‘ಜೀವಂತವಾಗಿರಲು ಒಂದು ಕಿಡ್ನಿ ಸಾಕು. ಹಣಕಾಸು ಲಾಭದ ನಿರೀಕ್ಷೆ ಇಲ್ಲದೆ ನನ್ನ ಎರಡು ಕಿಡ್ನಿಗಳಲ್ಲಿ ಒಂದನ್ನು ಪರಚಿಂತನೆಯಿಂದ ದಾನ ಮಾಡಲು ನಿರ್ಧರಿಸಿದ್ದೇನೆ. ಇದಕ್ಕೆ ಅನುಮತಿ ನೀಡಬೇಕು’. - ಹೀಗೊಂದು ಅಪರೂಪದ ಹಾಗೂ ಪರೋಪಕಾರದ ಮನವಿ ಹೊತ್ತು ವ್ಯಕ್ತಿಯೊಬ್ಬ ಹೈಕೋರ್ಟ್‌ ಮೊರೆ ಹೋಗಿದ್ದಾನೆ.

ವೆಂಕಟೇಶ್ ಕಲಿಪಿ

ಕನ್ನಡಪ್ರಭ ವಾರ್ತೆ ಬೆಂಗಳೂರು

‘ಜೀವಂತವಾಗಿರಲು ಒಂದು ಕಿಡ್ನಿ ಸಾಕು. ಹಣಕಾಸು ಲಾಭದ ನಿರೀಕ್ಷೆ ಇಲ್ಲದೆ ನನ್ನ ಎರಡು ಕಿಡ್ನಿಗಳಲ್ಲಿ ಒಂದನ್ನು ಪರಚಿಂತನೆಯಿಂದ ದಾನ ಮಾಡಲು ನಿರ್ಧರಿಸಿದ್ದೇನೆ. ಇದಕ್ಕೆ ಅನುಮತಿ ನೀಡಬೇಕು’.

- ಹೀಗೊಂದು ಅಪರೂಪದ ಹಾಗೂ ಪರೋಪಕಾರದ ಮನವಿ ಹೊತ್ತು ವ್ಯಕ್ತಿಯೊಬ್ಬ ಹೈಕೋರ್ಟ್‌ ಮೊರೆ ಹೋಗಿದ್ದಾನೆ.

ಈ ಪರೋಪಕಾರಿಯ ಮೊರೆ ಆಲಿಸಿದ ಹೈಕೋರ್ಟ್‌, ಕಿಡ್ನಿ ದಾನಕ್ಕೆ ಆತ ಅರ್ಹನೇ? ಕಿಡ್ನಿ ದಾನದಿಂದ ಆತನಿಗೆ ಯಾವುದೇ ಹಾನಿಯಾಗುವುದಿಲ್ಲವೇ? ಎಂಬುದಾಗಿ ಪರೀಕ್ಷೆ ನಡೆಸಬೇಕು. ಹಾಗೆಯೇ, ಹಿರಿತನ ಹಾಗೂ ಹೊಂದಾಣಿಕೆ ಆಧಾರದಲ್ಲಿ ಕಿಡ್ನಿದಾನಕ್ಕೆ ಕಾಯುತ್ತಿರುವ ವ್ಯಕ್ತಿಯನ್ನು ಗುರುತಿಸಿ ವರದಿ ಸಲ್ಲಿಸುವಂತೆ ಬೆಂಗಳೂರಿನ ನೆಫ್ರೋ ಯೂರಾಲಜಿ ಸಂಸ್ಥೆ ನಿರ್ದೇಶಕರಿಗೆ ನಿರ್ದೇಶಿಸಿದೆ.

ಕಿಡ್ನಿದಾನ ಮಾಡಲು ತನಗೆ ಅನುಮತಿ ನೀಡುವಂತೆ ಕೋರಿ ದಾವಣಗೆರೆಯ 52 ವರ್ಷದ ನಿವಾಸಿಯೊಬ್ಬರು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದ ರಾಜ್‌ ಅವರ ಪೀಠ ಈ ಮಧ್ಯಂತರ ಆದೇಶ ಮಾಡಿದೆ.

‘ನಾನು ಅವಿವಾಹಿತ. ನನಗೆ ಸಹೋದರ ಹಾಗೂ ತಾಯಿ ಇದ್ದಾರೆ. ಅವರೂ ಸೇರಿ ನನ್ನ ಮೇಲೆ ಯಾರೊಬ್ಬರೂ ಅಲಂಬನೆಯಾಗಿಲ್ಲ. ಕಿಡ್ನಿ ದಾನಕ್ಕೆ ಹಿಂದೆ ಸಹೋದರ ವಿರೋಧಿಸಿದ್ದರು. ಸದ್ಯ ಆ ಪರಿಸ್ಥಿತಿಯಲ್ಲಿ ಸಹೋದರ ಇಲ್ಲ. ಜೀವಂತವಾಗಿರಲು ಒಂದು ಕಿಡ್ನಿ ಸಾಕು. ಹಾಗಾಗಿ, ನನ್ನ ಎರಡು ಕಿಡ್ನಿಯಲ್ಲಿ ಒಂದನ್ನು ಪರಚಿಂತನೆಯಿಂದ ದಾನ ಮಾಡಲು ನಿರ್ಧರಿಸಿದ್ದೇನೆ. ಅದಕ್ಕಾಗಿ ಕಿಡ್ನಿ ನಿರೀಕ್ಷೆಯಲ್ಲಿರುವ ಮೂರನೇ ವ್ಯಕ್ತಿಯಿಂದ ಹಣಕಾಸು ಲಾಭ ಅಥವಾ ಇನ್ನಿತರ ಯಾವುದೇ ನೆರವು ಬಯಸುತ್ತಿಲ್ಲ’ ಎಂಬುದಾಗಿ ಅರ್ಜಿದಾರ ತಿಳಿಸಿದ್ದಾರೆ ಎಂದು ನ್ಯಾಯಪೀಠದಲ್ಲಿ ವಿವರಿಸಿದೆ.

ಬಿಜಿಎಸ್‌ ಆಸ್ಪತ್ರೆಗೆ ಕಿಡ್ನಿದಾನ:

ಅರ್ಹ ರೋಗಿಗೆ ಅಳವಡಿಸುವುದಕ್ಕಾಗಿ ಉತ್ತರಹಳ್ಳಿಯ ಬಿಜಿಎಸ್‌ ಆಸ್ಪತ್ರೆಗೆ ತನ್ನ ಕಿಡ್ನಿದಾನ ಮಾಡಲು ಅನುಮತಿಸುವಂತೆ ಅರ್ಜಿದಾರ ಕೋರಿದ್ದಾರೆ. ನಿರ್ದಿಷ್ಟವಾಗಿ ಆ ಆಸ್ಪತ್ರೆಯಲ್ಲಿಯೇ ಏಕೆ ಕಿಡ್ನಿದಾನ ಮಾಡಲು ಬಯಸಿರುವುದಾಗಿ ನ್ಯಾಯಾಲಯ ಪ್ರಶ್ನಿಸಿತು. ಆಗ ಬಿಜಿಎಸ್‌ ಆಸ್ಪತ್ರೆಯಲ್ಲಿ ಸಮಾಲೋಚನೆ ನಡೆಸಿದ್ದೇನೆ. ಹಾಗಾಗಿ, ಆ ಆಸ್ಪತ್ರೆ ಹೆಸರು ಅರ್ಜಿಯಲ್ಲಿ ಸೇರಿಸಿದ್ದೇನೆ. ಅದರಲ್ಲದೆ ಮತ್ಯಾವುದೇ ಆಸ್ಪತ್ರೆಯಲ್ಲಿಯೂ ಕಿಡ್ನಿ ದಾನಕ್ಕೆ ಸಿದ್ಧನಿದ್ದೇನೆ ಎಂದು ಅರ್ಜಿದಾರ ತಿಳಿಸಿರುವುದಾಗಿ ನ್ಯಾಯಪೀಪೀಠ ಆದೇಶದಲ್ಲಿ ಉಲ್ಲೇಖಿಸಿದೆ.

ಅಲ್ಲದೆ, ಅರ್ಜಿದಾರರು ಕಿಡ್ನಿ ದಾನ ಮಾಡುವ ಬಗ್ಗೆ ಅಂಗಾಂಗ ಕಸಿ ಅಧಿಕೃತ ಸಮಿತಿಗೆ ಅರ್ಜಿ ಸಲ್ಲಿಸಬೇಕು. ಆ ಮನವಿ ಪರಿಗಣಿಸಿ ಮುಂದಿನ ಕ್ರಮವನ್ನು ಆ ಸಮಿತಿ ಕೈಗೊಳ್ಳಬಹುದು ಎಂದು ಸರ್ಕಾರಿ ವಕೀಲರು ತಿಳಿಸಿದ್ದಾರೆ. ಮತ್ತೊಂದೆಡೆ ರಾಜ್ಯ ಸರ್ಕಾರದಿಂದ ಅಂಗಾಂಗ ಕಸಿ ಮಾಡುವುದಕ್ಕೆ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ನೆಫ್ರೋ ಯೂರಾಲಜಿ ಸಂಸ್ಥೆಯೇ ಅಧಿಕೃತ ಸಂಸ್ಥೆ. ಅದರ ನಿರ್ದೇಶಕರ ಮುಂದೆ ಹಾಜರಾಗಲು ಅನುಮತಿಸಿದರೆ; ಅವರ ಮುಂದೆ ನ್ಯಾಯಾಲಯ ನಿಗದಿಪಡಿಸುವ ಯಾವುದೇ ದಿನಾಂಕದಂದು ಅರ್ಜಿದಾರರು ಹಾಜರಾಗುತ್ತಾರೆ. ಅಂಗಾಂಗ ದಾನಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳ ಬಗ್ಗೆ ಅರ್ಜಿದಾರರನ್ನು ನಿರ್ದೇಶಕರು ಪರಿಶೀಲಿಸಿ, ಮುಂದಿನ ಅಗತ್ಯ ಪ್ರಕ್ರಿಯೆ ಜರುಗಿಸಬಹುದು ಎಂಬುದಾಗಿ ಅರ್ಜಿದಾರರ ಪರ ವಕೀಲರು ತಿಳಿಸಿದ್ದಾರೆಂದು ಪೀಠ ಆದೇಶದಲ್ಲಿ ವಿವರಿಸಿದೆ.

ಅಂತಿಮವಾಗಿ, ಅರ್ಜಿದಾರರು ಸೆ.8ರಂದು ಬೆಳಗ್ಗೆ 8 ಗಂಟೆಗೆ ನೆಫ್ರೋ ಯೂರಾಲಜಿ ಸಂಸ್ಥೆ ನಿರ್ದೇಶಕರ ಮುಂದೆ ಹಾಜರಾಗಬೇಕು. ನಿರ್ದೇಶಕರು ಅರ್ಜಿದಾರರನ್ನು ಪರೀಕ್ಷೆಗೊಳಪಡಿಸಬೇಕು. ಅರ್ಜಿದಾರರು ತಮ್ಮ ಕಿಡ್ನಿದಾನ ಮಾಡಲು ಅರ್ಹರಿದ್ಧಾರೆಯೇ? ಕಿಡ್ನಿ ದಾನದಿಂದ ಅರ್ಜಿದಾರರಿಗೆ ಯಾವುದೇ ಹಾನಿಯಾಗುವುದಿಲ್ಲವೇ? ಎಂಬ ಬಗ್ಗೆ ಪರಿಶೀಲಿಸಬೇಕು. ಹಾಗೆಯೇ, ಕಿಡ್ನಿ ದಾನಕ್ಕಾಗಿ ಕಾಯುತ್ತಿರುವ ಹಾಗೂ ಮಾನವ ಅಂಗಗಳು ಮತ್ತು ಅಂಗಾಂಶಗಳ ಕಸಿ ಕಾಯ್ದೆ-1994 ರ ಅವಶ್ಯಕತೆ ಪೂರೈಸುವ ವ್ಯಕ್ತಿಗೆ ಕಿಡ್ನಿಯ ಅಗತ್ಯವಿದ್ದರೆ, ಆ ಕುರಿತ ಪ್ರಕ್ರಿಯೆ ಮುಂದುವರಿಸಬಹುದು. ಹಿರಿತನ, ಹೊಂದಾಣಿಕೆ ಮತ್ತು ಅವಶ್ಯಕತೆ ಕಾರಣದಿಂದ ಸೂಕ್ತ ವ್ಯಕ್ತಿ ಗುರುತಿಸಬಹುದು ಎಂದು ನಿರ್ದೇಶಿಸಿರುವ ಪೀಠ, ಆ ಕುರಿತ ವರದಿಯನ್ನು ಸೆ.16ಕ್ಕೆ ಸಲ್ಲಿಸುವಂತೆ ನಿರ್ದೇಶಿಸಿ ವಿಚಾರಣೆ ಮುಂದೂಡಿದೆ.ಕೇರಳದ ಮಾದರಿ ಯೋಜನೆ ಕರ್ನಾಟಕದಲ್ಲಿಲ್ಲ:

ಪರಚಿಂತನೆಯಿಂದ ಕಿಡ್ನಿ ದಾನಕ್ಕೆ ಅನುಮತಿಸುವ ಯೋಜನೆ ಕೇರಳದಲ್ಲಿದೆ. ಅಂಥ ಯಾವುದಾದರೂ ಯೋಜನೆ ಕರ್ನಾಟಕದಲ್ಲಿದೆಯೇ ಎಂಬ ಬಗ್ಗೆ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಿ ವಕೀಲರಿಗೆ ಹೈಕೋರ್ಟ್‌ ಅರ್ಜಿ ಹಿಂದಿನ ವಿಚಾರಣೆ ವೇಳೆ ಸೂಚಿಸಿತ್ತು. ಇತ್ತೀಚೆಗೆ ಅರ್ಜಿ ಮತ್ತೆ ವಿಚಾರಣೆಗೆ ಬಂದಾಗ, ಕೇರಳ ಮಾದರಿ ಕರ್ನಾಟಕದಲ್ಲಿ ಜಾರಿಯಲ್ಲಿಲ್ಲ. ಆದರೆ, ಈ ವಿಚಾರವನ್ನು ರಾಜ್ಯ ಸರ್ಕಾರ ಪರಿಗಣಿಸುತ್ತದೆ ಎಂದು ಸರ್ಕಾರಿ ವಕೀಲರು ನ್ಯಾಯಾಲಯಕ್ಕೆ ಭರವಸೆ ನೀಡಿದರು.