ನೀರಿಲ್ಲ.. ನೀರಿಲ್ಲ.. ಕೆರೆಯಲ್ಲಿ ಹನಿ ನೀರೇ ಇಲ್ಲ..!

| Published : May 06 2024, 12:35 AM IST

ಸಾರಾಂಶ

ಮಳೆಯಾಶ್ರಿತ ಪ್ರದೇಶವಾಗಿರುವ ತಾಲೂಕಿನಲ್ಲಿ ನಾಗಮಂಗಲ ಉಪ ವಿಭಾಗದ 64 ಹಾಗೂ ಯಡಿಯೂರು ಉಪ ವಿಭಾಗದ 58 ಸೇರಿ ಒಟ್ಟು 120ಕ್ಕೂ ಹೆಚ್ಚು ಕೆರೆಗಳು ಹೇಮಾವತಿ ವ್ಯಾಪ್ತಿಗೆ ಒಳಪಡಲಿವೆ. ಇವುಗಳಲ್ಲಿ ನಾಗಮಂಗಲ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಸೂಳೆಕೆರೆಯಲ್ಲಿ ಶೇ.30ರಷ್ಟು ಮಾತ್ರ ನೀರಿದ್ದರೆ, ಬೆಳ್ಳೂರು ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ದಾಸನಕೆರೆಯಲ್ಲಿಯೂ ಕಡಿಮೆ ಪ್ರಮಾಣದ ನೀರಿದೆ.

ಕರಡಹಳ್ಳಿ ಸೀತಾರಾಮು

ಕನ್ನಡಪ್ರಭ ವಾರ್ತೆ ನಾಗಮಂಗಲ

ಬೇಸಿಗೆ ಸುಡುಬಿಸಿಲು, ತಾಪಮಾನ ಏರಿಕೆಯಿಂದ ತತ್ತರಿಸುತ್ತಿರುವ ತಾಲೂಕಿನ ಜನತೆ ದಿನ ಕಳೆದಂತೆ ಕುಡಿಯುವ ನೀರಿಗಾಗಿ ಹಾತೊರೆಯುವ ಪರಿಸ್ಥಿತಿ ಎದುರಾಗುತ್ತಿದೆ. ಇನ್ನೊಂದು ತಿಂಗಳು ಕಳೆದರೆ ನೀರಿಗಾಗಿ ತೀವ್ರ ಹಾಹಾಕಾರ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿವೆ.

ತಾಲೂಕಿಗೆ ಬರ ಮತ್ತು ಕುಡಿಯುವ ನೀರಿನ ಸಮಸ್ಯೆ ಎನ್ನುವುದು ಹೊಸದೇನಲ್ಲ. ಆದರೂ ಅಂತರ್ಜಲ ಕುಸಿತ, ವೋಲ್ಟೇಜ್ ಸಮಸ್ಯೆ ಜೊತೆಗೆ ವಿದ್ಯುತ್ ಕಣ್ಣಾಮುಚ್ಚಾಲೆಯಿಂದಾಗಿ ಈಗಾಗಲೇ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ. 18 ಹಳ್ಳಿಗಳಿಗೆ ರೈತರ ಖಾಸಗಿ ಕೊಳವೆಬಾವಿಯಿಂದ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ.

ಮಳೆಯಾಶ್ರಿತ ಪ್ರದೇಶವಾಗಿರುವ ತಾಲೂಕಿನಲ್ಲಿ ನಾಗಮಂಗಲ ಉಪ ವಿಭಾಗದ 64 ಹಾಗೂ ಯಡಿಯೂರು ಉಪ ವಿಭಾಗದ 58 ಸೇರಿ ಒಟ್ಟು 120ಕ್ಕೂ ಹೆಚ್ಚು ಕೆರೆಗಳು ಹೇಮಾವತಿ ವ್ಯಾಪ್ತಿಗೆ ಒಳಪಡಲಿವೆ. ಇವುಗಳಲ್ಲಿ ನಾಗಮಂಗಲ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಸೂಳೆಕೆರೆಯಲ್ಲಿ ಶೇ.30ರಷ್ಟು ಮಾತ್ರ ನೀರಿದ್ದರೆ, ಬೆಳ್ಳೂರು ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ದಾಸನಕೆರೆಯಲ್ಲಿಯೂ ಕಡಿಮೆ ಪ್ರಮಾಣದ ನೀರಿದೆ.

10 ಕೆರೆಗಳಲ್ಲಿ ಕೇವಲ ಶೇ.5ರಷ್ಟು ಮಾತ್ರ ನೀರಿದ್ದು, ಇನ್ನುಳಿದ ಎಲ್ಲಾ ಕೆರೆಗಳು ನೀರಿಲ್ಲದೆ ಬರಿದಾಗಿವೆ. ತಕ್ಷಣಕ್ಕೆ ಮಳೆ ಬೀಳದೆ ಇದೇ ಪರಿಸ್ಥಿತಿ ಮುಂದುವರಿದರೆ ಕೆರೆಯಲ್ಲಿರುವ ಅಲ್ಪಸ್ವಲ್ಪ ನೀರು ಖಾಲಿಯಾಗಿ ನೀರಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹೇಮಾವತಿ ವ್ಯಾಪ್ತಿಗೆ ಬಾರದ ಸಣ್ಣ ಪುಟ್ಟ ಕೆರೆ ಹಾಗೂ ನೀರಿನ ಕಟ್ಟೆಗಳಲ್ಲಿ ಒಂದು ಹನಿ ನೀರಿಲ್ಲ. ತಾಲೂಕಿನ ಯಾವುದೇ ಹಳ್ಳಿಗಳಲ್ಲಿಯೂ ಕನಿಷ್ಠ 900 ಅಡಿ ಆಳದ ಕೊಳವೆ ಬಾವಿಕೊರೆಸಿದರೂ ನೀರು ಬರುತ್ತಿಲ್ಲ. ಹೀಗಾಗಿ ಅಂತರ್ಜಲ ಸಂಪೂರ್ಣ ನೆಲಕಚ್ಚುವಂತ ಪರಿಸ್ಥಿತಿ ಎದುರಾಗುತ್ತಿದೆ.

ತಾಲೂಕಿನ ಹೊಣಕೆರೆ, ಎ.ಶ್ಯಾನುಭೋಗನಹಳ್ಳಿ, ಕನಗೋನಹಳ್ಳಿ, ಬೇಗಮಂಗಲ, ನರಗನಹಳ್ಳಿ, ಗೊಲ್ಲರಹಟ್ಟಿ, ಮಾವಿನಕೆರೆ, ದಾಸರಹಳ್ಳಿ, ನೀಲಕಂಠನಹಳ್ಳಿ, ಎ.ಶ್ರೀರಾಮನಹಳ್ಳಿ, ತಟ್ಟಹಳ್ಳಿ, ಭೀಮನಹಳ್ಳಿ, ಸುನಗನಹಳ್ಳಿ, ಹನುಮನಹಳ್ಳಿ, ಬೆಸ್ತರಕೊಪ್ಪಲು, ಜಿ.ಬೊಮ್ಮನಹಳ್ಳಿ, ಬೊಮ್ಮೇನಹಳ್ಳಿ, ಎಚ್.ಕ್ಯಾತನಹಳ್ಳಿ, ಹಾಗೂ ಮುದ್ದಲಿಂಗನಕೊಪ್ಪಲು ಗ್ರಾಮಗಳಿಗೆ ಖಾಸಗಿ ಬಾವಿಗಳಿಂದ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಗಾಣಸಂದ್ರ, ಕೊಪ್ಪ ಮತ್ತು ಮಲ್ಲರಾಜಪುರ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗುತ್ತಿದೆ.

ಜಾನುವಾರುಗಳ ಸ್ಥಿತಿಗತಿ ಏನು?

ತಾಲೂಕಿನಲ್ಲಿ ಒಟ್ಟು 73582 ಹಸು ಮತ್ತು ಎಮ್ಮೆ, 1,40,796 ಕುರಿ ಮತ್ತು ಮೇಕೆಗಳಿವೆ, ಕೃಷಿ ಜೊತೆಗೆ ಹೈನುಗಾರಿಕೆಯನ್ನೇ ಅವಲಂಬಿಸಿಕೊಂಡಿರುವ ತಾಲೂಕಿನ ರೈತರಿಗೆ ಬೇಸಿಗೆ ಮುಗಿದು ಮುಂದಿನ ಮಳೆಗಾಲ ನೋಡುವವರೆಗೂ ಜಾನುವಾರುಗಳಿಗೆ ಮೇವು ನೀರು ಒದಗಿಸುವುದೇ ದೊಡ್ಡ ಸವಾಲಾಗಿದೆ.

ಈಗಾಗಲೇ ಊರಿನ ಹೊರ ವಲಯದ ಜಮೀನುಗಳಲ್ಲಿ ದನ ಕರುಗಳಿಗೆ ತಿನ್ನಲು ಮೇವು ಕುಡಿಯಲು ನೀರು ಸಿಗುತ್ತಿಲ್ಲ. ಪಂಪ್‌ಸೆಟ್ ಹೊಂದಿರುವ ರೈತರು ಮಾತ್ರ ಬರುವ ಅಲ್ಪ ಸ್ವಲ್ಪ ನೀರಿನಲ್ಲಿ ಹಸಿ ಮೇವು ಬೆಳೆದುಕೊಂಡು ದನ ಕರುಗಳನ್ನು ರಕ್ಷಣೆ ಮಾಡಿಕೊಂಡರೆ, ಇನ್ನುಳಿದ ರೈತರಿಗೆ ಮಾತ್ರ ಸಂಕಷ್ಟ ತಪ್ಪಿದ್ದಲ್ಲ.

ನೆಲಕಚ್ಚಿರುವ ತರಕಾರಿ ಬೆಳೆ:

ಅಂತರ್ಜಲ ಕುಸಿತದಿಂದ ಗ್ರಾಮೀಣ ಪ್ರದೇಶದ ಅದೆಷ್ಟೋ ರೈತರ ಕೊಳವೆಬಾವಿಗಳಲ್ಲಿ ನೀರಿಲ್ಲದೆ ಈಗಾಗಲೇ ನಿಂತುಹೋಗಿವೆ. ಬಹುತೇಕ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ಸಾಲ ಮಾಡಿ ಕಷ್ಟಪಟ್ಟು ಬೆಳೆದಿರುವ ವಿವಿಧ ತರಕಾರಿ ಬೆಳೆಗಳು ಹಾಗೂ ಜಾನುವಾರುಗಳ ಹಸಿ ಮೇವು ತರಗೆಲೆಯಂತೆ ಒಣಗಿ ನಿಂತಿವೆ. ಮಳೆ ಬಿದ್ದರೆ ಸಾಕೆನ್ನುವಂತೆ ದಿನ ಬೆಳಗಾದರೆ ತಲೆಗೆ ಕೈಕೊಟ್ಟು ಮುಗಿಲತ್ತ ತೋಡುತ್ತಿರುವ ಹಳ್ಳಿಗಾಡಿನ ರೈತಾಪಿ ಜನರ ಬದುಕು ನಿಜಕ್ಕೂ ಹೇಳತೀರದಂತಾಗಿದೆ.

ಕುಡಿಯುವ ನೀರಿನ ಸಮಸ್ಯೆ, ಬರ ನಿರ್ವಹಣೆಗೆ ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡಿದೆ. ಜಿಲ್ಲಾಡಳಿತದ ನಿರ್ದೇಶನದಂತೆ ಬರ ನಿರ್ವಹಣೆಗೆ ತಾಲೂಕು ಆಡಳಿತ ಸಜ್ಜಾಗಿದೆ. ಕುಡಿಯುವ ನೀರಿನ ಸಮಸ್ಯೆ ಕಂಡು ಬಂದ ತಕ್ಷಣ ಗ್ರಾಪಂನಿಂದ ಟ್ಯಾಂಕರ್ ಅಥವಾ ಖಾಸಗಿ ಕೊಳವೆಬಾವಿ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಕುಡಿಯುವ ನೀರು, ಜಾನುವಾರುಗಳ ಮೇವಿಗೆ ಸಮಸ್ಯೆ ಎದುರಾಗದಂತೆ ಕ್ರಮ ವಹಿಲಾಗಿದೆ.

- ನಯೀಂಉನ್ನೀಸಾ, ತಹಸೀಲ್ದಾರ್, ನಾಗಮಂಗಲಸರ್ಕಾರದ ನಿರ್ದೇಶನದಂತೆ ಪ್ರತಿ ಗುರುವಾರ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮವಹಿಸುವಂತೆ ಗ್ರಾಪಂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹಬ್ಬ ಮತ್ತು ಜಾತ್ರೆಗಳ ವೇಳೆ ಜನರಿಗೆ ತೊಂದರೆಯಾಗದಂತೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ನೀರಿನ ಮಿತ ಬಳಕೆಗೆ ಹಳ್ಳಿಗಳಲ್ಲಿ ಧ್ವನಿವರ್ಧಕದ ಮೂಲಕ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ.

- ವೈ.ಎನ್.ಚಂದ್ರಮೌಳಿ, ತಾಪಂ, ಇಓ ನಾಗಮಂಗಲನಾಗಮಂಗಲ ತಾಲೂಕಿನ ಜಾನುವಾರುಗಳಿಗೆ ಮುಂದಿನ 16 ವಾರಗಳಿಗೆ ಆಗುವಷ್ಟು ಮೇವು ರೈತರ ಬಳಿ ದಾಸ್ತಾನಿದೆ. ಮೇವಿನ ಸಮಸ್ಯೆ ಉದ್ಭವಿಸಿದಲ್ಲಿ ಒಣ ಮೇವು ಖರೀದಿಸಿ ರೈತರಿಗೆ ಪೂರೈಸಲಾಗುವುದು. ಸರ್ಕಾರದಿಂದ ಬಂದಿರುವ ಮೇವಿನ ಕಿಟ್‌ಗಳನ್ನು ತಾಲೂಕಿನ ಪಶು ಆಸ್ಪತ್ರೆಗಳಿಗೆ ಪೂರೈಕೆ ಮಾಡಿ ಜಾನುವಾರು ಮತ್ತು ಕೊಳವೆಬಾವಿ ಹೊಂದಿರುವ ರೈತರಿಗೆ ಉಚಿತವಾಗಿ ನೀಡುವಂತೆ ನಿರ್ದೇಶನ ನೀಡಲಾಗಿದೆ.

-ಡಾ.ಕುಮಾರ್, ಸಹಾಯಕ ನಿರ್ದೇಶಕರು, ಪಶು ಇಲಾಖೆ ನಾಗಮಂಗಲ