ನಗರದಲ್ಲಿ ವರ್ಷಾಚರಣೆಗೆ ನಿರ್ಬಂಧ ಇಲ್ಲ: ಹೈಕೋರ್ಟ್‌

| Published : Dec 29 2023, 01:30 AM IST

ಸಾರಾಂಶ

ಕೊರೋನಾ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ನಿರ್ಬಂಧ ಹೇರಲ್ಲ ಎಂದ ಕರ್ನಾಟಕ ಹೈಕೋರ್ಟ್

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಎಂ.ಜಿ.ರಸ್ತೆ, ಚರ್ಚ್‌ ಸ್ಟ್ರೀಟ್‌ ಸೇರಿ ಇತರ ಪ್ರದೇಶಗಳಲ್ಲಿ ಹೊಸ ವರ್ಷ ಸಂಭ್ರಮಾಚರಣೆಗೆ ನಿರ್ಬಂಧ ಹೇರಲು ಹೈಕೋರ್ಟ್‌ ನಿರಾಕರಿಸಿದೆ.

ಕೋವಿಡ್ ರೂಪಾಂತರ ಜೆ.ಎನ್.1 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಆಚರಣೆಗೆ ಅನುಮತಿ ನೀಡಬಾರದು ಎಂದು ಹೈಕೋರ್ಟ್‌ ವಕೀಲ ಎನ್‌.ಪಿ.ಅಮೃತೇಶ್‌ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ನಟರಾಜ್ ನೇತೃತ್ವದ ರಜಾಕಾಲದ ವಿಭಾಗೀಯ ನ್ಯಾಯಪೀಠ, ಒಂದು ವೇಳೆ ಬೆಂಗಳೂರಿನಲ್ಲಿ ಸಂಭ್ರಮಾಚರಣೆ ನಿರ್ಬಂಧಿಸಿದರೆ ಜನರು ಹೊರ ಪ್ರದೇಶಗಳಿಗೆ ತೆರಳುತ್ತಾರೆ. ಸರ್ಕಾರ ಈ ಬಗ್ಗೆ ಯಾವುದೇ ನಿಯಂತ್ರಣಗಳನ್ನು ವಿಧಿಸಿಲ್ಲ. ಆದಾಗ್ಯೂ, ಸದ್ಯಕ್ಕೆ ಕೋವಿಡ್‌ಗೆ ಹೆದರಬೇಕಾದ ಪ್ರಮೇಯ ಕಾಣುತ್ತಿಲ್ಲ ಎಂಬ ಅಭಿಪ್ರಾಯಪಟ್ಟಿತು.

ಅರ್ಜಿ ವಿಚಾರಣೆ ವೇಳೆ ಎನ್.ಪಿ.ಅಮೃತೇಶ್, ‘ರಾಜ್ಯದ ವಿವಿಧೆಡೆ ಕೋವಿಡ್ ರೂಪಾಂತರ ಸೋಂಕು ಪುನಃ ಹರಡುತ್ತಿರುವ ಬಗ್ಗೆ ವರದಿಗಳಿವೆ. ಹೀಗಾಗಿ, ಹೊಸ ವರ್ಷಾಚರಣೆಗೆ ಹೆಚ್ಚಿನ ಜನ ಸೇರುವುದನ್ನು ತಡೆಯಬೇಕಿದೆ. ಸಂಭ್ರಮಾಚರಣೆ ವೇಳೆ ಜಮಾವಣೆಯಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಸಾಧ್ಯವಿಲ್ಲ. ಆದ್ದರಿಂದ, ಮುಂಜಾಗ್ರತಾ ಕ್ರಮವಾಗಿ ಹೊಸ ವರ್ಷಾಚರಣೆ ನಿರ್ಬಂಧಿಸುವಂತೆ ನಿರ್ದೇಶಿಸಬೇಕು’ ಎಂದು ಕೋರಿದರು.

ಇದಕ್ಕೆ ಉತ್ತರಿಸಿದ ಸರ್ಕಾರದ ಪರ ವಕೀಲರು, ಸರ್ಕಾರ ಈ ನಿಟ್ಟಿನಲ್ಲಿ ಈಗಾಗಲೇ ಸರಣಿ ಸಭೆ ನಡೆಸಿದೆ. ಇನ್ನೂ ಸ್ಪಷ್ಟ ತೀರ್ಮಾನ ಕೈಗೊಂಡಿಲ್ಲ. ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಕಾನೂನು ಶಾಂತಿ ಪಾಲನೆಗಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲು ಸಿದ್ಧವಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಸದ್ಯಕ್ಕೆ ಕೋವಿಡ್‌ಗೆ ಹೆದರಬೇಕಾದ ಪ್ರಮೇಯ ಕಾಣುತ್ತಿಲ್ಲ ಎಂದು ಹೇಳಿ ವಿಚಾರಣೆಯನ್ನು ಬರುವ ಜನವರಿಗೆ ಮುಂದೂಡಿತು.

ಹೊಸ ವರ್ಷ ಸಂಭ್ರಮಕ್ಕೆಬಿಎಂಟಿಸಿಯಿಂದ ಬಸ್‌ಕನ್ನಡಪ್ರಭ ವಾರ್ತೆ ಬೆಂಗಳೂರುನಗರದ ಎಂ.ಜಿ. ರಸ್ತೆ ಹಾಗೂ ಬ್ರಿಗೇಡ್‌ ರಸ್ತೆಯಲ್ಲಿ ಡಿ.31ರಂದು ನಡೆಯುವ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವವರಿಗಾಗಿ ಬಿಎಂಟಿಸಿ ರಾತ್ರಿ 11 ಗಂಟೆಯಿಂದ ಮುಂಜಾನೆ 2 ಗಂಟೆಯವರೆಗೆ ಬಸ್‌ ಸೇವೆ ನೀಡಲಿದೆ.ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್‌ ರಸ್ತೆಯಿಂದ ಕಾಡುಗೋಡಿ ಬಸ್‌ ನಿಲ್ದಾಣ, ಸರ್ಜಾಪುರ, ಎಲೆಕ್ಟ್ರಾನಿಕ್‌ ಸಿಟಿ, ಬನ್ನೇರಘಟ್ಟ ಮೃಗಾಲಯ, ಕೆಂಗೇರಿ ಕೆಎಚ್‌ಬಿ ಬಡಾವಣೆ, ಮಾಗಡಿ ರಸ್ತೆಯ ಜನಪ್ರಿಯ ಟೌನ್‌ಶಿಪ್‌, ನೆಲಮಂಗಲ, ಯಲಹಂಕ 5ನೇ ಹಂತ, ಆರ್‌.ಕೆ.ಹೆಗಡೆ ನಗರ, ಬಾಗಲೂರು ಹಾಗೂ ಹೊಸಕೋಟೆಗೆ ಬಸ್‌ಗಳು ಸೇವೆ ನೀಡಲಿವೆ.ಅದರ ಜತೆಗೆ ಜನದಟ್ಟಣೆ ಹೆಚ್ಚಿರುವ ಪ್ರಮುಖ ಬಸ್‌ ನಿಲ್ದಾಣ ಮತ್ತು ಜಂಕ್ಷನ್‌ಗಳಾದ ಯಲಹಂಕ, ಇಂದಿರಾನಗರ, ಕೋರಮಂಗಲ, ಶಾಂತಿನಗರ, ಬನಶಂಕರಿ, ಜಯನಗರ, ಸುಮನಹಳ್ಳಿ, ಗೊರಗುಂಟೆಪಾಳ್ಯ, ನಾಗಸಂದ್ರ, ಹೆಬ್ಬಾಳ ಮತ್ತು ಕೇಂದ್ರ ರೇಷ್ಮೇ ಮಂಡಳಿ ಜಂಕ್ಷನ್‌ಗಳಿಂದಲೂ ಸಾರಿಗೆ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.