ಸಾರಾಂಶ
ಬೆಳಗಾವಿ : ಸಿಎಂ ರೇಸ್‌ನಲ್ಲಿ ಯಾರೂ ಇಲ್ಲ. ಸಿದ್ದರಾಮಯ್ಯನವರೇ ಸಿಎಂ ಆಗಿರುತ್ತಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಸ್ಥಿರ ಸರ್ಕಾರವನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಸರ್ಕಾರ ಅಸ್ಥಿರ ಮಾಡಲು ಹುನ್ನಾರ ನಡೆಸಿದ್ದಾರ. ಬಹುಮತದ ಸರ್ಕಾರ ಬೀಳಿಸುವುದು, ಒಡೆಯುವುದು, ಆಪರೇಷನ್ ಮಾಡುವುದು ಬಿಜೆಪಿ ಕೆಲಸವಾಗಿದೆ. ಅಭಿವೃದ್ಧಿ ಕೆಲಸವನ್ನು ಬಿಜೆಪಿ ಮುಖಂಡರು ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಡಾ ಪ್ರಕರಣ ಸಂಬಂಧ ಗುರುವಾರ ಸಿಎಂ ಸಿದ್ದರಾಮಯ್ಯ ಅವರ ಭವಿಷ್ಯ ನಿರ್ಧಾರವಾಗೋ ಪ್ರಶ್ನೆಯೇ ಇಲ್ಲ. ಸಿದ್ದರಾಮಯ್ಯ ಸಿಎಂ ಇದ್ದು, ಮುಂದೆಯೂ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ. ಸಿಎಂ ರೇಸ್‌ನಲ್ಲಿ ಯಾರೂ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದರು.
ಕೋರ್ಟಿನಲ್ಲಿ ಯಾವುದೇ ವ್ಯತಿರಿಕ್ತವಾದ ತೀರ್ಮಾನ ಬರಲ್ಲ. ರಾಜ್ಯಪಾಲರು ತನಿಖೆಗೆ ಕೊಟ್ಟಿರುವುದು ಸರಿಯೋ ಇಲ್ಲವೋ ಎಂಬುದಷ್ಟೇ ಕೋರ್ಟ್‌ನಲ್ಲಿರುವ ಪ್ರಕರಣ. ಸಿಎಂ ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ. ಅಧಿಕಾರದ ದುರುಪಯೋಗ ಮಾಡಿಲ್ಲ. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿಯವರು ಸೋಷಿಯಲ್ ಮೀಡಿಯಾದಲ್ಲಿ ಏನೇನೋ ಹಾಕುತ್ತಾರೆ. ಸುಳ್ಳು ಹೇಳುವುದರಲ್ಲಿ, ಪ್ರಚೋದನೆ ಮಾಡುವುದರಲ್ಲಿ ಬಿಜೆಪಿಯವರು ದೇಶದಲ್ಲೇ ನಂಬರ್ ಒನ್ ಆಗಿದ್ದಾರೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಮುರುಗೇಶ ನಿರಾಣಿ ಮೇಲೆ ಇರುವ ಭ್ರಷ್ಟಾಚಾರದ ಕುರಿತು ಅರ್ಜಿಗಳು ರಾಜ್ಯಪಾಲರ ಕಚೇರಿಯಲ್ಲಿ ತಿಂಗಳುಗಟ್ಟಲೇ ಹಾಗೇ ಬಿದ್ದಿವೆ. ಇವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈಗ ಸಿಎಂ ವಿರುದ್ಧ ಖಾಸಗಿ ದೂರು ಬಂದ ತಕ್ಷಣವೇ ನೋಟಿಸ್ ಕೊಟ್ಟಿದ್ದಾರೆ. ಇದರಿಂದ ರಾಜ್ಯಪಾಲರ ಮನಸ್ಥಿತಿ ಗೊತ್ತಾಗುತ್ತದೆ. ಇದರಲ್ಲಿ ಪಕ್ಷಪಾತ ಮಾಡುತ್ತಿರುವುದು ಗೊತ್ತಾಗುತ್ತದೆ. ಸಿಎಂ ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ ಎಂದು ಸಮರ್ಥಿಸಿಕೊಂಡರು.
ಆರೋಗ್ಯ ಇಲಾಖೆಯಲ್ಲಿ ವೈದ್ಯರ ಕೊರತೆ ನಿವಾರಿಸಲು ಪ್ರಯತ್ನಿಸಲಾತ್ತಿದೆ. ಗುತ್ತಿಗೆ ಆಧಾರದ ಮೇಲೆ ತಜ್ಞ ವೈದ್ಯರನ್ನು ಭರ್ತಿ ಮಾಡುತ್ತಿದ್ದೇವೆ. ನಿರೀಕ್ಷಿತ ಪ್ರಮಾಣದಲ್ಲಿ ತಜ್ಞ ವೈದ್ಯರು ಬರುತ್ತಿಲ್ಲ. ನಕಲಿ ವೈದರು ಎಲ್ಲಾ ಕಡೆ ಇದ್ದಾರೆ. ಅಂತವರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.