ಕಾವೇರಿ ಆರತಿಗೆ ಯಾರೇ ತೊಂದರೆ ಮಾಡಿದರೂ ಯೋಜನೆ ಮಾತ್ರ ನಿಲ್ಲುವುದಿಲ್ಲ: ಡಿ.ಕೆ.ಶಿವಕುಮಾರ್

| Published : Sep 27 2025, 01:00 AM IST

ಕಾವೇರಿ ಆರತಿಗೆ ಯಾರೇ ತೊಂದರೆ ಮಾಡಿದರೂ ಯೋಜನೆ ಮಾತ್ರ ನಿಲ್ಲುವುದಿಲ್ಲ: ಡಿ.ಕೆ.ಶಿವಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಕಾವೇರಿ ಜ್ಯೋತಿ ಕರುನಾಡಿನಲ್ಲಿ ಶಾಶ್ವತವಾಗಿ ಬೆಳಗಬೇಕು. ಆ ತಾಯಿ ಆಶೀರ್ವಾದಿಂದ ಮೇಕೆದಾಟು ಅಣೆಕಟ್ಟು ಯೋಜನೆ ಜಾರಿಗೊಳಿಸುವ ಶಕ್ತಿಯನ್ನು ಕರುಣಿಸುವ ನಿರೀಕ್ಷೆಯೊಂದಿಗೆ ಕಾವೇರಿ ಆರತಿಯನ್ನು ಆರಂಭಿಸಿದ್ದೇವೆ. ನಮ್ಮ ಪ್ರಯತ್ನ ವಿಫಲವಾಗಬಹುದು. ಪ್ರಾರ್ಥನೆ ಎಂದಿಗೂ ವಿಫಲವಾಗುವುದಿಲ್ಲ ಎಂಬ ಆಶಾ ಭಾವನೆ ನಮ್ಮದಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಕಾವೇರಿ ಆರತಿಗೆ ಯಾರೇ ತೊಂದರೆ ಮಾಡಿದರೂ ಯೋಜನೆ ಮಾತ್ರ ನಿಲ್ಲುವುದಿಲ್ಲ. ಪ್ರಾರ್ಥನೆ ಯಾರ ಮನೆಯ ಆಸ್ತಿಯೂ ಅಲ್ಲ. ನಾವು ಕಾವೇರಿ ಆರತಿ ಯೋಜನೆಯನ್ನು ಅಂದುಕೊಂಡ ರೀತಿಯಲ್ಲೇ ಅನುಷ್ಠಾನಗೊಳಿಸುವುದು ಶತಃಸಿದ್ಧ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದಿಟ್ಟ ಉತ್ತರ ನೀಡಿದರು.

ಕೃಷ್ಣರಾಜಸಾಗರದ ಬೃಂದಾವನದಲ್ಲಿ ಆಯೋಜಿಸಿದ್ದ ಮೊದಲನೇ ಕಾವೇರಿ ಆರತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಡಿಸಿಎಂ ಅವರು, ಈ ವರ್ಷದಿಂದಲೇ ವಾರಕ್ಕೆ ಮೂರು ದಿನಗಳ ಕಾಲ ಕಾವೇರಿ ಆರತಿ ಯೋಜನೆಯನ್ನು ಅದ್ಧೂರಿಯಾಗಿ ಆಚರಿಸಲು ಸಿದ್ಧತೆ ನಡೆಸಲಾಗಿತ್ತು. ಕೆಲವೊಂದು ಕಾರಣಗಳಿಂದ ದೊಡ್ಡ ಮಟ್ಟದಲ್ಲಿ ಜಾರಿ ಮಾಡಲು ಸಾಧ್ಯವಾಗಲಿಲ್ಲ. ಹಾಗಾಗಿ ಈ ವರ್ಷ ಕಾವೇರಿ ಆರತಿಯನ್ನು ಕೇವಲ ಸಾಂಕೇತಿಕವಾಗಿ ಚಾಲನೆ ನೀಡಿದ್ದೇವೆ ಎಂದರು.

ಕಾವೇರಿ ಆರತಿಯನ್ನು ಕೇವಲ ಧಾರ್ಮಿಕ ಕಾರ್‍ಯಕ್ರಮವಾಗಿ ರೂಪಿಸದೆ ರಾಜ್ಯ ಮತ್ತು ಹೊರ ರಾಜ್ಯದಿಂದ ನಿತ್ಯ ಹತ್ತು ಸಾವಿರ ಜನರು ಬಂದು ವೀಕ್ಷಣೆ ಮಾಡುವಂತೆ ಆಯೋಜನೆ ಮಾಡಿ ಪ್ರವಾಸೋಧ್ಯಮ ದೃಷ್ಠಿಯಿಂದ ಕೆ.ಆರ್.ಎಸ್.ಅನ್ನು ವಿಶ್ವಮಟ್ಟದಲ್ಲಿ ಗಮನ ಸೆಳೆಯುವಂತೆ ಮಾಡುವ ಉದ್ದೇಶ ಹೊಂದಲಾಗಿತ್ತು. ಮುಂದಿನ ದಿನಗಳಲ್ಲಿ ಉದ್ದೇಶಿತ ಯೋಜನೆಯನ್ನು ಸಂಪೂರ್ಣ ಜಾರಿಗೊಳಿಸುತ್ತೇವೆ ಎಂದು ಖಚಿತವಾಗಿ ಹೇಳಿದರು.

ಕಾವೇರಿ ಜ್ಯೋತಿ ಕರುನಾಡಿನಲ್ಲಿ ಶಾಶ್ವತವಾಗಿ ಬೆಳಗಬೇಕು. ಆ ತಾಯಿ ಆಶೀರ್ವಾದಿಂದ ಮೇಕೆದಾಟು ಅಣೆಕಟ್ಟು ಯೋಜನೆ ಜಾರಿಗೊಳಿಸುವ ಶಕ್ತಿಯನ್ನು ಕರುಣಿಸುವ ನಿರೀಕ್ಷೆಯೊಂದಿಗೆ ಕಾವೇರಿ ಆರತಿಯನ್ನು ಆರಂಭಿಸಿದ್ದೇವೆ. ನಮ್ಮ ಪ್ರಯತ್ನ ವಿಫಲವಾಗಬಹುದು. ಪ್ರಾರ್ಥನೆ ಎಂದಿಗೂ ವಿಫಲವಾಗುವುದಿಲ್ಲ ಎಂಬ ಆಶಾ ಭಾವನೆ ನಮ್ಮದಾಗಿದೆ ಎಂದರು.ಉತ್ತರದಲ್ಲಿ ಗಂಗಾರತಿ, ದಕ್ಷಿಣದಲ್ಲಿ ಕಾವೇರಿ ಆರತಿ:

ಉತ್ತರದಲ್ಲಿ ಗಂಗಾರತಿ ಆರಂಭಿಸಿದ್ದರಿಂದ ಅಲ್ಲಿನ ಸಾಕಷ್ಟು ಸಮಸ್ಯೆಗಳು ನಿವಾರಣೆಯಾಗಿವೆ. ಅದೇ ಮಾದರಿಯಲ್ಲಿ ದಕ್ಷಿಣದ ಗಂಗೆ ಎನಿಸಿಕೊಂಡಿರುವ ಜೀವನದಿ ಕಾವೇರಿಗೆ ಗೌರವ ಕೊಡುವುದು ನಮ್ಮ ಕರ್ತವ್ಯ. ಕಾವೇರಿ ಹಳೇ ಮೈಸೂರು ಭಾಗದ ಮೂರು ಕೋಟಿ ಜನರ ಜೀವನದಿಯಾಗಿದೆ. ಹೆತ್ತ ತಾಯಿಗೆ ಗೌರವ ನೀಡಿದಂತೆ ಕಾವೇರಿ ಪಾದಕ್ಕೆ ನಮನ ಸಲ್ಲಿಸುವುದಕ್ಕಾಗಿ ಕಾವೇರಿ ಆರತಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ನಾವು ಯಾರೂ ಶಾಶ್ವತವಾಗಿ ಇರುವುದಿಲ್ಲ. ಆದರೆ, ನಾವು ಮಾಡುವ ಕೆಲಸ ಮತ್ತು ಹಾಕಿಕೊಡುವ ಅಡಿಪಾಯ ಮುಂದಿನ ಪೀಳಿಗೆ ಮುಂದುವರಿಸಿಕೊಂಡು ಹೋಗಬೇಕು. ಆ ಹಿನ್ನೆಲೆಯಲ್ಲಿ ಕನ್ನಡಿಗರ ಭಾಗ್ಯದೇವತೆಯಾಗಿರುವ ಕಾವೇರಿಗೆ ಈ ನೆಲದ ಸಂಸ್ಕೃತಿಯಂತೆ ಆರತಿಯನ್ನು ಬೆಳಗುತ್ತಿದ್ದೇವೆ. ಜೊತೆಗೆ ಪ್ರವಾಸಿಗರನ್ನೂ ಆಕರ್ಷಿಸುತ್ತಿದ್ದೇವೆ. ಇದು ಮುಂದೆ ದೊಡ್ಡ ಐತಿಹಾಸಿಕ ಕಾರ್‍ಯಕ್ರಮವಾಗಿ ವಿಶ್ವ ಮಟ್ಟದಲ್ಲಿ ಗಮನ ಸೆಳೆಯುವುದು ಖಚಿತ ಎಂದು ಹೇಳಿದರು.

ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಮಾತನಾಡಿ, ಕಾವೇರಿ ಆರತಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕನಸು. ಉತ್ತರದಲ್ಲಿ ಗಂಗಾರತಿಯಂತೆ ದಕ್ಷಿಣದಲ್ಲಿ ಕಾವೇರಿ ಆರತಿ. ಜೀವನದಿಯನ್ನು ಪೂಜಿಸುವುದರಿಂದ ಅನೇಕ ಸಮಸ್ಯೆಗಳು ಪರಿಹಾರವಾಗಲಿವೆ ಎಂಬ ಭರವಸೆಯೊಂದಿಗೆ ಈ ಕಾರ್‍ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಕಾವೇರಿ ಆರತಿ ನಿರಂತರವಾಗಿ ನಡೆಸುವುದರಿಂದ ಮುಂದಿನ ದಿನಗಳಲ್ಲಿ ಕಾವೇರಿ ಸಮಸ್ಯೆ ಉದ್ಭವವಾಗುವುದಿಲ್ಲ ಎಂಬ ನಂಬಿಕೆ ನಮ್ಮದಾಗಿದೆ. ಜೀವನದಿ ಕಾವೇರಿ ಸದಾ ತುಂಬಿ ಹರಿಯಬೇಕು. ರೈತಾಪಿ ಸಮುದಾಯ ಹಾಗೂ ಕಾವೇರಿ ಕಣಿವೆ ಪ್ರದೇಶದ ಎಲ್ಲ ಜನರನ್ನೂ ತಣಿಸುತ್ತಿರಬೇಕು. ಈ ಯೋಜನೆ ಪ್ರವಾಸೋಧ್ಯಮ ದೃಷ್ಠಿಯಿಂದ ಅತ್ಯುತ್ತಮ ಯೋಜನೆಯಾಗಿದೆ ಕೆ.ಆರ್.ಎಸ್.ನ ಬೃಂದಾವನಕ್ಕೆ ಹೊಸ ಮೆರುಗನ್ನು ತಂದುಕೊಡಲಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.

ಕಾವೇರಿ ಆರತಿ ಯೋಜನೆಯಿಂದ ಮೈಸೂರು, ಮಂಡ್ಯ ಜಿಲ್ಲೆಯ ಜನರಿಗೆ ಉದ್ಯೋಗಾವಕಾಶಗಳು ಲಭ್ಯವಾಗಲಿವೆ. ಜೊತೆಗೆ ಈ ಭಾಗ ಅಭಿವೃದ್ಧಿಯನ್ನೂ ಕಾಣಲಿದೆ. ವಿರೋಧ ಮಾಡುವವರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಎಲ್ಲದ್ದಕ್ಕೂ ವಿರೋಧ ಮಾಡುವುದು ಸರಿಯಲ್ಲ ಎಂದು ಕಿವಿಮಾತು ಹೇಳಿದರು.

ಕಾವೇರಿ ಕೊಡಗಿನಲ್ಲಿ ಹುಟ್ಟಿದರೂ ಐದಾರು ಜಿಲ್ಲೆಗಳಿಗೆ ಹಸಿರು ಸಿರಿಯನ್ನು ಹೊದಿಸಿ ಅಲ್ಲಿನ ಜನರ ದಾಹವನ್ನು ಇಂಗಿಸಿ ಜೀವ ಕಳೆಯನ್ನು ತುಂಬುತ್ತಿದ್ದಾಳೆ. ಆ ತಾಯಿಗೆ ನಮನ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯ. ಅದನ್ನಷ್ಟೇ ನಾವು ಮಾಡುತ್ತಿದ್ದೇವೆ ಎಂದು ಹೇಳಿದರು.

ಕಾರ್‍ಯಕ್ರಮದಲ್ಲಿ ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗೇಶ್ವರಶ್ರೀಗಳು, ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಮೈಸೂರಿನ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮನಾಥಸ್ವಾಮೀಜಿ, ಡಿ.ಕೆ. ಶಿವಕುಮಾರ್ ಪತ್ನಿ ಉಷಾ, ಚಲುವರಾಯಸ್ವಾಮಿ ಪತ್ನಿ ಧನಲಕ್ಷ್ಮೀ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ವಿಧಾನ ಪರಿಷತ್ ಶಾಸಕರಾದ ಮಧು ಜಿ. ಮಾದೇಗೌಡ, ದಿನೇಶ್ ಗೂಳೀಗೌಡ, ಸಾಧು ಕೋಕಿಲಾ, ಕಾವೇರಿ ಆರತಿ ಸಮಿತಿ ಅಧ್ಯಕ್ಷ ರಾಮ್‌ಪ್ರಸಾದ್ ಮನೋಹರ್, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಓ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಇತರರು ಭಾಗವಹಿಸಿದ್ದರು.

ಕಾವೇರಿ ಆರತಿ ಯೋಜನೆಗೆ ಚಾಲನೆ ನೀಡಲು ಕೆ.ಆರ್ ಎಸ್ ನ ಬೃಂದಾವನಕ್ಕೆ ಆಗಮಿಸಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಕಾವೇರಿ ಆರತಿ ಕಾರ್‍ಯಕ್ರಮ ನಡೆಯುವ ಸ್ಥಳಕ್ಕೆ ಕರೆತರಲಾಯಿತು. ನಂತರ ಧಾರ್ಮಿಕ ವಿಧಿ ವಿಧಾನ ಹಾಗೂ ವೇಧಘೋಷದೊಂದಿಗೆ ಕಾವೇರಿ ಮಾತೆಗೆ ಪೂಜೆ ಸಲ್ಲಿಸಲಾಯಿತು. ಬಳಿಕ ಕಾವೇರಿ ಮಾತೆಗೆ ಎಲ್ಲರೂ ಪುಷ್ಪಾರ್ಚನೆ ನೆರವೇರಿಸಿದರು.

ಸಾವಿರಾರು ಪ್ರವಾಸಿಗರು ಸ್ಥಳದಲ್ಲಿದ್ದು ಕಾವೇರಿ ಆರತಿಯನ್ನು ವೀಕ್ಷಿಸಿದರು. ಮೊಬೈಲ್‌ಗಳಲ್ಲಿ ಕಾವೇರಿ ಪೂಜೆ ದೃಶ್ಯಾವಳಿಗಳನ್ನು ಸೆರೆ ಹಿಡಿದರು. ವೇದಿಕೆಯಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್‍ಯಕ್ರಮಗಳು ಜರುಗಿದವು. ಬೃಂದಾವನದ ಆರು ಕಡೆ ಬೃಹತ್ ಎಲ್‌ಇಡಿ ಪರದೆಗಳನ್ನು ಅಳವಡಿಸಿ ಪ್ರವಾಸಿಗರು ವೀಕ್ಷಿಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿತ್ತು.