ೮ ಗಂಟೆ ದುಡಿಯುವ ಅವಧಿ ಎಂಬ ಬೇಡಿಕೆ ಮುಂದಿಟ್ಟರು, ದಿನದ ೨೪ ಗಂಟೆಗಳಲ್ಲಿ ದೈನಂದಿನ ಚಟುವಟಿಕೆಗಳನ್ನು ಪೂರೈಸಲು ೮ ಗಂಟೆ ಅವಧಿ ಹಾಗೂ ಇನ್ನುಳಿದ ೮ ಗಂಟೆ ವಿಶ್ರಾಂತಿಗಾಗಿ ಮೀಸಲು ಲೆಕ್ಕಾಚಾರ ಮುಂದಿಟ್ಟು ಕಾರ್ಮಿಕರಿಗೆ ಒಂದು ದಿನಕ್ಕೆ ೮ ಗಂಟೆಗಳ ಕಾಲ ಮಾತ್ರ ದುಡಿಯುವ ಅನುಮತಿ ನೀಡಲಾಯಿತು ಎಂದು ಹೇಳಿದರು.ಹಿರಿಯ ವಕೀಲ ಪರಮೇಶ್ವರ್ ಮಾತನಾಡಿ, ಎಲ್ಲ ಕಾರ್ಮಿಕರು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎಂಬ ಗಾದೆಯಂತೆ ತಮ್ಮ ಕುಟುಂಬ ಪೋಷಣೆಗೆ ದುಡಿಯುತ್ತಿದ್ದಾರೆ, ರೈತರು ಸಹ ದಿನದ ೧೨ ಗಂಟೆಗಳ ಕಾಲ ತಮ್ಮ ಹೊಲ- ಗದ್ದೆಗಳಲ್ಲಿ ದುಡಿಮೆ ಮಾಡಿ ದೇಶಕ್ಕೆ ಅನ್ನ ನೀಡುತ್ತಾನೆ, ಕಾರ್ಮಿಕರು ದುಡಿಮೆ ಮಾಡಬೇಕಾದರೆ ಮೂರು ಹೊತ್ತು ಊಟದ ಅವಶ್ಯಕತೆ ಇದೆ, ರೈತರು ಸಹ ದೇಶದ ಬೆನ್ನಲುಬು, ರೈತ ದಿನದ ೧೨ ಗಂಟೆಗಳ ಕಾಲ ದುಡಿದರೆ, ಕಾರ್ಮಿಕರ ೮ ಗಂಟೆಗಳ ಕಾಲ ದುಡಿದು ದೇಶದ ಆರ್ಥಿಕತೆ ತನ್ನದೇ ಆದ ಕೊಡುಗೆ ನೀಡಿದ್ದಾನೆ ಎಂದರು.ಮಾನವ ಸಂಪನ್ಮೂಲ ಅಧಿಕಾರಿ ಎಸ್.ವಿ.ಗಿರಿ, ಕಾರ್ಮಿಕ ಇಲಾಖೆಯ ಕಿರಣ್, ವಕೀಲರ ಸಂಘದ ಉಪಾಧ್ಯಕ್ಷ ಮಣಿವಣ್ಣನ್ ಇದ್ದರು.