ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಬೇಡ: ಶಾಸಕ ಜಗದೀಶ ಗುಡಗುಂಟಿ

| Published : Jan 22 2025, 12:32 AM IST

ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಬೇಡ: ಶಾಸಕ ಜಗದೀಶ ಗುಡಗುಂಟಿ
Share this Article
  • FB
  • TW
  • Linkdin
  • Email

ಸಾರಾಂಶ

ನಗರದಲ್ಲಿರುವ ಅನೇಕ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತವಾದ ಮಾರ್ಗಗಳನ್ನು ಕಂಡುಕೊಳ್ಳಬೇಕಾಗಿರುವುದು ಅನಿವಾರ್ಯವಾಗಿದೆ. ಅದಕ್ಕಾಗಿ ಎಲ್ಲರೂ ಒಂದಾಗಿ ಶ್ರಮಿಸಬೇಕು.

ಕನ್ನಡಪ್ರಭ ವಾರ್ತೆ ಜಮಖಂಡಿ

ನಗರದ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡುವುದು ಬೇಡ. ನಗರದ ಸಮಸ್ಯೆಗಳ ಪರಿಹಾರಕ್ಕೆ ಎಲ್ಲರೂ ಸೇರಿ ಶ್ರಮಿಸೋಣ ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.

ನಗರಸಭೆಯ ಸಾಮಾನ್ಯಸಭೆ ಉದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿರುವ ಅನೇಕ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತವಾದ ಮಾರ್ಗಗಳನ್ನು ಕಂಡುಕೊಳ್ಳಬೇಕಾಗಿರುವುದು ಅನಿವಾರ್ಯವಾಗಿದೆ. ಅದಕ್ಕಾಗಿ ಎಲ್ಲರೂ ಒಂದಾಗಿ ಶ್ರಮಿಸಬೇಕು. ತಿಂಗಳಿಗೊಮ್ಮೆ ಸಭೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳೋಣ. ನಗರದ ಜನಸಂಖ್ಯೆ 10 ಲಕ್ಷ ಮೀರಿದೆ. ಜನಸಂಖ್ಯೆಗೆ ಅನುಗುಣವಾಗಿ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಬೇಕು. ನಗರದ ರಸ್ತೆಗಳ ಅಗಲೀಕರಣ, ಸರ್ಕಾರಿ ಶಾಲಾ ಕಾಲೇಜು, ಕಚೇರಿಗಳನ್ನು ನಗರದ ಹೊರವಲಯಕ್ಕೆ ಸ್ಥಳಾಂತರಿಸುವುದು. ಹೀಗೆ ಸಮಗ್ರವಾದ ಟೌನ್‌ ಪ್ಲ್ಯಾನಿಂಗ್‌ ಆಗಬೇಕಿದೆ. ಅದಕ್ಕಾಗಿ ಸರ್ಕಾರಕ್ಕೆ 2000 ಎಕರೆ ಜಮೀನು ಮಂಜೂರು ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಬಳಸಿದ ನೀರನ್ನು ಮರು ಬಳಕೆಗೆ ಶುದ್ಧೀಕರಿಸುವ ಯೋಜನೆ ಕೆಯುಐಡಿಎಫ್‌ಸಿ ಅಡಿಯಲ್ಲಿ ಸ್ವಚ್ಛ ಭಾರತ ಯೋಜನೆ ಅನುಷ್ಠಾನಕ್ಕೆ 5.15 ಕೋಟಿ ರು. ಕೇಂದ್ರ ಸರ್ಕಾರದಿಂದ ಮಂಜೂರಾಗಿದೆ. ಈ ಪೈಕಿ 25 ಲಕ್ಷ ರು. ವಾಹನ ಹಾಗೂ ಯಂತ್ರ ಖರೀದಿಗೆ 35 ಲಕ್ಷ ರು. ಬಳಸಿಕೊಳ್ಳಬಹುದಾಗಿದೆ ಎಂದರು. ನಗರದಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಹೆಚ್ಚುವರಿಯಾಗಿ 13 ರಿಂದ 14 ಲಕ್ಷ ರು. ಅನುದಾನ ಬಿಡುಗಡೆಯಾಗಲಿದೆ ಎಂದು ಹೇಳಿದರು.

ನಗರಸಭೆಯ ಅಧ್ಯಕ್ಷ ಪರಮಾನಂದ ಗೌರೋಜಿ ಮಾತನಾಡಿ, ನಗರದ ಅಭಿವೃದ್ಧಿ ಹಾಗೂ ಮೂಲಭೂತ ಸೌಲಭ್ಯ ಕಲ್ಪಿಸಿ ಕೊಡಲು ನಗರಸಭೆ ಶ್ರಮಿಸುತ್ತಿದೆ. ಎಲ್ಲ ಸದಸ್ಯರು ಪಕ್ಷಬೇಧ ಮರೆತು ಸಹಕಾರ ನೀಡಬೇಕು. ನಗರಕ್ಕೆ ಅವಶ್ಯವಿರುವ ರಸ್ತೆಗಳ ನಿರ್ಮಾಣ ಹಾಗೂ ಟ್ರಾಫಿಕ್‌ ಸಮಸ್ಯೆ ಪರಿಹಾರ ಒತ್ತುವರಿ ತೆರವು, ಬೀದಿ ಬದಿ ವ್ಯಾಪಾರಿಗಳಿಗೆ ಸ್ಥಳಾವಕಾಶ, ಮಹಿಳೆಯರಿಗೆ ಶೌಚಾಲಯಗಳ ನಿರ್ಮಾಣ, ಕಸವಿಲೇವಾರಿ, ಕುಡಿಯುವ ನೀರು ಪೂರೈಕೆ ಎಲ್ಲ ಸಂದರ್ಭದಲ್ಲಿ ಸದಸ್ಯರು ಸಲಹೆ ನೀಡಿ, ಸಹಕಾರ ಮಾಡಬೇಕು ಎಂದರು.

ಪೌರಾಯುಕ್ತ ಜ್ಯೋತಿ ಗಿರೀಶ ಮಾತನಾಡಿ, ಅಲ್ಪಸಂಖ್ಯಾತರ ಇಲಾಖೆಯಿಂದ ಅನುದಾನ ಬಿಡುಗಡೆ ಯಾಗಿದೆ. ವಾರ್ಡ್‌ ಸಂಖ್ಯೆ 5, 8, 16, 22, 24ರಲ್ಲಿ ಸಿ.ಸಿ. ರಸ್ತೆಗಳ ನಿರ್ಮಾಣ, ಪೈಪ್‌ಲೈನ್‌ಗಳ ಅಳವಡಿಕೆ, ಕೊಳವೆಬಾವಿಗಳನ್ನು ಕೊರೆಯಿಸಿ ಅಗತ್ಯವಿರುವ ಸೌಕರ್ಯ ಒದಗಿಸಲಾಗುವುದು ಎಂದು ಸಭೆಯ ಗಮನಕ್ಕೆ ತಂದರು. ನಾಮನಿರ್ದೇಶಿತ ಸದಸ್ಯರು ತಮ್ಮ ಅಧಿಕಾರದ ವ್ಯಾಪ್ತಿ ತಿಳಿದುಕೊಂಡು, ಸರ್ಕಾರದ ಯೋಜನೆಗಳ ಅನುಷ್ಠಾನ ಹಾಗೂ ಅದರ ಬಗಗೆಗಿನ ಚರ್ಚೆಯಲ್ಲಿ ತಮ್ಮ ಸಲಹೆ ನೀಡಬೇಕು ಎಂದು ತಿಳಿಸಿದರು.

ಉಪಾಧ್ಯಕ್ಷೆ ರೇಖಾ ಕಾಂಬ್ಳೆ ಮಾತನಾಡಿ, ಅಧಿಕಾರಿಗಳು ನಗರಸಭೆ ಸದಸ್ಯರ ಗಮನಕ್ಕೆ ತರುವ ಮೂಲಕ ಅವರ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾರ್ಯ ಮಾಡಬೇಕು ಎಂದು ಹೇಳಿದರು. ಸದಸ್ಯರಾದ ಸಿದ್ದು ಮೀಸಿ, ಈಶ್ವರ ವಾಳೆಣ್ಣವರ, ದಿಲಾವರ ಶಿರೋಳ, ಗುರುಪಾದಪ್ಪ ಮೆಂಡಿಗೇರಿ, ಕುಶಾಲ ವಾಗ್ಮೊರೆ, ಪ್ರಶಾಂತ ಚರಕಿ, ದಾನೇಶ ಘಾಟಗೆ, ಕಿರಣ ಪಿಸಾಳೆ, ದಶರಥ, ಮಲ್ಲಮ್ಮ ಪಾಯಗೊಂಡ, ಅನಸೂಯಾ ಅಸುಗಡೆ, ಪೂಜಾ ವಾಳ್ವೇಕರ, ಚರ್ಚೆಯಲ್ಲಿ ಭಾಗವಹಿಸಿದ್ದರು.

ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ, ಮಾಂಸ ಮಾರಾಟಗಾರರ ತ್ಯಾಜ್ಯ ವಿಲೇವಾರಿ, ಹಕ್ಕುಪತ್ರಗಳ ನೀಡಿಕೆ, ಮುಂತಾದ ವಿಷಯಗಳು ಚರ್ಚೆಗೆ ಬಂದವು. ಮಳೆಗಾಲದಲ್ಲಿ ಯೋಗನಾರಾಯಣ ದೇವಸ್ಥಾನಕ್ಕೆ ಚರಂಡಿ ನೀರು ನುಗ್ಗುವುದನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳಲು ಮನವಿ ಮಾಡಲಾಯಿತು. ವೀರ ಸಾವರ್ಕರ, ವೃತ್ತ ನಿರ್ಮಾಣ, ನಗರದಲ್ಲಿರುವ ಶಿವಾಜಿ ವೃತ್ತದ ಅಭಿವೃದ್ಧಿ ಪಡಿಸಲು ಮನವಿ ಸಲ್ಲಿಸಿದ ಸದಸ್ಯರು ಕಾಂಗ್ರೆಸ್‌ ಪಕ್ಷಕ್ಕೆ ನಿವೇಶನ ಮಂಜೂರು ಮಾಡಿದಂತೆ ಉಳಿದ ಪಕ್ಷಗಳಿಗೂ ನಿವೇಶನಗಳನ್ನು ಮಂಜೂರು ಮಾಡುವಂತೆ ಕೋರಿದರು. ನಗರದ ಸ್ಲಂಗಳ ಅಭಿವೃದ್ಧಿ ಹಾಗೂ ಉದ್ಯಾನವನಗಳ ಅಭಿವೃದ್ಧಿಗೆ ಕ್ರಮ ಜರುಗಿಸು ವಂತೆ ಸಭೆಯ ಗಮನ ಸೆಳೆಯಲಾಯಿತು.