ಸಾರಾಂಶ
ಮುಂದಿನ ದಿನಗಳಲ್ಲಿ ನಿಖಿಲ್ ಕುಮಾರಸ್ವಾಮಿ ಜಿಲ್ಲೆಗೆ ಆಗಮಿಸಿದಾಗ ತಮ್ಮ ಪಕ್ಷ ಸಂಘಟನೆ ಬಗ್ಗೆ ಮಾತನಾಡಿಕೊಂಡು ಹೋಗಲಿ. ಆದರೆ, ಚೆಲುವರಾಯಸ್ವಾಮಿ ಅವರು ಅಥವಾ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡಿದರೆ ನಮಗೂ ನಿಮ್ಮ ಬಗ್ಗೆ ಮಾತನಾಡಲು ಬರುತ್ತದೆ .
ಕನ್ನಡಪ್ರಭ ವಾರ್ತೆ ಮದ್ದೂರು
ಲೋಕಸಭೆ, ವಿಧಾನಸಭೆ ಸೇರಿ ಮೂರು ಚುನಾವಣೆಗಳಲ್ಲಿಯೂ ಮತದಾರರಿಂದ ತಿರಸ್ಕರಗೊಂಡಿರುವ ನಿಖಿಲ್ ಕುಮಾರಸ್ವಾಮಿ ಅವರಿಂದ ನಮ್ಮ ನಾಯಕ ಚಲುವರಾಯಸ್ವಾಮಿ ಅವರು ಪಾಠ ಕಲಿಯುವ ಅಗತ್ಯವಿಲ್ಲ ಎಂದು ನಾಗಮಂಗಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ದಿವಾಕರ್ ಕಿಡಿಕಾರಿದರು.ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಜನತೆಗೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರ ಕೊಡುಗೆ ಏನೆಂಬುದು ಗೊತ್ತಿದೆ, ನಿಖಿಲ್ ಕುಮಾರಸ್ವಾಮಿ ಅವರಿಂದ ಸರ್ಟಿಫಿಕೇಟ್ ಅವಶ್ಯಕತೆ ಇಲ್ಲ ಎಂದು ಟೀಕಿಸಿದರು.
ನಿಖಿಲ್ ಕುಮಾರಸ್ವಾಮಿ ಸಚಿವ ಎನ್.ಚಲುವರಾಯಸ್ವಾಮಿ ಬಗ್ಗೆ ಲಘುವಾಗಿ ಮಾತನಾಡಿರುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಚಲುವರಾಯಸ್ವಾಮಿ ಅವರ ಬಗ್ಗೆ ಲಘುವಾಗಿ ಮಾತನಾಡಿದರೆ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಮಂಡ್ಯ ಸಂಸದರಾದ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾದ ನಂತರ ಮಂಡ್ಯ ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ಮೊದಲು ನಿಖಿಲ್ ತಿಳಿಸಲಿ. ಆನಂತರ ಸಚಿವರು ಜಿಲ್ಲೆಗೆ ಏನು ಕೊಡುಗೆಗಳನ್ನು ನೀಡಿದ್ದಾರೆ ಎಂಬುದನ್ನು ನಾವು ದಾಖಲೆ ಸಮೇತ ನೀಡುತ್ತೇವೆ ಎಂದು ಸವಾಲು ಹಾಕಿದರು.
ಮೂರು ಬಾರಿ ಚುನಾವಣೆಗಳಲ್ಲಿ ಸೋತರೂ ಇನ್ನೂ ಬುದ್ಧಿ ಬಂದಂತೆ ಕಾಣುತ್ತಿಲ್ಲ. ಚುನಾವಣೆ ವೇಳೆ ಚನ್ನಪಟ್ಟಣ, ರಾಮನಗರ ಹಾಗೂ ಮಂಡ್ಯ ಕ್ಷೇತ್ರಗಳು ನನ್ನ ಕಣ್ಣಿದ್ದಂತೆ ಎಂದು ಹೇಳುತ್ತಾರೆ. ಇವರಿಗೆ ಸ್ವಂತ ಕ್ಷೇತ್ರವಿಲ್ಲ. ಮೊದಲು ತವರು ಕ್ಷೇತ್ರ ಯಾವುದು ಎಂದು ತಿಳಿಸಲಿ ಅಥವಾ ಯಾವುದಾದರೂ ಸ್ಥಳಿಯ ಸಂಸ್ಥೆ ಚುನಾವಣೆಗಳಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಲಿ ಎಂದು ಸಲಹೆ ನೀಡಿದರು.ಮುಂದಿನ ದಿನಗಳಲ್ಲಿ ನಿಖಿಲ್ ಕುಮಾರಸ್ವಾಮಿ ಜಿಲ್ಲೆಗೆ ಆಗಮಿಸಿದಾಗ ತಮ್ಮ ಪಕ್ಷ ಸಂಘಟನೆ ಬಗ್ಗೆ ಮಾತನಾಡಿಕೊಂಡು ಹೋಗಲಿ. ಆದರೆ, ಚೆಲುವರಾಯಸ್ವಾಮಿ ಅವರು ಅಥವಾ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡಿದರೆ ನಮಗೂ ನಿಮ್ಮ ಬಗ್ಗೆ ಮಾತನಾಡಲು ಬರುತ್ತದೆ ಎಂದು ಎಚ್ಚರಿಸಿದರು.
ಸುದ್ಧಿಗೋಷ್ಠಿಯಲ್ಲಿ ಗ್ರಾಪಂ ಅಧ್ಯಕ್ಷ ಸಂತೋಷ್ ಕೊಟ್ಟಿಗೆಯಾರ್, ಸದಸ್ಯರಾದ ಪರ್ವೇಜ್ಅಹಮದ್, ಗಿರೀಶ್, ಸಾವಿತ್ರ ಸುರೇಶ್, ವಿಎಸ್ ಎಸ್ ಬಿಎನ್ ನಿರ್ದೇಶಕ ಶಿವಲಿಂಗಯ್ಯ ಇದ್ದರು.