ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ವಿದ್ಯೆ ಹಾಗೂ ಜ್ಞಾನದ ಬಲದಿಂದ ಎಷ್ಟೆ ಎತ್ತರಕ್ಕೆ ಹೋದರೂ ಬೆಳೆದು ಬಂದ ಹಾದಿ ಹಾಗೂ ನೆರವಾದವರ ಮರೆಯಬಾರದೆಂದು ಎಸ್‌ಜೆಎಂ ವಿದ್ಯಾಪೀಠ ಮತ್ತು ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಹೇಳಿದರು.

ನಗರದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಳೆಯ ವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸದ್ಗುಣ, ಸತ್ಕಾರ್ಯ, ಪ್ರೇರಣೆಗಳೆಲ್ಲ ಪ್ರಶಂಸೆಗಾಗಿ ಅಲ್ಲ. ನಮ್ಮ ಮನಕ್ಕೆ ನೆಮ್ಮದಿ ನೀಡಲಿಕ್ಕೆ ಮಾತ್ರ ಇವೆ. ಮನುಷ್ಯನಲ್ಲಿ ಯಾವುದೇ ಕೊರತೆಯಾದರೂ ಕೃತಜ್ಞತಾಭಾವ ಕಡಿಮೆಯಾಗಬಾರದು ಎಂದರು.

ಒಂದು ವ್ಯವಸ್ಥೆ ಹುಟ್ಟು ಹಾಕಲು ಬಂಡವಾಳ ಬೇಕು. ಶಿಕ್ಷಣ ಸಂಸ್ಥೆಗಳನ್ನು ಉದ್ಯಮಿಗಳು, ರಾಜಕಾರಣಿಗಳು, ಬಂಡವಾಳಶಾಹಿಗಳು ತೆರೆಯಬಹುದು. ಆದರೆ ಅದು ವ್ಯಾಪಾರೀಕರಣವಾಗುತ್ತದೆ. ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು 1966ರಲ್ಲಿ ಮಧ್ಯ ಕರ್ನಾಟಕದ ಬಡ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ಎಸ್‌ಜೆಎಂ ವಿದ್ಯಾಪೀಠ ಸ್ಥಾಪಿಸಿ ಅದರ ಮೂಲಕ ಅನೇಕ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದರು. 1980ರಲ್ಲಿ ಎಂಜಿನಿಯರಿಂಗ್ ಕಾಲೇಜು ಪ್ರಾರಂಭಿಸಿ ಅದರ ಕಟ್ಟಡವನ್ನು ತಾವೇ ಮುಂದೆ ನಿಂತು ನಿರ್ಮಾಣ ಮಾಡಿಸಿದರು ಎಂದರು.

ಎಂಜಿನಿಯರಿಂಗ್ ಕಾಲೇಜು ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದೆ. ಜಯದೇವ ಶ್ರೀಗಳು ಅನ್ನ ದಾಸೋಹಿಗಳಾಗಿದ್ದರೆ, ಮಲ್ಲಿಕಾರ್ಜುನ ಶ್ರೀಗಳು ಶಿಕ್ಷಣ ದಾಸೋಹಿಗಳು. ಜಯದೇವ ಶ್ರೀಗಳು ವಿದ್ಯಾರ್ಥಿ ನಿಲಯಗಳನ್ನು ದೇಶದಾಂತ್ಯ ಸ್ಥಾಪಿಸಿ ಅನೇಕ ಬಡವಿದ್ಯಾರ್ಥಿಗಳಿಗೆ ಆಸರೆಯಾದರು. ಜಯದೇವ ವಿದ್ಯಾರ್ಥಿನಿಲಯಗಳಲ್ಲಿ ಎಸ್.ನಿಜಲಿಂಗಪ್ಪ, ಜಿ.ಎಸ್ ಶಿವರುದ್ರಪ್ಪರವರಂತಹ ಮಹನೀಯರು ಆಶ್ರಯ ಪಡೆದು ವ್ಯಾಸಂಗ ಮಾಡಿದ್ದಾರೆ. ಈ ಕಾಲೇಜನ್ನು ಪೂಜ್ಯರು ಹಣ ಮಾಡಲಿಕ್ಕೆ ಕಟ್ಟಲಿಲ್ಲ. ಬಡ ವಿದ್ಯಾರ್ಥಿಗಳಿಗೆ ಸ್ವಾವಲಂಬಿ ಬದುಕು ಕಟ್ಟಿಕೊಡಲು ಸ್ಥಾಪಿಸಿದರು ಎಂದರು.


ದಾವಣಗೆರೆ ವಿರಕ್ತ ಮಠದ ಡಾ.ಬಸವಪ್ರಭು ಸ್ವಾಮೀಜಿ ಮಾತನಾಡಿ, ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಉನ್ನತ ಸ್ಥಾನಗಳಲ್ಲಿದ್ದು ಸಮಾಜಮುಖಿ ಕಾರ್ಯ ಮಾಡುತ್ತಿದ್ದೀರಿ. ವಿದ್ಯೆ ನೀಡಿದ ಶಾಲೆಯನ್ನು ಸ್ಮರಿಸುವುದು ಪುಣ್ಯದ ಕೆಲಸ. ಜನ್ಮ ನೀಡಿದ ತಂದೆ ತಾಯಿ ಋಣ ಸಂಬಂಧ, ವಿದ್ಯೆ ನೀಡಿದ ಗುರು-ಶಾಲೆಯ ಋಣ ಸಂಬಂಧ ಮರೆಯಬಾರದು. ಹಳೆಯ ವಿದ್ಯಾರ್ಥಿಗಳ ಸಮಾಗಮ ಹಳೆಯ ನೆನಪುಗಳ ಮೆಲುಕು ಹಾಕುವ ಸಮ್ಮಿಲನ ಎಂದು ತಿಳಿಸಿದರು.

ಎಸ್‌ಜೆಎಂ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಬಿ ಗುಡಸಿ ಮಾತನಾಡಿ, ಹಳೆಯ ವಿದ್ಯಾರ್ಥಿಗಳ ಕಾಲೇಜಿನ ರಾಯಭಾರಿಗಳಿದ್ದಂತೆ. ಸಂಸ್ಥೆಯ ಜೊತೆಗೆ ನೀವು ಸಹ ಬೆಳೆದಿರುತ್ತೀರಿ. ಈ ಶಿಕ್ಷಣ ಸಂಸ್ಥೆಯನ್ನು ಈ ಸ್ಥಾನಕ್ಕೆ ತರಲು ಅನೇಕ ಅಧ್ಯಾಪಕ ವರ್ಗ ಶ್ರಮಿಸಿದೆ. ಹಳೆಯ ವಿದ್ಯಾರ್ಥಿಗಳು ಈ ಸಂಸ್ಥೆಯೊಂದಿಗೆ, ವಿದ್ಯಾರ್ಥಿಗಳೊಂದಿಗೆ, ವಿಶ್ವವಿದ್ಯಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು ಎಂದರು.

ಈ ವೇಳೆ ಎಸ್‌ಜೆಎಂ ವಿಶ್ವವಿದ್ಯಾಲಯದ ಕುಲಸಚಿವ ಡಾ.ಎಂ.ಎಸ್.ಗಣಾಚಾರಿ, ಪ್ರಾಚಾರ್ಯ ಡಾ.ಪಿ.ಬಿ ಭರತ್, 1980ರ ದಶಕದ ಹಿರಿಯ ವಿದ್ಯಾರ್ಥಿಗಳಾದ ರಾಜೇಶ್ ಗೋಯಲ್, ಅರುಣ್ ಕುಮಾರ್, ವಿವೇಕ್ ಎಸ್, ತಿರುಮಲೇಶ್ ಭಟ್, ಶಿವರಾಜ್, ಬಾಬುರಾವ್, ಶ್ರೀಧರ್ ರಾಮಕೃಷ್ಣ ತಮ್ಮ ಅನುಭವ ಹಂಚಿಕೊಂಡರು. ಡಾ.ಬಿ.ಜಿ.ಕುಮಾರಸ್ವಾಮಿ, ಡಾ.ಕೆ.ಬಿ.ಸಿದ್ದೇಶ್, ಡಾ.ಕೆ.ಆರ್.ಕೃಷ್ಣಾರೆಡ್ಡಿ, ಡಾ.ಎಸ್.ಪಿ.ಶಿವಕುಮಾರ್, ಡಾ.ಟಿ.ವಿ.ಅರವಿಂದ್, ಡಾ.ಜೆ.ಎಂ.ಶ್ರೀಶೈಲ, ಹಳೆಯ ವಿದ್ಯಾರ್ಥಿಗಳ ಸಂಘದ ಸಂಚಾಲಕ ಡಾ.ಜೆ.ಸತೀಶ್ ಉಪಸ್ಥಿತರಿದ್ದರು. ಡಾ.ಕೆ.ಕುಮಾರಸ್ವಾಮಿ ಪ್ರತಿಜ್ಞಾವಿಧಿ ಬೋಧಿಸಿದರು.