ಸಾರಾಂಶ
ಸಕಲ ಸೌಲಭ್ಯ ಹೊಂದಿದ ರಂಗಮಂದಿರ ನಿರ್ಮಾಣ, ಅದರ ಹಿಂಭಾಗಕ್ಕೆ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಅಲಂಕಾರ ಕೊಠಡಿಗಳನ್ನು ನಿರ್ಮಾಣ ಮಾಡಲಾಗುತ್ತದೆ. ಅದರ ಮೇಲ್ಭಾಗದಲ್ಲಿ ಚೆಸ್, ಕೇರಂನಂತಹ ಆಟಗಳನ್ನು ಆಡಲು ಕೊಠಡಿ ನಿರ್ಮಾಣ ಮಾಡಲಾಗುತ್ತದೆ. ರಂಗಮಂದಿರದ ಒಂದು ಪಕ್ಕದಲ್ಲಿ ಮಕ್ಕಳ ಸುಂದರ ಉದ್ಯಾನವನ ನಿರ್ಮಾಣ ಮಾಡಿ ಅದರಲ್ಲಿ ಮಕ್ಕಳು ಆಡಬಹುದಾದ ಆಟಿಕೆಗಳನ್ನು ಅಲ್ಲಿ ಅಳವಡಿಸುವಂತೆ ವಿನ್ಯಾಸ ಮಾಡಲಾಗಿದೆ.
ಕನ್ನಡಪ್ರಭ ವಾರ್ತೆ ಕುದೂರು
ಕುದೂರು ಗ್ರಾಮದಲ್ಲಿರುವ ಶ್ರೀರಾಮಲೀಲಾ ಮೈದಾನವನ್ನು ಹೈಟೆಕ್ ಮಾಡುವ ಸಲುವಾಗಿ ಮೈದಾನದ ಸುತ್ತಲಿರುವ ಮರಗಳನ್ನು ಕಡಿಯುವುದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದೇ ಮಾರ್ಚ್ ೫ ರಂದು ಮಾಜಿ ಸಂಸದ ಡಿ.ಕೆ.ಸುರೇಶ್ ಮತ್ತು ಶಾಸಕ ಎಚ್.ಸಿ.ಬಾಲಕೃಷ್ಣರವರು ಹೈಟೆಕ್ ಮೈದಾನಕ್ಕೆ ನೀಲನಕ್ಷೆ ಬಿಡುಗಡೆ ಮಾಡಿ ಗುದ್ದಲಿಪೂಜೆಯನ್ನು ನೆರವೇರಿಸಿದರು.ವೈದ್ಯರೊಬ್ಬರ ಶ್ರಮ:
ಶ್ರೀರಾಮಲೀಲಾ ಮೈದಾನದಲ್ಲಿ ೨೦೦೦ ನೇ ಇಸವಿಯಲ್ಲಿ ಮೈದಾನದ ಸುತ್ತಲೂ ಆಲ, ಅರಳಿ, ಅಶ್ವತ್ಥ, ಬೇವು, ಹತ್ತಿ, ಬನ್ನಿಮರ ಹೀಗೆ ಹಲವು ಹತ್ತು ಮರಗಳನ್ನು ನೆಡಲಾಯಿತು. ಒಂದಷ್ಟು ಶಾಲೆಯ ವಿದ್ಯಾರ್ಥಿಗಳು ನಿತ್ಯವೂ ನೀರು ಹಾಕುತ್ತಿದ್ದರು. ಅದೇ ಮಾರ್ಗದಲ್ಲಿ ನಿತ್ಯ ಓಡಾಡುತ್ತಿದ್ದ ಡಾ.ಸುರೇಂದ್ರಶೆಟ್ಟಿ ಎಂಬ ವೈದ್ಯರು ಮರಗಳಿಗೆ ನೀರು, ಗೊಬ್ಬರವನ್ನು ಹಾಕುವುದಲ್ಲದೆ, ಗಿಡಗಳನ್ನು ಮೇಕೆ, ಕುರಿಗಳು ತಿನ್ನಬಾರದು ಎಂದು ತನ್ನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದಿದ್ದ ರೋಗಿಗಳನ್ನು ಕೂರಿಸಿ ಅವರಲ್ಲೇ ಒಬ್ಬರನ್ನು ಕರೆದುಕೊಂಡು ಹೋಗಿ, ನೀಲಗಿರಿ ಕಡ್ಡಿಗಳನ್ನು ಕತ್ತರಿಸಿಕೊಂಡು ಬಂದು ಗ್ಲೂಕೋಸ್ ಬಾಟೆಲ್‌ಗಳ ಪೈಪ್‌ಗಳಿಂದ ಕಟ್ಟಿ ಗಿಡಗಳನ್ನು ಅತ್ಯಂತ ಜೋಪಾನವಾಗಿ ಬೆಳೆಸಿದರು. ಗ್ರಾಮದ ಹಿರಿಯ ದಿವಂಗತ ತೋಪೇಗೌಡರು ಕೂಡಾ ಮರಗಳ ರಕ್ಷಣೆಗೆ ಶ್ರಮಿಸಿದ್ದಾರೆ. ಇದರ ಫಲವಾಗಿ ಇಂದು ಮೈದಾನ ಹೊಸ ಸಿಂಗಾರವನ್ನು ಪಡೆಯಿತು. ಮರ ಕಡಿಯಲು ಅನುಮತಿ ನೀಡಿರುವ ಪಂಚಾಯ್ತಿಯವರಾಗಲಿ ಮರದಲ್ಲಿ ಗೂಡು ಕಟ್ಟಿ ವಾಸ ಮಾಡುತ್ತಿರುವ ಹಕ್ಕಿ ಪಕ್ಷಿಗಳ ಅನುಮತಿ ಕೇಳಿದ್ದಾರಾ? ಹೀಗೆ ಕಷ್ಟ ಪಟ್ಟು ಬೆಳೆಸಿದ ಇಂತಹ ಅನುಭವಗಳನ್ನು ಮುಂದಿನ ತಲೆಮಾರಿಗೆ ಹೇಳುವವರಾರು? ಹಿರಿಯರು ಪಟ್ಟ ಕಷ್ಟಕ್ಕೆ ಬೆಲೆಯೇ ಇಲ್ಲದಂತಾಗುತ್ತದೆ. ಎಂಬುದು ಗ್ರಾಮದ ಹಿರಿಯರ ಸಂಕಟವಾಗಿದೆ.ಮೈದಾನ ಹೈಟೆಕ್ ಆಗುವುದಕ್ಕೆ ವಿರೋಧವಿಲ್ಲ:
ಮರಗಳನ್ನು ಉಳಿಸಿ ಎಂದು ಕೇಳಿದ ಮಾತ್ರಕ್ಕೆ ಮೈದಾನ ಹೈಟೆಕ್ ಆಗಬಾರದು ಎಂದರ್ಥವಲ್ಲ. ಎಲ್ಲವೂ ಕಾಲಕ್ಕೆ ತಕ್ಕಂತೆ ಅಭಿವೃದ್ಧಿ ಆಗಬೇಕು. ಆದರೆ ಇರುವುದನ್ನು ನಾಶ ಮಾಡಿ ಅಭಿವೃದ್ಧಿ ಎಂದರೆ ಅದಕ್ಕೆ ನಮ್ಮ ವಿರೋಧವಿದೆ ಎಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮರಗಳನ್ನು ಉಳಿಸಿಕೊಂಡು ಮೈದಾನವನ್ನು ನವೀಕರಣ ಮಾಡುವುದಾದರೆ ಸುತ್ತಲಿನ ಮರಗಳನ್ನು ಉಳಿಸಿಕೊಳ್ಳಬೇಕು. ಅದನ್ನು ಉಳಿಸಿಕೊಂಡು ಗ್ಯಾಲರಿ ನಿರ್ಮಾಣ ಮಾಡಲು ಸಾಧ್ಯವಾ? ಎಂಬುದನ್ನು ಗಮನಿಸಬೇಕು. ಪ್ರೇಕ್ಷಕರ ಗ್ಯಾಲರಿಗೆ ತೊಂದರೆ ಕೊಡುವ ಮರಗಳ ರೆಂಬೆಗಳನ್ನು ತೆಗೆದು ಮರಗಳನ್ನು ಉಳಿಸುವ ಕೆಲಸ ಮಾಡಿದರೆ ಯಾವ ಸಂಘರ್ಷವೂ ಇರುವುದಿಲ್ಲ. ಆದರೆ ಬೇರು ಸಹಿತ ಮರಗಳನ್ನು ಕಡಿಯುವ ಮುನ್ನ ಇಂಜಿನಿಯರ್ ರವರು ಹಾಗೂ ಶಾಸಕರು ಮತ್ತೊಮ್ಮೆ ಯೋಚಿಸಿ ಮುಂದಿನ ಹೆಜ್ಜೆ ಇಡಲು ಗ್ರಾಮಸ್ಥರು ಮನವಿ ಮಾಡಿದ್ದಾರೆ. ಈಗಾಗಲೇ ಗ್ರಾಮದ ಜಯರಾಂ ಮತ್ತು ತಂಡದವರು ಮರಗಳನ್ನು ತಬ್ಬಿ ಹಿಡಿದು ಕಡಿಯಲು ಬಿಡುವುದಿಲ್ಲ ಎಂದು ಪ್ರತಿಭಟನೆ ಆರಂಭಿಸಿದ್ದಾರೆ.ಹೈಟೆಕ್ ಮೈದಾನದಲ್ಲಿ ಏನೇನಿದೆ?
ಸಕಲ ಸೌಲಭ್ಯ ಹೊಂದಿದ ರಂಗಮಂದಿರ ನಿರ್ಮಾಣ, ಅದರ ಹಿಂಭಾಗಕ್ಕೆ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಅಲಂಕಾರ ಕೊಠಡಿಗಳನ್ನು ನಿರ್ಮಾಣ ಮಾಡಲಾಗುತ್ತದೆ. ಅದರ ಮೇಲ್ಭಾಗದಲ್ಲಿ ಚೆಸ್, ಕೇರಂನಂತಹ ಆಟಗಳನ್ನು ಆಡಲು ಕೊಠಡಿ ನಿರ್ಮಾಣ ಮಾಡಲಾಗುತ್ತದೆ.ರಂಗಮಂದಿರದ ಒಂದು ಪಕ್ಕದಲ್ಲಿ ಮಕ್ಕಳ ಸುಂದರ ಉದ್ಯಾನವನ ನಿರ್ಮಾಣ ಮಾಡಿ ಅದರಲ್ಲಿ ಮಕ್ಕಳು ಆಡಬಹುದಾದ ಆಟಿಕೆಗಳನ್ನು ಅಲ್ಲಿ ಅಳವಡಿಸುವಂತೆ ವಿನ್ಯಾಸ ಮಾಡಲಾಗಿದೆ.
ಈಗಿರುವ ಮೈದಾನದ ರಂಗಮಂದಿರದ ಎಡಭಾಗದಿಂದ ಸೊಸೈಟಿ ಕಟ್ಟಡದ ಹಿಂಭಾಗದವರೆಗೆ ಎಲ್ ಆಕಾರದಲ್ಲಿ ಜನರು ಕುಳಿತುಕೊಳ್ಳುವಂತಹ ಮೆಟ್ಟಿಲುಗಳನ್ನು ಮಾಡಿ ನೆರಳಿಗೆ ಟೆಂಜೈಲ್ ರೂಫಿಂಗ್ ಹಾಕಲಾಗುತ್ತದೆ. ಮೈದಾನದಲ್ಲಿ ಆಡುವ ಆಟಗಳು ಮತ್ತು ರಂಗಮಂದಿರದ ಚಟುವಟಿಕೆಗಳನ್ನು ಕುಳಿತು ನೋಡುವಂತಹ ವ್ಯವಸ್ಥೆ ಮಾಡಲಾಗುತ್ತದೆ. ಈಗಿರುವ ಕಾಂಪೋಂಡನ್ನು ಸಂಪೂರ್ಣವಾಗಿ ತೆರವುಗೊಳಿಸಿ ನೂತನವಾಗಿ ನಿರ್ಮಾಣ ಮಾಡಲಾಗುತ್ತದೆ. ಬಿದ್ದ ಮಳೆನೀರು ಹೊರಗೆ ಹೋಗಿ ಒಳಚರಂಡಿಗೆ ಸಂಪರ್ಕ ಕಲ್ಪಿಸುತ್ತದೆ. ಇದರ ಮೇಲೆಯೇ ಟೈಲ್ಸ್‌ಗಳನ್ನು ಹಾಕಿ ಅದನ್ನು ಜನರ ವಾಯುವಿಹಾರಕ್ಕೆ ಅನುವು ಮಾಡಿಕೊಡಲಾಗಿದೆ.ಯಾವ ಯಾವ ಕ್ರೀಡೆಗಳಿಗೆ ಅನುಕೂಲ:
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡುವಂತಹ ನೆಟ್ ವ್ಯವಸ್ಥೆಯಲ್ಲಿ ಕ್ರಿಕೆಟ್ ಅಭ್ಯಾಸ ಮಾಡುವಂತೆ ಯೋಜನೆ ಮಾಡಲಾಗಿದೆ. ಮೈದಾನದ ಸುತ್ತಲೂ ಅಥ್ಲೆಟಿಕ್ ಕ್ರೀಡೆಗಳಿಗೆ ಅನುಕೂಲವಾಗುವಂತೆ ಯೋಜನೆ ರೂಪಿಸಿ, ರಾತ್ರಿ ವೇಳೆಯೂ ಆಟವಾಡಲು ಮತ್ತು ಪಂದ್ಯಾವಳಿಗಳನ್ನು ಏರ್ಪಡಿಸಲು ಅನುಕೂಲವಾಗಲು ನಾಲ್ಕು ಹೈಮಾಸ್ ದೀಪಗಳನ್ನು ಅಳವಡಿಸುವ ವ್ಯವಸ್ಥೆ ಮಾಡಲಾಗಿದೆ. ಮೈದಾನದ ಪಕ್ಕದಲ್ಲಿರುವ ರೇಷ್ಮೆ ಇಲಾಖೆ ಕಟ್ಟಡ ತೆರವುಗೊಂಡ ನಂತರ ಆ ಜಾಗದಲ್ಲಿ ಇನ್‌ಡೋರ್ ಸ್ಟೇಡಿಯಂ ನಿರ್ಮಾಣ ಮಾಡಿ ಅಲ್ಲಿ ಶಟಲ್ ಬ್ಯಾಂಡ್ಮಿಂಟನ್, ವಾಲೀಬಾಲ್, ಟೆನ್ನಿಸ್ ಆಟಗಳಿಗೆ ಅನುಕೂಲ ಮಾಡಿಕೊಡಲಾಗುತ್ತದೆ. ಇಷ್ಟೆಲ್ಲಾ ಅನುಕೂಲಗಳ ನಡುವೆಯೂ ಮರಗಳನ್ನು ಉಳಿಸಿಕೊಳ್ಳಬೇಕಾದ ಅನಿವಾರ್‍ಯತೆ ಗ್ರಾಮಸ್ಥರಿಗಿದೆ.ಮರ ಕಡಿಯಲು ಪಂಚಾಯ್ತಿ ಅನುಮೋದನೆ:
ಹೈಟೆಕ್ ಮೈದಾನ ನಿರ್ಮಾಣಕ್ಕೆ ಮರಗಳನ್ನು ಕಡಿಯಲು ಸ್ಥಳೀಯ ಗ್ರಾಮಪಂಚಾಯ್ತಿ ಸದಸ್ಯರು ವಿರೋಧವಿಲ್ಲದೆ ಒಪ್ಪಿಗೆ ನೀಡಿರುವುದು ಗ್ರಾಮಸ್ಥರಿಗೆ ಆಶ್ಚರ್ಯ ತರಿಸಿದೆ. ಪಂಚಾಯ್ತಿ ಸದಸ್ಯರು ಪರಿಸರ ದಿನಾಚಾರಣೆಯ ಸಂದರ್ಭದಲ್ಲಿ ಗಿಡಗಳನ್ನು ನೆಡುವ ಪ್ರಯತ್ನ ಮಾಡಲೇ ಇಲ್ಲ. ಆದರೆ ಮರ ಕಡಿಯಲು ಮಾತ್ರ ಅನುಮತಿ ನೀಡಿರುವುದಕ್ಕೆ ಪರಿಸರ ಪ್ರೇಮಿಗಳು ಹಾಗೂ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.‘ಒಂದು ಮರ ಕಡಿಯುತ್ತೇವೆ, ಹತ್ತು ಗಿಡ ನೆಡುತ್ತೇವೆ ಎನ್ನುವುದೇ ವಿಚಿತ್ರ. ಇರುವ ಮರಗಳನ್ನೇ ಕಾಪಾಡಿಕೊಳ್ಳಲಾಗದವರು ಹತ್ತು ಗಿಡಗಳನ್ನು ಎಲ್ಲಿ ನೆಡುತ್ತೀರಿ? ಮೈದಾನ ಅಭಿವೃದ್ಧಿಯಾಗುವುದಾದರೆ ಆಗಲಿ, ಆದರೆ ಮರಗಳನ್ನು ಉಳಿಸಿಕೊಳ್ರಪ್ಪಾ, ಮಳೆ ಬೆಳೆ ಇಲ್ಲದಂಗಾಗಿದೆ. ಹಕ್ಕಿ ಪಕ್ಷಿಗಳು ಎಲ್ಲಿ ಹೋಗಬೇಕು? ಬೆಳಗ್ಗೆ ಮರ ಬಿಟ್ಟು ಕಾಳಿಗಾಗಿ ಹಾರಿ ಹೋದ ಪಕ್ಷಿ ಮರಳಿ ಗೂಡಿಗೆ ಬರುವುದರೊಳಗೆ ಮರ ಕಡಿದು ಅದರೊಳಗಿದ್ದ ಗೂಡು ಕೆಡವಿದರೆ ಅವು ಎಲ್ಲಿಗೆ ಹೋಗಬೇಕಪ್ಪಾ? ಬೇಕಿದ್ದರೆ ರೆಂಬೆ ಕಡಿದು ಅಭಿವೃದ್ಧಿ ಮಾಡಿಕೊಳ್ಳಿ, ಮರದ ಬುಡಕ್ಕೆ ಕೊಡಲಿ ಹಾಕಬೇಡಿ.’-ಸಾಲುಮರದ ತಿಮ್ಮಕ್ಕ. ಪದ್ಮಶ್ರೀ ಪುರಸ್ಕೃತೆ
‘ಮೈದಾನದ ಅಭಿವೃದ್ಧಿಗೆ ವಿಷಯ ಪ್ರಸ್ತಾಪ ಆದಾಗ ಮೊದಲು ನಾವು ವಿರೋಧ ವ್ಯಕ್ತಪಡಿಸಿದೆವು. ಆದರೆ ಆಗುವುದೇ ಇಲ್ಲ ಎಂದಾಗ ಪಶ್ಚಿಮ ದಿಕ್ಕಿನಲ್ಲಿರುವ ಮರಗಳನ್ನು ಕಡಿಯಲು ಸರ್ವ ಸದಸ್ಯರು ಒಪ್ಪಿಗೆ ನೀಡಿದರು. ಈಗಲೂ ನಮ್ಮ ಬದಲಾವಣೆ ಎಂದರೆ ಮರಗಳನ್ನು ಉಳಿಸಿಕೊಂಡು ರೆಂಬೆ ಕಡಿದು ಮೈದಾನ ನಿರ್ಮಾಣ ಮಾಡಿ ಎಂಬುದೇ ಆಗಿದೆ.’-ಕುಸುಮಾ ಹೊನ್ನರಾಜು. ಅಧ್ಯಕ್ಷರು. ಗ್ರಾಮಪಂಚಾಯ್ತಿ