ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಬೇಡ

| Published : Feb 04 2024, 01:31 AM IST

ಸಾರಾಂಶ

ಸಹಕಾರ ಕ್ಷೇತ್ರವು ರಾಜಕೀಯ ರಹಿತವಾಗಿದ್ದರೆ ಮಾತ್ರ ಉತ್ತಮ ಆಡಳಿತ ನೀಡಲು ಸಾಧ್ಯ, ಸಹಕಾರ ಕ್ಷೇತ್ರದಲ್ಲಿ ದುಡಿದವರಿಗೆ ಇದರ ಅರಿವು ಇರುತ್ತದೆ. ಸಹಕಾರದ ಗಂಧ ಅರಿಯದವರನ್ನು ನಾಮನಿರ್ದೇಶನ ಮಾಡುವುದು ಸರಿಯಲ್ಲ

ಕನ್ನಡಪ್ರಭ ವಾರ್ತೆ ಕೋಲಾರ

ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಮೂಗು ತೋರಿಸಬಾರದು. ಆಡಳಿತ ಪಕ್ಷಗಳು ಇಲ್ಲದ ಕಾನೂನುಗಳನ್ನು ತಂದು ಸಹಕಾರ ಕ್ಷೇತ್ರವನ್ನು ಬಲಹೀನ ಮಾಡುತ್ತಿದೆ ಎಂದು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ನಿರ್ದೇಶಕ ವಡಗೂರು ಡಿ.ವಿ.ಹರೀಶ್ ಬೇಸರ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಸಹಕಾರ ಒಕ್ಕೂಟದ ಸಭಾಂಗಣದಲ್ಲಿ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತ, ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ, ಸಹಕಾರ ಇಲಾಖೆಯಿಂದ ಕೋಲಾರ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ಒಂದು ದಿನದ ವಿಶೇಷ ತರಬೇತಿ ಕಾರ್ಯಾಗಾರ(ದಕ್ಷಿಣ ಭಾಗ) ಉದ್ಘಾಟಿಸಿ ಮಾತನಾಡಿದರು.

ಆಡಳಿತರೂಢ ಸರ್ಕಾರಗಳು ನಾಮನಿರ್ದೇಶನ ಮಾಡುವುದಕ್ಕೆ ನಮ್ಮ ಅಭ್ಯಂತರವಿಲ್ಲ, ರಾಜಕಾರಣ ಮಾಡಲು ಹಲವು ನಿಗಮ ಮಂಡಳಿಗಳಿಗೆ ನಾಮಕರಣ ಮಾಡುವುದು ಸಹಜ, ಆದರೆ ಸಹಕಾರ ಕ್ಷೇತ್ರದಲ್ಲಿ ರಾಜಕಾರಣ ಮಾಡಲು ನಾಮ ನಿದರ್ಶನ ಮಾಡುವುದು ಸಮಂಜಸವಲ್ಲ. ಇಒಗೆ ಮತದಾನದ ಹಕ್ಕನ್ನು ತೆಗೆಯಬೇಕು ಎಂದರು.ನಾಮನಿರ್ದೇಶನ ಬೇಡಒಕ್ಕೂಟದ ನಿದೇರ್ಶಕ ಊರಿಗಿಲಿ ರುದ್ರಸ್ವಾಮಿ ಮಾತನಾಡಿ, ಸಹಕಾರ ಕ್ಷೇತ್ರವು ರಾಜಕೀಯ ರಹಿತವಾಗಿದ್ದರೆ ಮಾತ್ರ ಉತ್ತಮ ಆಡಳಿತ ನೀಡಲು ಸಾಧ್ಯ, ಸಹಕಾರ ಕ್ಷೇತ್ರದಲ್ಲಿ ದುಡಿದವರಿಗೆ ಇದರ ಅರಿವು ಇರುತ್ತದೆ. ಸಹಕಾರದ ಗಂಧ ಅರಿಯದವರನ್ನು ನಾಮನಿರ್ದೇಶನ ಮಾಡುವುದನ್ನು ವಿರೋಧಿಸಬೇಕು, ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಪ್ರತಿಯೊಬ್ಬರ ಶ್ರಮ ಅಗತ್ಯವಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷ ಪೆಮ್ಮಶೆಟ್ಟಿಹಳ್ಳಿ ಸುರೇಶ್ ಮಾತನಾಡಿ, ಒಕ್ಕೂಟದ ಪ್ರಮುಖ ಧ್ಯೇಯ ತರಬೇತಿ ನೀಡುವುದು ಒಕ್ಕೂಟದ ಸದಸ್ಯರಿಗೆ ಸಹಕಾರ ಕ್ಷೇತ್ರದ ನಿಯಮಗಳು, ಕಾನೂನುಗಳ ಬಗ್ಗೆ ಹಾಗೂ ಸೌಲಭ್ಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಮಾಹಿತಿಯ ಅರಿವು ಮೂಡಿಸುವ ಮೂಲಕ ಸೌಲಭ್ಯಗಳನ್ನು ಸದ್ಬಳಿಸಿ ಕೊಳ್ಳುವುದಾಗಿದೆ ಎಂದರು.

ಒಕ್ಕೂಟದ ಉಪಾಧ್ಯಕ್ಷ ಕಲ್ವಮಂಜಲಿ ಟಿ.ಕೆ. ಬೈರೇಗೌಡ, ನಿರ್ದೇಶಕರಾದ ಮೂರಾಂಡಹಳ್ಳಿ ಡಾ.ಇ. ಗೋಪಾಲಪ್ಪ, ಎನ್. ನಾಗರಾಜ್, ಆರ್. ಅರುಣಾ, ಕೆ.ಎಂ. ವೆಂಕಟೇಶಪ್ಪ. ವಿಟಪ್ಪನಹಳ್ಳಿ ವೆಂಕಟೇಶ್ ಇದ್ದರು.