ರಾಜ್ಯದಲ್ಲಿ ಕಳೆದ 4 ವರ್ಷಗಳಿಂದ ಸರ್ಕಾರಿ ಶಾಲೆಗಳಲ್ಲಿ ಆರಂಭಗೊಂಡ ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಸಮವಸ್ತ್ರ ನೀಡಿಲ್ಲ. ಇದು ಬಡ ಕುಟುಂಬದ ಮಕ್ಕಳ ಪಾಲಕರಿಗೆ ಹೊರೆಯಾಗಿ ಪರಿಣಮಿಸಿದೆ.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ರಾಜ್ಯದಲ್ಲಿ ಕಳೆದ 4 ವರ್ಷಗಳಿಂದ ಸರ್ಕಾರಿ ಶಾಲೆಗಳಲ್ಲಿ ಆರಂಭಗೊಂಡ ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಸಮವಸ್ತ್ರ ನೀಡಿಲ್ಲ. ಇದು ಬಡ ಕುಟುಂಬದ ಮಕ್ಕಳ ಪಾಲಕರಿಗೆ ಹೊರೆಯಾಗಿ ಪರಿಣಮಿಸಿದೆ.

ರಾಜ್ಯದಲ್ಲಿ 2023-24ನೇ ಸಾಲಿನಿಂದ ಈ ವರೆಗೂ ಕೇಂದ್ರ ಸರ್ಕಾರದ ಅಡಿಯಲ್ಲಿ ಮಂಜೂರಾದ, 580 ಪಿಎಂಶ್ರೀ ಸರ್ಕಾರಿ ಶಾಲೆಯಲ್ಲಿ ಆರಂಭಿಸಲಾದ ಎಲ್‌ಕೆಜಿ, ಯುಕೆಜಿಯಲ್ಲಿ ಅಭ್ಯಾಸ ಮಾಡುತ್ತಿರುವ 1800 ಮಕ್ಕಳಿಗೆ ಸಮವಸ್ತ್ರ ನೀಡುತ್ತಿಲ್ಲ. ಆಯಾ ಶಾಲೆಯ ಎಸ್‌ಡಿಎಂಸಿ ಸದಸ್ಯರು ಪಾಲಕರಿಂದ ಹಣ ಪಡೆದು ಒಂದೇ ರೀತಿಯ ಸಮವಸ್ತ್ರ ನಿರ್ಧರಿಸಿ ಖರೀದಿಸುವ ಪ್ರಕ್ರಿಯೆ ನಡೆದಿದೆ.

ಇವು ಪಿಎಂಶ್ರೀ ಶಾಲೆಗಳು:

ಬಾಗಲಕೋಟೆ-29, ಬಳ್ಳಾರಿ-16, ಬೆಳಗಾವಿ-17, ಬೆಳಗಾವಿ ಚಿಕ್ಕೋಡಿ-32, ಬೆಂಗಳೂರು ಗ್ರಾಮೀಣ-4, ಬೆಂಗಳೂರು ಉತ್ತರ-6, ಬೆಂಗಳೂರು ದಕ್ಷಿಣ-8, ಬೀದರ್‌-6, ಚಾಮರಾಜನಗರ-8, ಚಿಕ್ಕಬಳ್ಳಾಪುರ- 11, ಚಿಕ್ಕಮಂಗಳೂರು-12, ಚಿತ್ರದುರ್ಗ-13, ದಕ್ಷಿಣ ಕನ್ನಡ-17, ದಾವಣಗೆರೆ-12, ಧಾರವಾಡ-12, ಗದಗ-18, ಹಾಸನ-17, ಹಾವೇರಿ-21, ಕಲಬುರಗಿ-21, ಕೊಡಗು-6, ಕೋಲಾರ-11, ಕೊಪ್ಪಳ-13, ಮಂಡ್ಯ-6, ಮೈಸೂರು-17, ರಾಯಚೂರು-20, ರಾಮನಗರ-7, ಶಿವಮೊಗ್ಗ-12, ತುಮಕೂರು-11, ತುಮಕೂರು ಮಧುಗಿರಿ-6, ಉಡುಪಿ-11, ಉತ್ತರ ಕನ್ನಡ ಶಿರಸಿ-9, ಉತ್ತರ ಕನ್ನಡ-4, ವಿಜಯನಗರ-11, ವಿಜಯಪುರ-23, ಯಾದಗಿರಿ-15 ಶಾಲೆಗಳು ಸೇರಿದಂತೆ ಈವರೆಗೂ ಮಂಜೂರಾದ 580 ಪಿಎಂಶ್ರೀ ಸರ್ಕಾರಿ ಶಾಲೆಗಳಲ್ಲಿ 1800ಕ್ಕೂ ಹೆಚ್ಚು ಮಕ್ಕಳು ಅಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಸಮವಸ್ತ್ರವಿಲ್ಲ.

ಉಳಿದಂತೆ ರಾಜ್ಯದ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 200, ರಾಜ್ಯದ ಇತರೆ ಜಿಲ್ಲೆಗಳಲ್ಲಿ 500 ಸೇರಿದಂತೆ, ಒಟ್ಟು ಈ ವರೆಗೂ 1 ಸಾವಿರ ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ತೆರೆಯಲಾಗಿದೆ. ಇಲ್ಲಿಯೂ 30 ಸಾವಿರಕ್ಕೂ ಹೆಚ್ಚು ಮಕ್ಕಳು ಎಲ್‌ಕೆಜಿ, ಯುಕೆಜಿಯಲ್ಲಿ ಅಭ್ಯಾಸ ಮಾಡುವ ಮಕ್ಕಳಿಗೂ ಸರ್ಕಾರದಿಂದ ಸಮವಸ್ತ್ರವಿಲ್ಲ.

ಸರ್ಕಾರ ಆರಂಭಿಸಿದ ಇಂಗ್ಲಿಷ್‌ ಮಾಧ್ಯಮ ಶಾಲೆಗಳಿಗೆ ಹತ್ತಾರು ಕನಸುಗಳನ್ನು ಕಟ್ಟಿಕೊಂಡು ಬಡ ಕೂಲಿ ಕಾರ್ಮಿಕರು ತಮ್ಮ ಮಕ್ಕಳನ್ನು ದಾಖಲಿಸಿದ್ದಾರೆ. ಕನ್ನಡ ಮಾಧ್ಯಮದ ಮಕ್ಕಳಿಗೆ ಸಮವಸ್ತ್ರ ನೀಡುವ ಸರ್ಕಾರ ಇಂಗ್ಲಿಷ್‌ ಮಾಧ್ಯಮದ ಮಕ್ಕಳಿಗೂ ನೀಡಬೇಕು ಎಂಬುದು ಪಾಲಕರ ಒತ್ತಾಯವಾಗಿದೆ.

ಗ್ರಾಮೀಣ ಪ್ರದೇಶದಲ್ಲಿನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬಡ ಕೂಲಿ ಕಾರ್ಮಿಕರ ಮಕ್ಕಳಿದ್ದಾರೆ. ಅವರ ಪಾಲಕರು ನಿತ್ಯ ಕೂಲಿ ಮಾಡಿ ಜೀವನ ಮಾಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಸಮವಸ್ತ್ರ ಖರೀದಿಗೆ ಹೆಣಗಾಡುತ್ತಿದ್ದಾರೆ. ಆ ಮಕ್ಕಳಿಗೂ ಸರ್ಕಾರ ಸಮವಸ್ತ್ರ ನೀಡಲಿ ಎಂದು ಹರವಿ, ಗ್ರಾಮಸ್ಥ ರಾಜು ಆಗ್ರಹಿಸಿದ್ದಾರೆ.ಸರ್ಕಾರಿ ಶಾಲೆಯಲ್ಲಿ ಆರಂಭಿಸಿದ ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಸಮವಸ್ತ್ರ ನೀಡುವ ಕುರಿತು ಈ ವರೆಗೂ ಇಲಾಖೆಯಿಂದ ಯಾವುದೇ ಬೇಡಿಕೆ ಕೇಳಿಲ್ಲ. ಈ ವರ್ಷ ಆ ಮಕ್ಕಳಿಗೆ ಹೊಸದಾಗಿ ಪಠ್ಯ ಪುಸ್ತಕಗಳನ್ನು ನೀಡಿದ್ದೇವೆ ಎಂದು ಹೂವಿನಹಡಗಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಮಂಗಳಾ ತಿಳಿಸಿದರು.