ಸಾರಾಂಶ
ಚನ್ನರಾಯಪಟ್ಟಣ : ರಾಜಭವನದಲ್ಲಿ ಮಾಂಸಾಹಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ. ನಾವು ರಾಜಭವನಕ್ಕೆ ಯಾರೇ ಬಂದರೂ ಶಾಕಾಹಾರವನ್ನೇ ಉಣಬಡಿಸುತ್ತೇವೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಹೇಳಿದ್ದಾರೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದಲ್ಲಿ ಶ್ರೀಜೈನ ಮಠದ ಆಡಳಿತ ಮಂಡಳಿ ಗುರುವಾರ ಹಮ್ಮಿಕೊಂಡಿದ್ದ ಭಗವಾನ್ ಮಹಾವೀರರ 2624ನೇ ಜನ್ಮ ಕಲ್ಯಾಣೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ರಾಜಭವನಕ್ಕೆ ವಿದೇಶಿಯರು ಬಂದರೂ ಸಸ್ಯಾಹಾರವನ್ನೇ ನೀಡಲಾಗುತ್ತದೆ ಎಂದು ತಿಳಿಸಿದರು.
ಜೈನ ಧರ್ಮ ಅಹಿಂಸೆ ಪ್ರತಿಪಾದಿಸುತ್ತದೆ. ಆದರೆ ಈ ಕ್ಷೇತ್ರದ ಸುತ್ತಲೂ ಮಾಂಸ ಹಾಗೂ ಮದ್ಯದ ಅಂಗಡಿ ಹೆಚ್ಚಿವೆ. ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿಸಿದರಲ್ಲದೆ, ಈ ಬಗ್ಗೆ ಸರ್ಕಾರದ ಜೊತೆ ಮಾತನಾಡುವಂತೆ ಸಮಾರಂಭದಲ್ಲಿದ್ದ ಸಚಿವ ಡಿ.ಸುಧಾಕರ್ ಅವರಿಗೆ ಸೂಚಿಸಿದರು.
ಸಾನ್ನಿಧ್ಯ ವಹಿಸಿದ್ದ ಕ್ಷೇತ್ರದ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಜೈನ ಧರ್ಮದ ಸ್ಥಾಪಕ 24ನೇ ತೀರ್ಥಂಕರ ಮಹಾವೀರನೆಂದು ಉಲ್ಲೇಖಿಸುತ್ತಿರುವುದು ತಪ್ಪು ಎಂದರು. ಪ್ರತಿ ಧರ್ಮದ ಮೂಲ ಉದ್ದೇಶ ಮೋಕ್ಷ ಪಡೆಯುವುದಾಗಿದ್ದು ಮನ, ವಚನ, ಕಾಯಗಳಿಂದ ಯಾರಿಗೂ ಹಿಂಸೆ ಮಾಡದೇ ಇರುವುದು ಅಹಿಂಸೆ ಎಂದರು.
ಲೋಕಸಭಾ ಸದಸ್ಯ ಶ್ರೇಯಸ್ ಪಟೇಲ್, ಶಾಸಕ ಸಿ.ಎನ್.ಬಾಲಕೃಷ್ಣ, ಕ್ಷೇತ್ರದ ಪ್ರಸಾದ ಭವನಕ್ಕೆ ಕೇಂದ್ರದ ಬಳಿ ಸಹಕಾರಕ್ಕೆ ಸಚಿವರಲ್ಲಿ ಪ್ರಸ್ತಾಪಿಸಿದ್ದೇವೆ ಎಂದು ತಿಳಿಸಿದರು.
ಎಚ್.ಡಿ.ದೇವೇಗೌಡರು ಸಹ ಕೇಂದ್ರದ ಸಚಿವರಲ್ಲಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಒತ್ತಾಯಿಸಿದ್ದಾರೆಂದು ಶಾಸಕರು ತಿಳಿಸಿದರು. ಅತಿಥಿಗಳಾಗಿದ್ದ ಸಚಿವ ಡಿ.ಸುಧಾಕರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಮಾಜಿ ಶಾಸಕ ಎಂ.ಎ.ಗೋಪಾಲಸ್ವಾಮಿ ಮಾತನಾಡಿದರು.