ಸಾರಾಂಶ
ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ಸಂಗತಿಗಳು ದಿನಪತ್ರಿಕೆಗಳಲ್ಲಿ ಸುದ್ದಿಯಾಗಿ ಪ್ರಚಾರವಾಗುತ್ತವೆ. ಕಚೇರಿಗೆ ಬರುವ ಮುನ್ನ ಅಧಿಕಾರಿಗಳು, ಸಿಬ್ಬಂದಿ ನಿಮ್ಮ ಕೌಟುಂಬಿಕ ವಿಚಾರಗಳನ್ನೆಲ್ಲ ಮನೆಯಲ್ಲಿಯೇ ಬಿಟ್ಟು ಬನ್ನಿ. ನೀವು ಮಾಡುವ ಕೆಲಸಕ್ಕೆ ನ್ಯಾಯ ಒದಗಿಸುವ ಕಾರ್ಯವನ್ನು ನೀವು ಮಾಡಬೇಕಿದೆ.
ಕೆಜಿಎಫ್ : ತಾಳ್ಮೆಗೂ ಒಂದು ಮಿತಿ ಇದೆ, ನಾನು ಎಷ್ಟು ಒಳ್ಳೆಯತನದಿಂದ ನಡೆದುಕೊಳ್ಳುತ್ತೇನೋ ಅಲ್ಲಿಯವರೆಗೆ ಮಾತ್ರ ನಾನು ಒಳ್ಳೆಯವಳು, ತಾಳ್ಮೆ ಕಳೆದುಕೊಂಡರೆ ನಿಮ್ಮನ್ನು ಯಾರೂ ರಕ್ಷಿಸಲು ಸಾಧ್ಯವಿಲ್ಲ ಎಂದು ಶಾಸಕಿ ರೂಪಕಲಾ ಶಶಿಧರ್ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ತಾಲೂಕು ಆಡಳಿತ ಸೌಧದಲ್ಲಿ ಕಂದಾಯ, ಆಹಾರ ಮತ್ತು ನಾಗರೀಕ ಸರಬರಾಜು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.ಕಚೇರಿಗೆ ಅಲೆದಾಡಿಸಬೇಡಿ
ವಿವಿಧ ಕೆಲಸ ಕಾರ್ಯಗಳಿಗೆಂದು ಪ್ರತಿನಿತ್ಯ ತಾಲೂಕು ಕಚೇರಿಗೆ ಬರುವ ಸಾರ್ವಜನಿಕರನ್ನು ನೌಕರರು ಮತ್ತು ಅಧಿಕಾರಿಗಳು ವಿನಾಕಾರಣ ಅಲೆದಾಡಿಸುವ ಪ್ರವೃತ್ತಿ ಕೂಡಲೇ ಬಿಡಬೇಕು, ಸಾರ್ವಜನಿಕರಿಗೆ ಇಂದು ಬಾ, ನಾಳೆ ಬಾ ಎಂದು ಹೇಳಿ ಕಳುಹಿಸುವುದಾದರೆ ನೀವು ಸರ್ಕಾರಿ ನೌಕರರಾಗಿ ಮುಂದುವರೆಯಲು ಆನ್‌ಫಿಟ್ ಎಂದು ತರಾಟೆಗೆ ತೆಗೆದುಕೊಂಡರು.
ಸಾರ್ವಜನಿಕರಿಗೆ ಸಿಗಬೇಕಾದ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ಸಂಗತಿಗಳು ದಿನಪತ್ರಿಕೆಗಳಲ್ಲಿ ಸುದ್ದಿಯಾಗಿ ಪ್ರಚಾರವಾಗುತ್ತವೆ. ಕಚೇರಿಗೆ ಬರುವ ಮುನ್ನ ನಿಮ್ಮ ಕೌಟುಂಬಿಕ ವಿಚಾರಗಳನ್ನೆಲ್ಲ ಮನೆಯಲ್ಲಿಯೇ ಬಿಟ್ಟು ಬನ್ನಿ. ನಿಮ್ಮ ಲಿಮಿಟ್‌ಗಳನ್ನು ಮೀರಬಾರದು ಎನ್ನುವ ಸಾಮಾನ್ಯ ಜ್ಞಾನ ನಿಮಗಿಲ್ಲವೇ, ದೇವರು ನಿಮಗೆ ಸರ್ಕಾರಿ ಕೆಲಸವನ್ನು ನೀಡಿದ್ದಾನೆ. ನೀವು ಮಾಡುವ ಕೆಲಸಕ್ಕೆ ನ್ಯಾಯ ಒದಗಿಸುವ ಕಾರ್ಯವನ್ನು ನೀವು ಮಾಡಬೇಕಿದೆ.
ಸೇವೆಗಳ ನಾಮಫಲಕ ಅಳವಡಿಸಿಇಷ್ಟು ದೊಡ್ಡ ಭವ್ಯವಾದ ಕಚೇರಿ ನಿರ್ಮಾಣ ಮಾಡಿದ್ದರೂ ಯಾವ ಸೇವೆ ಎಲ್ಲಿ ದೊರೆಯುತ್ತದೆ ಎಂದು ಮಾಹಿತಿ ನೀಡುವ ನಾಮಫಲಕಗಳು ಎಲ್ಲಿಯೂ ಕಾಣಿಸುತ್ತಿಲ್ಲ. ಯಾವ ಅಧಿಕಾರಿ ಯಾವ ಇಲಾಖೆಗೆ ಸೇರಿದ್ದಾರೆ ಎಂದು ಕಂಡುಹಿಡಿಯಲು ಸಾಧ್ಯವಿಲ್ಲ. ನಿಮ್ಮ ಇಲಾಖೆಗೆ ಸಂಬಂಧಿಸಿದ ಗುರುತಿನ ಚೀಟಿ ಕೊರಳಲ್ಲಿ ಹಾಕಿಕೊಳ್ಳಲು ಇರುವ ಸಮಸ್ಯೆಯಾದರೂ ಏನು.
ಸಾರ್ವಜನಿಕರಿಗೆ ಯಾವ ಸೇವೆ ಎಲ್ಲಿ ದೊರೆಯುತ್ತದೆ ಎಂದು ಗೊತ್ತಾಗದೇ ಕಚೇರಿಯ ಹೊರಗೆ ಟೀ, ಕಾಫಿ ಅಂಗಡಿಗಳ ಬಳಿ ಹೋಗಿ ಈ ಸೇವೆ ಎಲ್ಲಿ ಸಿಗುತ್ತದೆ ಎಂದು ಕೇಳಬೇಕಾದ ದುಸ್ಥಿತಿ ಎದುರಾಗಿರುವುದು ನಾಚಿಕೆಗೇಡಿನ ವಿಚಾರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹಣಕ್ಕಾಗಿ ರೈತರನ್ನು ಪೀಡಿಸಬೇಡಿನನ್ನ ಕ್ಷೇತ್ರದ ಬಡ ರೈತರಿಗೆ ವಿನಾಕಾರಣ ತೊಂದರೆ ನೀಡಿದರೆ, ಹಣಕ್ಕಾಗಿ ಪೀಡಿಸಿದರೆ ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವೇ ಇಲ್ಲ. ಅಂತಹವರಿಗೆ ನಾನು ಗೌರವವನ್ನು ನೀಡುವುದಿಲ್ಲ ಮತ್ತು ಅಂತಹವರು ಯಾರು ಯಾವ ಹಂತದಲ್ಲಿ ತಪ್ಪು ಮಾಡುತ್ತಿದ್ದೀರ ಎಂಬುದನ್ನು ಹುಡುಕುತ್ತೇನೆ. ಬಳಿಕ ಅದಕ್ಕೆ ಯಾವ ರೀತಿ ಪರಿಹಾರ ಕಂಡುಕೊಳ್ಳಬೇಕೆಂಬುದು ಚೆನ್ನಾಗಿ ತಿಳಿದಿದೆ.
ನನ್ನ ಸಹನೆಯನ್ನು ಪರೀಕ್ಷೆ ಮಾಡುವುದು, ನನ್ನ ಒಳ್ಳೆಯತನವನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ಸಹಿಸಲು ಸಾಧ್ಯವಿಲ್ಲ. ವಂಶವೃಕ್ಷ, ಜಾತಿ, ಆದಾಯ ಪ್ರಮಾಣ ಪತ್ರ, ವಿಧವಾ ವೇತನ, ವೃದ್ಧಾಪ್ಯ ವೇತನ, ಅಂಗವಿಕಲ ವೇತನ, ಜಮೀನಿನ ಫಹಣಿ ದುರಸ್ಥಿ, ಪಡಿತರ ಚೀಟಿ, ಗೃಹಲಕ್ಷ್ಮಿ, ಅನ್ನಭಾಗ್ಯ ಸೇರಿದಂತೆ ಆಯಾ ಇಲಾಖೆಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ರಿಜಿಸ್ಟರ್‌ಗಳನ್ನು ನಿರ್ವಹಿಸುವಂತೆ ತಿಳಿಸಿದ ಅವರು, ಪ್ರತಿ ದಿನ ಎಷ್ಟು ಮಂದಿ ಯಾವ ಸೇವೆಗೆಂದು ಬಂದಿದ್ದಾರೆ, ಯಾವ ಅಧಿಕಾರಿ/ಸಿಬ್ಬಂದಿಯನ್ನು ಸಂಪರ್ಕಿಸಿದ್ದಾರೆ ಎಂಬುದನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದರು.
ರಿಜಿಸ್ಟರ್ ನಿರ್ವಹಣೆ ಕಡ್ಡಾಯ
ತಮ್ಮ ಕೆಲಸಗಳಿಗೆಂದು ಬರುವ ಸಾರ್ವಜನಿಕರ ಹೆಸರು, ಯಾವ ಸೇವೆಗೆ ಅರ್ಜಿ ನೀಡಿದ್ದಾರೆ ಯಾವ ದಿನದಂದು ಅರ್ಜಿಯನ್ನು ಸಲ್ಲಿಸಿದ್ದಾರೆ ಎಂಬಿತ್ಯಾದಿ ವಿವರಗಳನ್ನು ಕಡ್ಡಾಯವಾಗಿ ನಮೂದಿಸಬೇಕು. ಒಂದು ವಾರದಲ್ಲಿ ಎಷ್ಟು ಅರ್ಜಿಗಳು ಬಂದಿವೆ ಎಷ್ಟು ಅರ್ಜಿಗಳ ವಿಲೇವಾರಿಯಾಗಿದೆ ಎಂಬ ವಿವರಗಳನ್ನು ನಮೂದಿಸಿ ರಿಜಿಸ್ಟರ್ ನಿರ್ವಹಣೆ ಕಡ್ಡಾಯವಾಗಿ ಮಾಡಬೇಕು. ಈ ರಿಜಿಸ್ಟರ್‌ನ್ನು ತಾವಾಗಲೀ ಅಥವಾ ತಹಸೀಲ್ದಾರ್ ರವರಾಗಲೀ ಯಾವುದೇ ಸಮಯದಲ್ಲಿ ಪರಿಶೀಲಿಸುವುದಾಗಿ ತಿಳಿಸಿದರು.ತಹಸೀಲ್ದಾರ್ ನಾಗವೇಣಿ, ಆಹಾರ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ, ಸಿಡಿಪಿಒ ರಾಜೇಶ್ ಇದ್ದರು.