ಸಾರಾಂಶ
ಕಳೆದ ವರ್ಷ ತಾಲೂಕಿಗೆ ಹಳ್ಳಿ ಹಳ್ಳಿಗಳಿಗೂ ನಗರ ಪ್ರದೇಶಗಳಿಗೂ ಸಂಪರ್ಕಕ್ಕೆ ಅನುಕೂಲವಾಗಲಿ ಎಂದು ಕೇಂದ್ರ ಸರ್ಕಾರ 47 ಬಿಎಸ್‌ಎನ್‌ಎಲ್ ಟವರ್‌ಗಳನ್ನು ತಾಲೂಕಿಗೆ ನೀಡಿತ್ತು.
ಜೋಯಿಡಾ: ಆಧುನಿಕ ಜಗತ್ತು ತಂತ್ರಜ್ಞಾನದ ನೆರವಿನಿಂದ ವೇಗವಾಗಿ ಓಡುತ್ತಿದ್ದರೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕು ಮಾತ್ರ ವಿಭಿನ್ನ.
ಇಲ್ಲಿ ಯಾವುದೇ ತಂತ್ರಜ್ಞಾನವಾಗಲಿ, ತಾಂತ್ರಿಕ ಶಿಕ್ಷಣವಾಗಲಿ ಲಭ್ಯವಾಗುತ್ತಿಲ್ಲ. ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಕೆಲಸಗಳನ್ನು ದಾಂಡೇಲಿಯಲ್ಲಿಯೋ, ಹಳಿಯಾಳದಲ್ಲಿಯೋ ಮಾಡಿಕೊಂಡು, ನೆಪ ಮಾತ್ರಕ್ಕೆ ಕಚೇರಿಗೆ ಬರುತ್ತಾರೆ. ಕಚೇರಿಗಳಲ್ಲಿ ಸರ್ವರ್ ಸರಿ ಇಲ್ಲ, ನೆಟ್‌ವರ್ಕ್ ಇಲ್ಲ, ಕರೆಂಟ್ ಇಲ್ಲ ಎನ್ನುವುದು ಬಿಟ್ಟು ಬೇರೇನಿಲ್ಲ. ಯಾವ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಯಾಕೆ ಎಂದು ಯಾರೂ ಕೇಳುತ್ತಿಲ್ಲ.ಕಳೆದ ವರ್ಷ ತಾಲೂಕಿಗೆ ಹಳ್ಳಿ ಹಳ್ಳಿಗಳಿಗೂ ನಗರ ಪ್ರದೇಶಗಳಿಗೂ ಸಂಪರ್ಕಕ್ಕೆ ಅನುಕೂಲವಾಗಲಿ ಎಂದು ಕೇಂದ್ರ ಸರ್ಕಾರ 47 ಬಿಎಸ್‌ಎನ್‌ಎಲ್ ಟವರ್‌ಗಳನ್ನು ತಾಲೂಕಿಗೆ ನೀಡಿತ್ತು. ಆದರೆ ಇದುವರೆಗೂ ಒಂದೇ ಒಂದು ಟವರ್ ನಿರ್ಮಾಣವಾಗಿಲ್ಲ. ಕೆಲಸದ ಪ್ರಗತಿಯೂ ಇಲ್ಲ. ಈ ಬಗ್ಗೆ ಮಾಹಿತಿಯನ್ನು ಜನತೆಗೆ ಹೇಳುವ ಅಧಿಕಾರಿಗಳೂ ಇಲ್ಲ. ಹಾಗಾಗಿ ತಾಲೂಕಿನ ಬಡ ಜನತೆ ರೇಷನ್ ಪಡೆಯುವಾಗ ಎಲ್ಲೋ ಹೋಗಿ ಹೆಬ್ಬೆರಳು ಒತ್ತಿ ಇನ್ನೆಲ್ಲೋ ಹೋಗಿ ಆಹಾರ ಧಾನ್ಯ ಪಡೆಯುತ್ತಿದ್ದಾರೆ.
ತಾಲೂಕಿನಲ್ಲಿ ಸರಿಯಾದ ಯಾವ ನೆಟ್‌ವರ್ಕ್ ಇಲ್ಲದೇ ಜನ ರೋಸಿ ಹೋಗಿದ್ದಾರೆ. ಕಳೆದ ಒಂದು ವರ್ಷದಿಂದ ಜೋಯಿಡಾ ಬಿಎಸ್‌ಎನ್‌ಎಲ್ ಕಚೇರಿಯ ಸುತ್ತಲೂ ತಂದು ಒಗೆದ 47 ಟವರ್‌ಗಳ ಕೇಬಲ್ ಬಂಡಲ್‌ಗಳು ಇಲಿ, ಹೆಗ್ಗಣಗಳಿಗೆ ಮನೆಯಾಗಿವೆ. ಯಾರಿಗೆ ಹೇಳೋಣ ಎಂದು ತಾಲೂಕಿನ ಗ್ರಾಮೀಣ ಜನ ನೆಟ್‌ವರ್ಕ್ ಇಲ್ಲದ ಮೊಬೈಲ್ ಹಿಡಿದು ಓಡಾಡುತ್ತಿದ್ದಾರೆ.