ಸಾರಾಂಶ
ಬೆಂಗಳೂರು : ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಯಾರಿಗೂ ಅನ್ಯಾಯ ಆಗುವುದಿಲ್ಲ ಎಂದು ಹೇಳಿರುವ ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ರಚನೆಯಾಗಿರುವ ಆಯೋಗದ ಅಧ್ಯಕ್ಷ ನ್ಯಾ.ನಾಗಮೋಹನ್ ದಾಸ್ ಅವರು ಈ ಬಗ್ಗೆ ಸಂಘರ್ಷಕ್ಕೆ ಇಳಿಯಬೇಡಿ ಎಂದು ಬಹಿರಂಗವಾಗಿ ಮನವಿ ಮಾಡಿದ್ದಾರೆ.
ಕರ್ನಾಟಕ ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿಯು ವಸಂತ ನಗರದ ಅಂಬೇಡ್ಕರ್ ಭವನದಲ್ಲಿ ಗುರುವಾರ ಆಯೋಜಿಸಿದ್ದ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲಿಯವರೆಗೆ ಅಸಮಾನತೆ ಇರುವುದಿಲ್ಲವೋ ಅಲ್ಲಿಯವರೆಗೂ ಮೀಸಲಾತಿ ವ್ಯವಸ್ಥೆ ಇರಬೇಕು. ಒಳ ಮೀಸಲಾತಿ ಜಾರಿಯಿಂದ ನಿಮಗೆ ಅನ್ಯಾಯ ಆಗುವುದಿಲ್ಲ. ಸಂಕಷ್ಟದಲ್ಲಿ ಇರುವವರಿಗೆ ಮೀಸಲಾತಿ ನೀಡೋಣ. ಇಲ್ಲಿಯವರೆಗೆ ಯಾರಿಗೆ ಅನ್ಯಾಯ ಆಗಿದೆಯೋ ಅಂಥವರಿಗೆ ಸ್ವಲ್ಪ ಹೆಚ್ಚು ಮೀಸಲಾತಿ ನೀಡೋಣ ಎಂದು ಸ್ಪಷ್ಟಪಡಿಸಿದರು.
ಒಳ ಮೀಸಲಾತಿ ಜಾರಿಯಾಗುವುದರಿಂದ ಯಾರನ್ನೋ ಹೊರಕ್ಕೆ ಇಡಲಾಗುವುದು ಎಂಬ ಆತಂಕ ಬೇಡ. ಆಯೋಗ ಸಮಗ್ರವಾಗಿ ಪರಿಶೀಲನೆ ನಡೆಸಿದ್ದು, ಶೀಘ್ರದಲ್ಲೇ ಸರ್ಕಾರಕ್ಕೆ ವರದಿ ನೀಡಲಿದೆ. ಹಸಿದವನಿಗೆ ಊಟ ಕೊಡಬೇಕು, ಊಟ ಮಾಡಿದವನು ಕಾಯಬೇಕು ಎಂದು ಸೂಚ್ಯವಾಗಿ ತಿಳಿಸಿದರು.
ಸಮಾನತೆ ಸಾಧಿಸಲು ಒಳ ಮೀಸಲಾತಿಯ ಅವಶ್ಯಕತೆ ಇದೆ. ಒಳ ಮೀಸಲಾತಿ ಜಾರಿ ಮಾಡುವ ಮುನ್ನ ವೈಜ್ಞಾನಿಕವಾಗಿ ಔದ್ಯೋಗಿಕ ಮತ್ತು ಶೈಕ್ಷಣಿಕ ದತ್ತಾಂಶ ಸಂಗ್ರಹಿಸಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ. ಆದ್ದರಿಂದ ರಾಜ್ಯ ಸರ್ಕಾರವು ಮಾಹಿತಿ ಸಂಗ್ರಹಿಸಲು ಆಯೋಗ ನೇಮಿಸಿದೆ. ಈವರೆಗೂ ಎರಡು ಸಾವಿರಕ್ಕೂ ಅಧಿಕ ಮಂದಿ ಆಯೋಗವನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ ಎಂದು ವಿವರಿಸಿದರು.
ಮಾಯಕೊಂಡ ಶಾಸಕ ಬಸವಂತಪ್ಪ, ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ್, ಮಾಜಿ ಸಚಿವ ಎಚ್.ಡಿ.ಕೋಟೆ ಶಿವಣ್ಣ, ವಿಧಾನ ಪರಿಷತ್ ಮಾಜಿ ಸದಸ್ಯ ಧರ್ಮಸೇನ, ಮಾಜಿ ಸಂಸದ ಚಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.
3 ದಶಕದ ಹೋರಾಟ: ಆಂಜನೇಯ
ಮೂರು ದಶಕದಿಂದ ಒಳ ಮೀಸಲಾತಿಗಾಗಿ ಹೋರಾಟ ನಡೆಸಿಕೊಂಡು ಬಂದಿದ್ದೇವೆ. ಒಳ ಮೀಸಲಾತಿ ನೀಡಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆ ಎಂಬ ಐತಿಹಾಸಿಕ ತೀರ್ಪನ್ನು ಸುಪ್ರೀಂಕೋರ್ಟ್ ನೀಡಿದ್ದು ಉಸಿರಿಲ್ಲದ ಮಾದಿಗ ಸಮುದಾಯಕ್ಕೆ ಉಸಿರು ಬಂದಂತಾಗಿದೆ ಎಂದು ಮಾಜಿ ಸಚಿವ, ಸಮಿತಿಯ ಅಧ್ಯಕ್ಷ ಎಚ್.ಆಂಜನೇಯ ಅಭಿಪ್ರಾಯಪಟ್ಟರು. ಒಳ ಮೀಸಲಾತಿಗೆ ಸಂಬಂಧಿಸಿದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ನಾಯಕರಿಗೆ ಪಕ್ಷಾತೀತವಾಗಿ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳ ಮೀಸಲಾತಿ ಹಂಚಿಕೆಗೆ ಸಂಬಂಧಿಸಿದಂತೆ ನ್ಯಾ.ಎಚ್.ಎನ್.ನಾಗಮೋಹನ್ ದಾಸ್ ಆಯೋಗವನ್ನು ರಚಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
- ಯಾರಿಗೂ ಅನ್ಯಾಯವಾಗಲ್ಲ । ಅಸಮಾನತೆ ಇರುವವರೆಗೂ ಮೀಸಲಾತಿ ಬೇಕು: ಒಳಮೀಸಲು ಆಯೋಗದ ಅಧ್ಯಕ್ಷ- ಶೀಘ್ರದಲ್ಲೇ ಸರ್ಕಾರಕ್ಕೆ ವರದಿ: ದಾಸ್ । ಮಾದಿಕ ಒಳಮೀಸಲು ಹೋರಾಟ ಸಮಿತಿಯಿಂದ ಸಮನ್ವಯ ಸಭೆ
ಉಸಿರಿಲ್ಲದ ಮಾದಿಗರಿಗೆ ಸುಪ್ರೀಂ ತೀರ್ಪಿಂದ ಉಸಿರು
ಮೂರು ದಶಕದಿಂದ ಒಳ ಮೀಸಲಾತಿಗಾಗಿ ಹೋರಾಟ ನಡೆಸಿಕೊಂಡು ಬಂದಿದ್ದೇವೆ. ಒಳ ಮೀಸಲಾತಿ ನೀಡಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆ ಎಂಬ ಐತಿಹಾಸಿಕ ತೀರ್ಪನ್ನು ಸುಪ್ರೀಂಕೋರ್ಟ್ ನೀಡಿದ್ದರಿಂದ ಉಸಿರಿಲ್ಲದ ಮಾದಿಗ ಸಮುದಾಯಕ್ಕೆ ಉಸಿರು ಬಂದಂತಾಗಿದೆ.
- ಎಚ್.ಆಂಜನೇಯ, ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ