ಸಾರಾಂಶ
ಸಂಪ್ರದಾಯಗಳು ಅಡ್ಡಿ । ಕೆಲವೆಡೆ ಗ್ರಾಮಸ್ಥರ ಹೊಂದಾಣಿಕೆ ಕೊರತೆ
ಎಂ. ಪ್ರಹ್ಲಾದ್
ಕನ್ನಡಪ್ರಭ ವಾರ್ತೆ ಕನಕಗಿರಿತಾಲೂಕಿನ ವಿವಿಧೆಡೆಯ ೯ ಗ್ರಾಮಗಳಲ್ಲಿ ಭಾವೈಕ್ಯತೆಗೆ ಹೆಸರಾದ ಮೊಹರಂ ಹಬ್ಬದ ಆಚರಿಸುವುದಿಲ್ಲ.
ಮುಸ್ಲಿಮರಿಲ್ಲದ ಕಡೆ ಬೇರೆ ಊರುಗಳಿಂದ ಕರೆಯಿಸಿ ಮೊಹರಂ ಆಚರಿಸುವ ಸಂಪ್ರದಾಯದ ನಡುವೆಯೂ ತಾಲೂಕಿನ ತಿಪ್ಪನಾಳ, ಹೊಸಗುಡ್ಡ, ಕನಕಾಪೂರ, ಆಕಳಕುಂಪಿ, ವಡಕಿ, ಉಮಳಿ ಕಾಟಾಪೂರ, ಅಡವಿಬಾವಿ, ಚಿರ್ಚನಗುಡ್ಡ, ಚಿರ್ಚಿನಗುಡ್ಡ ತಾಂಡಾ, ಚಿಕ್ಕತಾಂಡಾ, ಅಡವಿಬಾವಿ ತಾಂಡಾಗಳಲ್ಲಿ ಸಂಪ್ರದಾಯಗಳು ಮೊಹರಂ ಆಚರಣೆಗೆ ಅಡ್ಡಿಯಾಗಿದ್ದು, ಈ ಗ್ರಾಮಗಳ ಜನರು ಅಕ್ಕಪಕ್ಕದ ಊರುಗಳಿಗೆ ಹಾಗೂ ಪಟ್ಟಣಕ್ಕೆ ಬಂದು ಮೊಹರಂ ಆಚರಿಸುತ್ತಾರೆ.ಆಕಳಕುಂಪಿ, ವಡಕಿ, ಉಮಳಿ ಕಾಟಾಪೂರದಲ್ಲಿ ಶಕ್ತಿದೇವತೆ ಮಹಾಲಕ್ಷ್ಮೀ ಆರಾಧನೆಯ ಕಾರಣದಿಂದ ಗ್ರಾಮಸ್ಥರು ಮೊಹರಂ ಆಚರಿಸುವುದಿಲ್ಲ. ಹೊಸಗುಡ್ಡದಲ್ಲಿ ಕಳೆದ 2 ವರ್ಷದಿಂದ ಆಚರಣೆ ಮಾಡುತ್ತಿಲ್ಲ. ಇಲ್ಲಿ ಗ್ರಾಮಸ್ಥರ ಹೊಂದಾಣಿಕೆ ಕೊರತೆಯಿಂದ ಹಬ್ಬದ ಆಚರಣೆಗೆ ಪೊಲೀಸ್ ಇಲಾಖೆ ಅನುಮತಿ ನೀಡಿಲ್ಲ. ಇನ್ನು ಕೆಲವೆಡೆ ಮೊದಲಿಂದಲೂ ಆಚರಣೆ ಮಾಡುವ ಪದ್ಧತಿ ಇಲ್ಲ.
ಮುಸ್ಲಿಮರಿಲ್ಲದ ಊರುಗಳಲ್ಲಿ ಮೊಹರಂ ಆಚರಣೆ:ಮುಸಲ್ಮಾನರೇ ಇಲ್ಲದ ತಾಲೂಕಿನ ಮಲ್ಲಿಗೆವಾಡ, ಬೆನಕನಾಳ, ಗೋಡಿನಾಳ ಹಾಗೂ ಅಡವಿಬಾವಿ ಗ್ರಾಮಗಳಲ್ಲಿ ಅಕ್ಕಪಕ್ಕದ ಗ್ರಾಮದ ಮುಸ್ಲಿಂ ಜನಾಂಗಕ್ಕೆ ಸೇರಿದ ಮುಜಾವರರನ್ನು ಆಹ್ವಾನಿಸಿ ಅಲಾಯಿ ದೇವರನ್ನು ಹೊತ್ತುಕೊಳ್ಳುವುದು, ಓದಿಕೆ ಮಾಡುವುದು, ಪ್ರಾರ್ಥನೆ ಸಲ್ಲಿಸುವುದು ಸೇರಿ ನಾನಾ ಧಾರ್ಮಿಕ ವಿಧಿ-ವಿಧಾನಗಳು ಸಂಪ್ರದಾಯ ಬದ್ಧವಾಗಿ ನಡೆಯುತ್ತವೆ.ಮುಸ್ಲಿಂ ಪದ್ಧತಿಯಂತೆ ಮಂಗಳವಾರ ನಡೆದ ಕತಲ್ ರಾತ್ರಿ ದಿನದಂದು ಸಂಜೆ ಸೂರ್ಯ ಮುಳುಗಿದ ನಂತರ ಹಸೇನ-ಹುಸೇನರನ್ನು ನೆನೆಸುತ್ತಾ ಅಲಾಯಿ ಕುಣಿಗೆ ಬೆಲ್ಲದ ಹಾಲು ಸುರಿದು, ದೇವರಿಗೆ ಸಕ್ಕರೆ ನೈವೇದ್ಯವಾಗಿ ಅರ್ಪಿಸಿ ಭಕ್ತಿಭಾವ ಮೆರೆದರು. ಇನ್ನೂ ಹಿಂದೂ ದೇವರಿಗೆ ಹರಿಕೆ ಹೊತ್ತಂತೆ ಅಲಾಯಿ ದೇವರಿಗೂ ದೀಡ ನಮಸ್ಕಾರ, ಬೆಳ್ಳಿ ಸಾಮಗ್ರಿ ನೀಡುವುದು, ಹಣದ ಹಾರ ಹಾಕುವ ಸಂಪ್ರದಾಯಗಳು ಹಿಂದೂಗಳಿಂದಲೇ ಹೆಚ್ಚಾಗಿ ನಡೆಯುತ್ತಿರುವುದು ವಿಶೇಷವಾಗಿದೆ.ಮೊಹರಂ ಆಚರಣೆಗೆ ಬೇರೆ ಊರುಗಳಿಂದ ಬರುವ ಮುಜಾವರರಿಗೆ ದವಸ, ಧಾನ್ಯ ನೀಡುವುದು, ಗುರುದಕ್ಷಿಣೆಯಾಗಿ ಹಣ ನೀಡುವ ಪದ್ಧತಿ ಈ ಗ್ರಾಮಗಳಲ್ಲಿ ಹತ್ತಾರು ವರ್ಷಗಳಿಂದ ರೂಢಿಯಲ್ಲಿದೆ.
ಭಾವೈಕ್ಯತೆಯ ಈ ಹಬ್ಬವನ್ನು ಗಂಗಾಮತ, ಲಂಬಾಣಿ, ಕುರುಬ, ಪಂಚಮಸಾಲಿ, ವಾಲ್ಮೀಕಿ, ಉಪ್ಪಾರ, ಗೊಲ್ಲ, ರಜಪೂತ, ಹರಿಜನ ಸೇರಿದಂತೆ ನಾನಾ ಸಮುದಾಯಗಳು ಒಗ್ಗೂಡಿ ಆಚರಿಸುವ ಮೂಲಕ ಸಮಾಜಕ್ಕೆ ನಾವೆಲ್ಲರೂ ಒಂದೇ ಎಂಬ ಸಂದೇಶವನ್ನು ಸಾರುತ್ತಿವೆ.ಸಮಾಜದಲ್ಲಿ ಒಗ್ಗಟ್ಟು, ಭಿನ್ನಾಭಿಪ್ರಾಯಗಳು ದೂರವಾಗಿ ಐಕ್ಯತೆ ಮೂಡಿಸುವ ಶಕ್ತಿ ಮೊಹರಂ ಹಬ್ಬಕ್ಕಿದೆ. ಇಂತಹ ಆಚರಣೆಗಳಿಂದಲೇ ಎಲ್ಲ ವರ್ಗದ ಜನ ಒಂದಾಗಿ ಜೀವನ ನಡೆಸಲು ಸಾಧ್ಯ. ಮುಸಲ್ಮಾನರಿಲ್ಲದ ಊರುಗಳಲ್ಲಿ ಮೊಹರಂ ಆಚರಿಸುವುದು ಒಂದು ವಿಶೇಷವೇ ಸರಿ ಎನ್ನುತ್ತಾರೆ ಮಲ್ಲಿಗೆವಾಡ ಗ್ರಾಮಸ್ಥ ಮುದಿಯಪ್ಪ ನಾಯಕ.