ಕೆ.ಆರ್. ನಗರದಲ್ಲಿ ಸ್ಪರ್ಧೆ ಮಾಡಿ ಶಾಸಕ, ಮಂತ್ರಿಯಾದೆ. ನನ್ನ ರಾಜಕೀಯ ಹುಟ್ಟು- ಸಾವು ಎರಡೂ ಕೂಡ ಕೆ.ಆರ್. ನಗರ ಕ್ಷೇತ್ರದಲ್ಲಿ ಮಾತ್ರ

ಕನ್ನಡಪ್ರಭ ವಾರ್ತೆ ಮೈಸೂರು

ನಾನು ಬದುಕಿರುವವರೆಗೆ ಕೆ.ಆರ್. ನಗರ ಬಿಟ್ಟು ಯಾವುದೇ ಕಾರಣಕ್ಕೂ ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಸ್ಪಷ್ಪಡಿಸಿಸಿದರು. 2028ರ ಚುನಾವಣೆಗೆ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಕುರಿತ ಪ್ರಶ್ನೆಗೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ನಾನು 2005 ರಲ್ಲಿ ಬದಲಾದ ರಾಜಕೀಯ ಸನ್ನಿವೇಶದಿಂದ ಬಿಜೆಪಿಯಿಂದ ಜೆಡಿಎಸ್‌ ಗೆ ಬಂದೆ. ಕೆ.ಆರ್. ನಗರದಲ್ಲಿ ಸ್ಪರ್ಧೆ ಮಾಡಿ ಶಾಸಕ, ಮಂತ್ರಿಯಾದೆ. ನನ್ನ ರಾಜಕೀಯ ಹುಟ್ಟು- ಸಾವು ಎರಡೂ ಕೂಡ ಕೆ.ಆರ್. ನಗರ ಕ್ಷೇತ್ರದಲ್ಲಿ ಮಾತ್ರ ಎಂದರು.ಇವತ್ತಿನ ರಾಜಕೀಯ ವ್ಯವಸ್ಥೆಯನ್ನು ನೋಡಿದರೆ ನಾವು ರಾಜಕಾರಣಿಗಳು ಎಂದು ಹೇಳಿಕೊಳ್ಳಲು ಅಸಹ್ಯವಾಗುತ್ತಿದೆ. ನಾನು ಅಧಿಕಾರಕ್ಕೆ ಆಸೆ ಪಟ್ಟಿದ್ದರೆ ಎಂದೋ ಎಂಪಿ, ಎಂಎಲ್ಸಿ ಆಗುತ್ತಿದ್ದೆ ಎಂದು ಅವರು ಹೇಳಿದರು.ನಾನು ಸಕ್ರಿಯ ರಾಜಕಾರಣದಲ್ಲಿರುವವರೆಗೆ ನನ್ನ ಕುಟುಂಬದ ಯಾರೊಬ್ಬರೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಒಂದು ವೇಳೆ ನನ್ನ ಕುಟುಂಬದ ಯಾರಾದರೂ ಚುನಾವಣೆಗೆ ಸ್ಪರ್ಧಿಸಿದರೆ ನಾನು ಆ ಕೂಡಲೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದರು.