ಸಾರಾಂಶ
ಮಾಜಿ ಸಚಿವ ಕೆ.ಬಿ. ಕೋಳಿವಾಡ ನೀಡಿರುವ ಹೇಳಿಕೆ ಅವರ ವೈಯಕ್ತಿಕವಾಗಿದ್ದು. ಅದಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ಹುಬ್ಬಳ್ಳಿ: ಮಾಜಿ ಸಚಿವ ಕೆ.ಬಿ. ಕೋಳಿವಾಡ ನೀಡಿರುವ ಹೇಳಿಕೆ ಅವರ ವೈಯಕ್ತಿಕವಾಗಿದ್ದು. ಅದಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋಳಿವಾಡ ಹೇಳಿಕೆಗೆ ಕಿಡಿಕಾರಿದರು. ಅವರ ಹೇಳಿಕೆ ಪಕ್ಷದ ನಿರ್ಧಾರವಲ್ಲ. ಹೈಕಮಾಂಡ್ ಇದೆ. ನಮ್ಮ ಎಲ್ಲ ಶಾಸಕರು ಸಂಪೂರ್ಣವಾಗಿ ಸಿದ್ದರಾಮಯ್ಯ ಬೆನ್ನ ಹಿಂದೆ ಇದ್ದೇವೆ. ಯಾವುದೇ ಕಾರಣಕ್ಕೂ ಸಿಎಂ ರಾಜೀನಾಮೆ ಕೊಡುವ ಪ್ರಶ್ನೆಯೇ ಬರುವುದಿಲ್ಲ ಎಂದರು.
ಯಾಕೆ ಕೊಡಬೇಕು, ಏನು ತಪ್ಪಿದೆ ಅಂತ ಕೊಡಬೇಕು? ಬಿಜೆಪಿಯವರು ನೂರಾರು ಹಗರಣಗಳನ್ನು ಮುಚ್ಚಿ ಹಾಕಿದ್ದಾರೆ ಎಂದ ಅವರು, ಸಿಬಿಐ, ಇಡಿ ಕೇಸ್‌ಗಳು ಬಿಜೆಪಿ ಅವರ ಮೇಲೆ ಎಷ್ಟಿವೆ ಕೇಳಿ. ಶೇ. 90ರಷ್ಟು ಕೇಸ್ ಕಾಂಗ್ರೆಸ್‌ನವರ ಮೇಲೆ ಮಾಡಿದ್ದಾರೆ. ಶೇ.10ರಷ್ಟು ಕೇಸ್ ಮಾತ್ರ ಬಿಜೆಪಿಯವರ ಮೇಲಿದೆ. ಕೇಸ್ ಆದವರು ಬಿಜೆಪಿಗೆ ಹೋದರೆ ಸ್ವಚ್ಛ ಆಗಿ ಬಿಡುತ್ತಾರೆ ಎಂದರು.
ಬಿಜೆಪಿಯಲ್ಲಿ ಒಳಜಗಳ ಇದ್ದೆ ಇದೆ. ವಿಜಯೇಂದ್ರ ದೊಡ್ಡ ಭ್ರಷ್ಟ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳುತ್ತಾರೆ ಅಲ್ಲವಾ? ಅವರ ತಟ್ಟೆಯಲ್ಲೇ ಹೆಗ್ಗಣ ಬಿದ್ದಿದೆ. ಬೇರೆಯವರ ತಟ್ಟೆಯಲ್ಲಿ ನೊಣ ನೋಡುವುದಕ್ಕೆ ಬರುತ್ತಾರೆ. ವಿಜಯೇಂದ್ರ ದೊಡ್ಡ ಭ್ರಷ್ಟ, ಇಂಥವರ ಕೆಳಗೆ ನಾವು ಹೇಗೆ ಕೆಲಸ ಮಾಡಬೇಕು ಎಂದು ಯತ್ನಾಳ ಪ್ರತಿದಿನ ಹೇಳಿಕೆ ನೀಡುತ್ತಾ ಇರುತ್ತಾರೆ. ಹಾಗಾದರೆ ಅವರ ಹೈಕಮಾಂಡ್ ಯಾಕೆ ಸುಮ್ಮನೆ ಕುಳಿತಿದೆ ಎಂದರು.
ಮುಡಾ ಪ್ರಕರಣ ಸಿಬಿಐ ತನಿಖೆಗೆ ಕೊಡಲಿ ಎಂಬ ಜೋಶಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಿಮ್ಮ ಸಮಯದಲ್ಲಿ ಎಷ್ಟು ಪ್ರಕರಣ ಸಿಬಿಐಗೆ ಕೊಟ್ಟಿದ್ದೀರಿ. ಸುಮ್ಮನೆ ತಾಕತ್ ಇದ್ದರೆ ಅಂತ ಭಾಷಣ ಹೊಡೆಯೋದು ಬೇಡ ಎಂದರು. ನಿಮ್ಮ ಸಮಯದಲ್ಲಿ ಯಾವ್ಯಾವ ಪ್ರಕರಣಗಳಿದ್ದವು. ಎಷ್ಟು ಕೇಸ್‌ಗಳನ್ನು ಸಿಬಿಐಗೆ ಕೊಟ್ಟಿದ್ದೀರಿ ಎಂಬ ಪಟ್ಟಿ ಕೊಡಿ ಎಂದು ಪ್ರಶ್ನಿಸಿದರು.
ಸಿಬಿಐ, ಆದಾಯ ತೆರಿಗೆ ಇಲಾಖೆ, ಇಡಿ ಎಲ್ಲವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಈ ಎಲ್ಲವೂ ಪಕ್ಷದ ಏಜೆನ್ಸಿಗಳಾಗಿ ಕೆಲಸ ಮಾಡುತ್ತಿವೆ. ಅವರ ನಡೆಗೆ ಸರ್ಕಾರ ಈ ರೀತಿ ನಿರ್ಧಾರ ಕೈಗೊಂಡಿದೆ ಎಂದ ಶಾಸಕ ಅಬ್ಬಯ್ಯ, ನಿರ್ಮಲಾ ಸೀತಾರಾಮನ್, ಜೆ.ಪಿ. ನಡ್ದಾ ಮೇಲೆ ಎಫ್ಐಆರ್ ದಾಖಲಾಗಿದೆ. ಈ ಬಗ್ಗೆ ಜೋಶಿ ಏನು ಹೇಳುತ್ತಾರೆ. 40 ವರ್ಷದಲ್ಲಿ ಕಪ್ಪು ಚುಕ್ಕೆ ಇಲ್ಲ ಎನ್ನುವವರು ಈ ಬಗ್ಗೆ ಏನು ಕ್ರಮಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಕರಣ ಸಹ ಏನು ಮಾಡಿಲ್ಲ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರದು ಏನು ತಪ್ಪಿಲ್ಲ. ಏನು ವರದಿ ಕೊಡಬೇಕು. ಕೊಡುತ್ತಾರೆ ಎಂದರು.
ನರೇಂದ್ರ ಮೋದಿ ಅವರು ಬೇರೆ ಕಡೆ ಹೋಗಿ ಸಿದ್ದರಾಮಯ್ಯ ಬಗ್ಗೆ ಮಾತನಾಡಿರುವುದು ದುರ್ದೈವ ಎಂದರು.