ಉಡುಪಿ ಜಿಲ್ಲೆಯಲ್ಲಿ ದಾನಿಗಳಿಂದಾಗಿ ರಕ್ತದ ಕೊರತೆ ಇಲ್ಲ: ಡಿಸಿ ಶ್ಲಾಘನೆ

| Published : Oct 04 2024, 01:09 AM IST / Updated: Oct 04 2024, 01:10 AM IST

ಉಡುಪಿ ಜಿಲ್ಲೆಯಲ್ಲಿ ದಾನಿಗಳಿಂದಾಗಿ ರಕ್ತದ ಕೊರತೆ ಇಲ್ಲ: ಡಿಸಿ ಶ್ಲಾಘನೆ
Share this Article
  • FB
  • TW
  • Linkdin
  • Email

ಸಾರಾಂಶ

ಎಂ.ಐ.ಎ.ಎಂ.ಎಸ್. ಬುದ್ಧ ಆಯುರ್ವೇದ ಆಡಿಟೋರಿಯಂನಲ್ಲಿ ಜಿಲ್ಲಾಡಳಿತ ಮತ್ತು ಇತರ ಸಂಘಸಂಸ್ಥೆಗಳ ಸಹಯೋಗದಲ್ಲಿ ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನಾಚರಣೆ ಅಂಗವಾಗಿ ಆಯೋಜಿಸಲಾದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮತ್ತು ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಮಣಿಪಾಲ

ಒಂದೊಂದು ಹನಿ ರಕ್ತವೂ ಅಮೂಲ್ಯವಾಗಿದ್ದು, ಅದನ್ನು ಪರ್ಯಾಯವಾಗಿ ಸೃಷ್ಟಿಸಲು ಸಾಧ್ಯವಿಲ್ಲ. ಅಗತ್ಯವಿದ್ದಾಗ ರಕ್ತದಾನದಿಂದಲೇ ಅದನ್ನು ಪಡೆಯಬೇಕಾಗಿದೆ. ಆದ್ದರಿಂದ ಪ್ರತಿಯೊಬ್ಬ ಅರ್ಹರು ಸೇವಾ ಮನೋಭಾವನೆದಿಂದ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಹೇಳಿದರು.ಅವರು ಇಲ್ಲಿನ ಎಂ.ಐ.ಎ.ಎಂ.ಎಸ್. ಬುದ್ಧ ಆಯುರ್ವೇದ ಆಡಿಟೋರಿಯಂನಲ್ಲಿ ಜಿಲ್ಲಾಡಳಿತ ಮತ್ತು ಇತರ ಸಂಘಸಂಸ್ಥೆಗಳ ಸಹಯೋಗದಲ್ಲಿ ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನಾಚರಣೆ ಅಂಗವಾಗಿ ಆಯೋಜಿಸಲಾದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮತ್ತು ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಮಾಜದಲ್ಲಿ ಸರಿಯಾದ ಸಮಯದಲ್ಲಿ ರಕ್ತ ದೊರೆಯದೇ ರೋಗಿಗಳು ಪ್ರಾಣ ಕಳೆದುಕೊಂಡ ಘಟನೆಗಳಿವೆ. ಆದರೆ ನಮ್ಮ ಜಿಲ್ಲೆಯಲ್ಲಿ ಸಾಕಷ್ಟು ಮಂದಿ ರಕ್ತದಾನಿಗಳಿದ್ದು, ಇದುವರೆಗೂ ರಕ್ತದ ಕೊರತೆ ಕಂಡುಬಂದಿಲ್ಲ. ಅಲ್ಲದೇ ನೆರೆಯ ಜಿಲ್ಲೆಯಲ್ಲಿ ರಕ್ತದ ಕೊರತೆ ಉಂಟಾದ ಸಂದರ್ಭದಲ್ಲಿ ನಮ್ಮ ಜಿಲ್ಲೆಯಿಂದ ರಕ್ತ ರವಾನೆ ಮಾಡಲಾಗುತ್ತಿದೆ. ಇಂತಹ ಜೀವ ಉಳಿಸುವ ರಕ್ತದಾನಿಗಳನ್ನು ಗುರುತಿಸಿ ಸನ್ಮಾನಿಸಿ ಪ್ರೋತ್ಸಾಹಿಸಬೇಕು ಎಂದರು.ಮುನಿಯಾಲು ಇನ್‌ಸ್ಟಿಟ್ಯೂಟ್ ಆಫ್ ಆಯುರ್ವೇದ ಮೆಡಿಕಲ್ ಸೈನ್ಸ್ ಕಾಲೇಜಿನ ಪ್ರಾಂಶುಪಾಲ ಡಾ. ಸತ್ಯನಾರಾಯಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ಚಿದಾನಂದ ಸಂಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಅತೀ ಹೆಚ್ಚು ಬಾರಿ ರಕ್ತದಾನ ಮಾಡಿದ ಅನಿತಾ ಡಿಸೋಜ, ಮೋಹಿತ್ ಪೆರ್ಡೂರು, ಸ್ವೀಟಿ ಜೆ. ಫರ್ನಾಂಡೀಸ್, ದಿನೇಶ್ ಕಾಂಚನ್, ಸುಕೇಶ್ ಖಾರ್ವಿ ಮತ್ತು ಪುರುಷೋತ್ತಮ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಐ.ಪಿ. ಗಡಾದ್, ಜಿಲ್ಲಾ ಸರ್ಜನ್ ಡಾ. ಎಚ್. ಅಶೋಕ್, ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ವೀಣಾಕುಮಾರಿ, ಆದರ್ಶ ಕಾಲೇಜ್ ಆಫ್ ನರ್ಸಿಂಗ್‌ನ ಕಾಲೇಜಿನ ಪ್ರಾಂಶುಪಾಲೆ ಕುಮಾರಿ ಸುದಿನ ಎಂ., ಆದರ್ಶ ಕಾಲೇಜ್ ಆಫ್ ಅಲೈಡ್ ಆ್ಯಂಡ್ ಪ್ಯಾರಾಮೆಡಿಕಲ್ ಸೈನ್ಸ್ ಪ್ರಾಂಶುಪಾಲ ಪ್ರೊ.ರವಿಕುಮಾರ್ ಟಿ.ಎನ್., ಎಚ್.ಪಿ.ಆರ್. ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಆ್ಯಂಡ್ ಪ್ಯಾರಾಮೆಡಿಕಲ್ ಸೈನ್ಸ್ ಪ್ರಾಂಶುಪಾಲೆ ದಿವ್ಯಾಶ್ರೀ, ಉಡುಪಿ ಧನ್ವಂತರಿ ಕಾಲೇಜು ಆಫ್ ನರ್ಸಿಂಗ್ ಆಡಳಿತಾಧಿಕಾರಿ ಉದಯಕುಮಾರ್, ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಯ ಅಧ್ಯಕ್ಷ ರಘುನಾಥ ನಾಯಕ್, ಎನ್.ಎಸ್.ಎಸ್. ನೋಡೆಲ್ ಅಧಿಕಾರಿ ಡಾ. ನವನೀತ ಕೆ.ಪಿ. ಮತ್ತಿತರರು ಉಪಸ್ಥಿತರಿದ್ದರು.ಕಾರ್ಯಕ್ರಮ ಮೇಲ್ವಿಚಾರಕ ಮಹಾಬಲೇಶ್ವರ ಬಿ.ಎಂ. ಸ್ವಾಗತಿಸಿದರು. ಕಾಲೇಜಿನ ಎನ್.ಎಸ್.ಎಸ್. ನೋಡೆಲ್ ಅಧಿಕಾರಿ ಡಾ. ಆಶಿತ ಆರ್. ನಿರೂಪಿಸಿದರು. ಪ್ರೊ.ಡಾ. ಮಾಧವಿ ವಂದಿಸಿದರು.ನಂತರ ನಡೆದ ಶಿಬಿರದಲ್ಲಿ ಸುಮಾರು 175 ಯೂನಿಟ್ ರಕ್ತವನ್ನು ಸಂಗ್ರಹಣೆ ಮಾಡಲಾಯಿತು.