ಕರ್ತವ್ಯ ನಿರ್ವಹಿಸುವಾಗ ಭಯ, ಒತ್ತಡ ಬೇಡ

| Published : Apr 03 2024, 01:31 AM IST

ಸಾರಾಂಶ

ಕರ್ತವ್ಯ ನಿರ್ವಹಿಸುವಾಗ ಯಾವುದೇ ರೀತಿಯ ಭಯ ಹಾಗೂ ಒತ್ತಡಕ್ಕೆ ಒಳಗಾಗುವುದು ಬೇಡ. ಉದ್ಯೋಗಕ್ಕೆ ಸೇರುವ ಮನ್ನ ಇದ್ದ ಆರೋಗ್ಯವ ನಿವೃತ್ತಿವರೆಗೂ ಕಾಯ್ದುಕೊಳ್ಳುವುದು ಅಗತ್ಯವೆಂದು ನಿವೃತ್ತ ಎಆರ್‌ಎಸ್‌ಐ ರವಿಕುಮಾರ್ ಸಲಹೆ ನೀಡಿದರು.

ಚಿತ್ರದುರ್ಗ: ಕರ್ತವ್ಯ ನಿರ್ವಹಿಸುವಾಗ ಯಾವುದೇ ರೀತಿಯ ಭಯ ಹಾಗೂ ಒತ್ತಡಕ್ಕೆ ಒಳಗಾಗುವುದು ಬೇಡ. ಉದ್ಯೋಗಕ್ಕೆ ಸೇರುವ ಮನ್ನ ಇದ್ದ ಆರೋಗ್ಯವ ನಿವೃತ್ತಿವರೆಗೂ ಕಾಯ್ದುಕೊಳ್ಳುವುದು ಅಗತ್ಯವೆಂದು ನಿವೃತ್ತ ಎಆರ್‌ಎಸ್‌ಐ ರವಿಕುಮಾರ್ ಸಲಹೆ ನೀಡಿದರು.

ನಗರದ ಡಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, 1991ರಲ್ಲಿ ಪೊಲೀಸ್ ಇಲಾಖೆಗೆ ಸೇವೆಗೆ ಸೇರಿದಾಗಿನಿಂದಲೂ ಸದಾಕಲಾ ಕರ್ತವ್ಯಕ್ಕೆ ಬದ್ಧನಾಗಿದ್ದೇನೆ. 39 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ಪೊಲೀಸರು ಕರ್ತವ್ಯದ ಜೊತೆಗೆ ಆರೋಗ್ಯ ಮತ್ತು ಕುಟುಂಬದ ಬಗ್ಗೆಯೂ ಕಾಳಜಿವಹಿಸಬೇಕು. ಇಲಾಖೆ ಸಿಬ್ಬಂದಿಗಾಗಿ ಅನೇಕ ಆರೋಗ್ಯ ಸೌಲಭ್ಯಗಳನ್ನು ನೀಡಿದೆ. ಇವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. 2023-24ರಲ್ಲಿ ನನ್ನನ್ನು ಸೇರಿ 28ಕ್ಕೂ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿವೃತ್ತರಾಗಿದ್ದಾರೆ. ಇವರೆಲ್ಲರ ಕರೆದು ಸನ್ಮಾನಿಸುತ್ತಿರುವುದು ಸಂತಸ ತಂದಿದೆ ಎಂದರು.

ವಾರ್ಷಿಕ ವರದಿ ವಾಚನ ಮಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ, ನಿವೃತ್ತ ಪೊಲೀಸ್ ಸಿಬ್ಬಂದಿ ಕಲ್ಯಾಣಕ್ಕಾಗಿ ಅನೇಕ ಕಾರ್ಯಕ್ರಮ ರೂಪಿಸಲಾಗಿದೆ. ಪೊಲೀಸ್ ಆರೋಗ್ಯ ಭಾಗ್ಯ ಯೋಜನೆಯನ್ನು ನಿವೃತ್ತಿ ಸಿಬ್ಬಂದಿಗೆ ವಿಸ್ತರಿಸಲಾಗಿದೆ. ಜಿಲ್ಲೆಯಲ್ಲಿ ಈ ಯೋಜನೆಯಡಿ 550 ನಿವೃತ್ತ ಪೊಲೀಸ್ ಸಿಬ್ಬಂದಿ ನೊಂದಣಿಯಾಗಿದ್ದಾರೆ. ಕಳೆದ ವರ್ಷದಲ್ಲಿ 23 ನಿವೃತ್ತ ಸಿಬ್ಬಂದಿಗೆ ಆರೋಗ್ಯ ಭಾಗ್ಯ ಯೋಜನೆಯಡಿ ಪಾವತಿಯಾಗದ ಚಿಕಿತ್ಸೆಗಳಿಗಾಗಿ ಪೊಲೀಸ್ ಕಲ್ಯಾಣ ನಿಧಿಯಿಂದ 2.32 ಲಕ್ಷ ರು. ಪಾವತಿಸಲಾಗಿದೆ. ಶವ ಸಂಸ್ಕಾರಕ್ಕಾಗಿ 1.20 ಲಕ್ಷ ರು. ನೀಡಲಾಗಿದೆ. ಶೈಕ್ಷಣಿಕ ಯೋಜನೆಯಡಿ 111 ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕಾಗಿ ರು.14 ಲಕ್ಷ ನೆರವು ನೀಡಲಾಗಿದೆ . ಕಣ್ಣಿನ ದೋಷ ಇರುವ ಸಿಬ್ಬಂದಿ ಕನ್ನಡಕ ಖರೀದಿಗಾಗಿ 36 ಸಾವಿರ ರು. ನೀಡಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಪೊಲೀಸ್ ಕ್ಯಾಂಟಿನ್, ಪ್ರಾವಿಜನ್ ಸ್ಟೋರ್, ಮೆಡಿಕಲ್ ಸ್ಟೋರ್ ತೆರಯಲಾಗಿದೆ ಎಂದರು.

ಹೆಚ್ಚು ತೂಕ ಹಾಗೂ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ದೈಹಿಕ ಕ್ಷಮತೆ ಹೆಚ್ಚಿಸಿ, ಉತ್ತಮ ಸ್ಥಿತಿಯಲ್ಲಿ ಇಡಲು ಇಸ್ರೇಲ್ ಮೂಲದ ಖಾಸಗಿ (ಹೈಗೇರ್)ಕಂಪನಿ ಸಹಯೋಗದಲ್ಲಿ ಪ್ರಥಮ ಬಾರಿಗೆ 130 ಸಿಬ್ಬಂದಿಗೆ ಸ್ಮಾರ್ಟ್‌ವಾಚ್‌, ಎಲೆಸ್ಟಿಕ್ ಬ್ಯಾಂಡ್ ನೀಡಲಾಗುತ್ತಿದೆ. ಈ ಮೂಲಕ ಸಿಬ್ಬಂದಿ ದೈಹಿಕ ಅಂಶಗಳನ್ನು ಮೇಲ್ವಿಚಾರಣೆ ಮಾಡಲಾಗುವುದು. ಮೂರು ತಿಂಗಳಲ್ಲಿ ಸಿಬ್ಬಂದಿ ಮರಳಿ ದೈಹಿಕ ಕ್ಷಮತೆ ಗಳಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪೊಲೀಸ್ ಧ್ವಜದ ಸ್ಟಿಕರ್‌ಗಳನ್ನು ಬಿಡುಗಡೆಗೊಳಿಸಲಾಯಿತು. ಧ್ವಜದಿನಾಚರಣೆ ಅಂಗವಾಗಿ 6 ಪೊಲೀಸ್ ತಂಡಗಳು ನಿಧಾನ ಹಾಗೂ ತೀವ್ರಗತಿಯ ಪಥಸಂಚಲನ ನಡೆಸಿದವು. ಸಶಸ್ತ್ರ ಮೀಸಲು ಪಡೆಯ ಪಿಎಸ್ಐ ಯುವರಾಜ್ ಪಥ ಸಂಚಲನದ ನೇತೃತ್ವವಹಿಸಿದ್ದರು. ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸರನ್ನು ಸನ್ಮಾನಿಸಲಾಯಿತು.

ಜಿಲ್ಲಾಧಿಕಾರಿ ಟಿ.ವೆಂಕಟೇಶ್, ನಿವೃತ್ತ ಪೊಲೀಸ್ ಡಿಐಜಿ ಎಂ.ಎನ್.ನಾಗರಾಜ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ, ಐಮಂಗಲ ಪೊಲೀಸ್ ತರಬೇತಿ ಕೇಂದ್ರ ಪ್ರಾಂಶುಪಾಲ ಪಾಪಣ್ಣ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.