ಭೂಗತ ಜಲವಿದ್ಯುತ್‌ ಯೋಜನೆ ಬೇಡ: ಗೇರುಸೊಪ್ಪ ನಗರಬಸ್ತಿಕೇರಿ ಗ್ರಾಪಂ ವಿಶೇಷ ಗ್ರಾಮಸಭೆಯಲ್ಲಿ ನಿರ್ಣಯ

| Published : Feb 06 2025, 12:15 AM IST

ಭೂಗತ ಜಲವಿದ್ಯುತ್‌ ಯೋಜನೆ ಬೇಡ: ಗೇರುಸೊಪ್ಪ ನಗರಬಸ್ತಿಕೇರಿ ಗ್ರಾಪಂ ವಿಶೇಷ ಗ್ರಾಮಸಭೆಯಲ್ಲಿ ನಿರ್ಣಯ
Share this Article
  • FB
  • TW
  • Linkdin
  • Email

ಸಾರಾಂಶ

ನದಿ ನೀರಿಗೆ ಸಮುದ್ರದ ಉಪ್ಪು ನೀರು ಸೇರುವ ಅಪಾಯದ ಹಿನ್ನೆಲೆ ಯೋಜನೆಯನ್ನು ಜಾರಿಗೊಳಿಸುವುದು ಯೋಗ್ಯವಲ್ಲ ಎನ್ನುವ ಅಭಿಪ್ರಾಯಕ್ಕೆ ನಾಗರಿಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಯಿತು.

ಹೊನ್ನಾವರ: ಭೂಗತ ಜಲವಿದ್ಯುತ್‌ ಯೋಜನೆ(ಶರಾವತಿ ಪಂಪ್ಡ್ ಸ್ಟೋರೇಜ್)ಯನ್ನು ಅನುಷ್ಠಾನ ಮಾಡದಂತೆ ಇತ್ತೀಚೆಗೆ ಗ್ರಾಪಂ ಅಧ್ಯಕ್ಷೆ ಸುನೀತಾ ಎಸ್. ಹೆಗಡೆ ಅವರ ಅಧ್ಯಕ್ಷತೆಯಲ್ಲಿ ತಾಲೂಕಿನ ಗೇರುಸೊಪ್ಪ ನಗರಬಸ್ತಿಕೇರಿ ಗ್ರಾಮ ಪಂಚಾಯಿತಿ ವಿಶೇಷ ಗ್ರಾಮಸಭೆ ಸರ್ವಾನುಮತದಿಂದ ನಿರ್ಣಯ ಕೈಗೊಂಡಿದೆ.

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ವಿರೋಧಿಸಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಮಂಜುನಾಥ್ ಎಲ್. ನಾಯ್ಕ ಸಭೆಯಲ್ಲಿ ಗೊತ್ತುವಳಿಯನ್ನು ಮಂಡಿಸಿದರು.

ಗೊತ್ತುವಳಿ ಮೇಲೆ ಮಹೇಶ್ ಎಂ. ನಾಯ್ಕ ಅಡಿಗದ್ದೆ ಮತ್ತು ಹಲವು ನಾಯಕರು ವಿಸ್ತೃತ ಚರ್ಚೆಯನ್ನು ನಡೆಸಿ, ಪರಿಸರ ಸೂಕ್ಷ್ಮ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭೂಗತ ವಿದ್ಯುತ್ ಯೋಜನೆ(ಶರಾವತಿ ಪಂಪ್ಡ್ ಸ್ಟೋರೇಜ್)ಯನ್ನು ಅನುಷ್ಠಾನ ಮಾಡುವುದು ತರವಲ್ಲ. ಉದ್ದೇಶಿತ ಯೋಜನೆ ಜಾರಿಯಾದರೆ ಭೂಕುಸಿತದ ಭೀತಿ, ಅರಣ್ಯ ನಾಶ, ಜನವಸತಿ ಪ್ರದೇಶಗಳಿಗೆ ಪರಿಣಾಮ ಉಂಟಾಗುತ್ತದೆ. ನದಿ ನೀರಿಗೆ ಸಮುದ್ರದ ಉಪ್ಪು ನೀರು ಸೇರುವ ಅಪಾಯದ ಹಿನ್ನೆಲೆ ಯೋಜನೆಯನ್ನು ಜಾರಿಗೊಳಿಸುವುದು ಯೋಗ್ಯವಲ್ಲ ಎನ್ನುವ ಅಭಿಪ್ರಾಯಕ್ಕೆ ನಾಗರಿಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಯಿತು.ಇತ್ತೀಚೆಗೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ರಾಜ್ಯ ವನ್ಯಜೀವಿ ಮಂಡಳಿ ಸಭೆ ನಡೆದಿದ್ದು, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಷರತ್ತುಬದ್ಧ ಅನುಮತಿ ನೀಡಿರುವ ಬಗ್ಗೆ ಮತ್ತು ಶರಾವತಿ ಸಿಂಗಳೀಕ ಅಭಯಾರಣ್ಯದ ಕೇಂದ್ರ ಭಾಗದಲ್ಲಿ ೮ರಿಂದ ೯ ಸಾವಿರ ಮರಗಳನ್ನು ಕಡಿಯಲು ಒಪ್ಪಿಗೆ ಸೂಚಿಸಿರುವುದು ಶರಾವತಿ ಸಿಂಗಳೀಕ ಅಭಯಾರಣ್ಯದ ಅವನತಿಗೆ ಕಾರಣವಾಗಲಿದೆ. ಇದು ಸರಿಯಲ್ಲ ಎಂದು ಮುಖಂಡರು ತಿಳಿಸಿದರು.

ನದಿಪಾತ್ರದಲ್ಲಿ ರೈತರ ಸಾವಿರಾರು ಹೆಕ್ಟೇರ್ ಕೃಷಿ ಜಮೀನುಗಳಿಗೆ ನೀರುಣಿಸುವ ೧೦ಕ್ಕೂ ಹೆಚ್ಚು ಏತ ನೀರಾವರಿ ಯೋಜನೆಗಳು ಅನುಷ್ಠಾನದಲ್ಲಿದ್ದು, ಲಕ್ಷಾಂತರ ಜನರಿಗೆ ಶರಾವತಿ ಕುಡಿಯುವ ನೀರಿನ ಸರಬರಾಜು ಆಗುತ್ತಿದೆ. ಉದ್ದೇಶಿತ ಭೂಗತ ಜಲ ವಿದ್ಯುತ್ ಯೋಜನೆ ಜಾರಿಯಾದರೆ ಬೇಸಿಗೆಯಲ್ಲಿಯೇ ಸಮುದ್ರದ ಉಪ್ಪು ನೀರು ಶರಾವತಿ ನದಿಗೆ ಸೇರಿ ೨೫ರಿಂದ ೩೦ ಕಿಮೀ ವ್ಯಾಪ್ತಿಯಲ್ಲಿ ನಾಗರಿಕ ಸೇವೆಗಳಿಗೆ ವ್ಯತ್ಯಯ ಉಂಟಾಗಲಿದೆ. ಇದರಿಂದ ಜನಜೀವನಕ್ಕೆ ಅನೇಕ ರೀತಿಯ ಆತಂಕ ಎದುರಾಗಲಿದೆ. ಹೀಗಾಗಿ ಈ ಯೋಜನೆಯ ಜಾರಿಯನ್ನು ಗ್ರಾಮಸಭೆಯಲ್ಲಿ ಒಕ್ಕೊರಲಿನಿಂದ ವಿರೋಧಿಸಿ, ಯೋಜನೆ ಜಾರಿ ಮಾಡದಂತೆ ನಿರ್ಣಯ ಕೈಗೊಳ್ಳಲಾಯಿತು.

ಪೂರ್ವಭಾವಿ ಸಭೆ: ಮತ್ತೊಂದು ಪ್ರಮುಖ ಬೆಳವಣಿಗೆಯಲ್ಲಿ ಗ್ರಾಮಸಭೆ ನಡೆಯುವ ಮುನ್ನ ಸ್ಥಳೀಯ ಗ್ರಾಮ ಪಂಚಾಯಿತಿ ಮತ್ತು ಶರಾವತಿ ನದಿ- ಕಣಿವೆ ಹೋರಾಟ ಸಮಿತಿಯವರು ಗ್ರಾಮದಲ್ಲಿ ಪೂರ್ವಭಾವಿ ಸಭೆ ನಡೆಸಿದರು.

ಸಭೆಯಲ್ಲಿ ಜೀವವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಸಾಗರದ ಪರಿಸರ ತಜ್ಞ ಅಖಿಲೇಶ ಚಿಪಗಿ, ಶರಾವತಿ ನದಿ ಕಣಿವೆ ಉಳಿಸಿ ಹೋರಾಟ ಸಮಿತಿಯ ಚಂದ್ರಕಾಂತ್ ಕೊಚರೇಕರ್, ಕಡಲ ವಿಜ್ಞಾನಿ ಡಾ. ಪ್ರಕಾಶ ಮೇಸ್ತ, ವಿದ್ಯುತ್ ತಾಂತ್ರಿಕ ತಜ್ಞ ಶಂಕರ ಶರ್ಮ ಮುಂತಾದವರು ಮಾತನಾಡಿ ಉದ್ದೇಶಿತ ಪಂಪ್ಡ್ ಸ್ಟೋರೇಜ್ ಭೂಗತ ಜಲ ವಿದ್ಯುತ್ ಯೋಜನೆಯ ಸಾಧಕ- ಬಾಧಕಗಳ ಕುರಿತು ಮಾತನಾಡಿದರು.ಸಾರ್ವಜನಿಕರು ಕೇಳಿದ ಪ್ರಶ್ನೆಗಳಿಗೆ ತಜ್ಞರು ಉತ್ತರವನ್ನು ನೀಡಿದರು. ಸಭೆಯಲ್ಲಿ ತಾಲೂಕು ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ್ ನಾಯ್ಕ ಬೋಳ್ಕಾರ, ಗ್ರಾಮ ಪಂಚಾಯಿತಿ ಅಧ್ಯಕ್ಷರ ತಾಲೂಕು ಒಕ್ಕೂಟದ ಅಧ್ಯಕ್ಷ ಗಣೇಶ್ ಟಿ. ನಾಯ್ಕ, ಶರಾವತಿ ನದಿ ಕಣಿವೆ ಹೋರಾಟ ಸಮಿತಿಯ ಸಂಚಾಲಕರಾದ ಯೋಗೇಶ ರಾಯ್ಕರ ಉಪ್ಪೋಣಿ, ವಿನೋದ ನಾಯ್ಕ ಮಾವಿನಹೊಳೆ, ಕೇಶವ್ ನಾಯ್ಕ ಬಳ್ಕೂರು, ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ವಿನಾಯಕ ಬಿ. ನಾಯ್ಕ ಮೂಡ್ಕಣಿ ಮುಂತಾದವರು ಉಪಸ್ಥಿತರಿದ್ದರು.