ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಸಂಭವಿಸಬಹುದಾದ ಪ್ರವಾಹ ಎದುರಿಸಲು ಮುಂಜಾಗ್ರತೆ ಮಾಡಿಕೊಳ್ಳಿ, ಕುಡಿಯುವ ನೀರಿನ ಸಮಸ್ಯೆ ಸಹ ಗಂಭೀರವಾಗಿ ಪರಿಗಣಿಸಿ ಪರಿಹರಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಸುಶೀಲಾ ಅವರು ಸೂಚಿಸಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೃಷ್ಣಾ ಮತ್ತು ಭೀಮಾ ನದಿ ಪಾತ್ರದ ಹತ್ತಿರದಲ್ಲಿರುವ ಗ್ರಾಮಗಳ ಜನ-ಜಾನುವಾರುಗಳ ಸುರಕ್ಷತೆಗಾಗಿ ಮುಂಜಾಗ್ರತಾ ಕ್ರಮಕ್ಕಾಗಿ ಗ್ರಾಮವಾರು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಿದ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು,
ಮಳೆಗಾಲ ಇರುವುದರಿಂದ ಜನರ ಆರೋಗ್ಯ ದೃಷ್ಟಿಯಿಂದ ಸ್ವಚ್ಛ, ಶುದ್ಧ ಕುಡಿವ ನೀರು ಒದಗಿಸಲು ಕ್ರಮವಹಿಸಬೇಕು. ಜಿಲ್ಲಾ ವ್ಯಾಪ್ತಿ ಗ್ರಾಮೀಣ ಜನ ವಸತಿ ಪ್ರದೇಶಗಳಲ್ಲಿ ಕಲುಷಿತ ನೀರು ಸೇವನೆಯಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಉಂಟಾಗುತ್ತಿರುವ ಪ್ರಕರಣಗಳನ್ನು ತಡೆಯುವ ಸಲುವಾಗಿ ಎಲ್ಲ ಜಲ ಮೂಲ ಹಾಗೂ ಚರಂಡಿ ಸ್ವಚ್ಛಗೊಳಿಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.ಪ್ರತಿ ಹಳ್ಳಿಯಲ್ಲಿ ಗ್ರಾಮ ಲೆಕ್ಕಾಧಿಕಾರಿ, ಪಿಡಿಒ, ಕಾರ್ಯದರ್ಶಿಗಳು ತಮ್ಮ ಕ್ಷೇತ್ರದಲ್ಲಿದ್ದು, ಯಾವುದೇ ತೊಂದರೆ ಸಂಭವಿಸಿದಲ್ಲಿ ಆ ಕುರಿತು ಡಂಗೂರ ಬಾರಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ತಿಳಿಸಿದರು.
ಅಗ್ನಿ ಶಾಮಕ ಇಲಾಖೆಯವರು ನದಿಗಳಲ್ಲಿ ನೀರು ಏರಿಬಂದಲ್ಲಿ ನದಿ ತೀರದ ಹಳ್ಳಿಯ ಜನರ ಸಂರಕ್ಷಣೆಗೆ ಬೋಟುಗಳ ಅವಶ್ಯಕತೆಯ ಬಗ್ಗೆ ಪರಿಶೀಲಿಸಿಕೊಳ್ಳಬೇಕು. ಹೋಮ್ ಗಾರ್ಡ್ ಸಿಬ್ಬಂದಿ ಸಂಪರ್ಕದಲ್ಲಿಟ್ಟುಕೊಂಡು ಜನರ ಸಂರಕ್ಷಣೆಗೆ ನಿಲ್ಲಬೇಕು. ಆರೋಗ್ಯ ಇಲಾಖೆ ಜನಸಾಮಾನ್ಯರಿಗೆ ಔಷಧಿಗಳ ದಾಸ್ತಾನು ಕುರಿತು ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಾಕಷ್ಟುಸಂಗ್ರಹವಿದೆಯೋ ಎನ್ನುವ ಬಗ್ಗೆ ನೋಡಿಕೊಳ್ಳಬೇಕು. ದನ-ಕರುಗಳಿಗೆ ಮೇವು, ಔಷಧಿ ವ್ಯವಸ್ಥೆ ಬಗ್ಗೆ ಎಚ್ಚರಿಕೆ ವಹಿಸಬೇಕು. ಹಾವು ಇನ್ನಿತರ ವಿಷ ಜಂತುಗಳ ಕಡಿತದಿಂದ ತೊಂದರೆಗಳಾಗುವ ಜನರಿಗೆ ಸೂಕ್ತ ಔಷಧೋಪಚಾರ ನೀಡಲು ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಅವರು ಸೂಚಿಸಿದರು.ಪ್ರವಾಹದಿಂದ ಹಾಗೂ ಜಲಾಶಯಗಳ ಹಿನ್ನೀರಿನಿಂದ ಮುಳುಗಡೆಯಾಗಬಹುದಾದ ಪ್ರದೇಶಗಳನ್ನು ಗುರುತಿಸಿಕೊಂಡು, ಅಂತಹ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಗೆ ಮುಂಚಿತವಾಗಿಯೇ ತೆರವುಗೊಳಿಸಿ ಕ್ರಮ ಜರುಗಿಸಬೇಕು. ಕಾಳಜಿ ಕೇಂದ್ರಗಳನ್ನು ಗುರುತಿಸಿ ಅಲ್ಲಿ ಮೂಲ ಸೌಕರ್ಯಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ಮುಂಜಾಗ್ರತೆಯಾಗಿ ಪ್ರವಾಹಕ್ಕೆ ಒಳಗಾಗುವ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು, ಪ್ರವಾಹ ಪೀಡಿತ ಸಂತ್ರಸ್ತರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲು ಬಸ್ಸುಗಳ ವ್ಯವಸ್ಥೆ ಸಿದ್ದವಾಗಿ ಇಟ್ಟುಕೊಳ್ಳಬೇಕೆಂದು ನಿರ್ದೇಶನ ನೀಡಿದರು.ಜಿಪಂ ಸಿಇಒ ಗರಿಮಾ ಪನ್ವಾರ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್, ಜಿಪಂ ಉಪ ಕಾರ್ಯದರ್ಶಿ ವಿಜಯ ಕುಮಾರ ಮಡ್ಡಿ, ಜಿಪಂ ಸಿಪಿಒ ಗುರುನಾಥ ಗೌಡಪ್ಪನ್ನೋರ್, ಕೃಷಿ ಜಂಟಿ ನಿರ್ದೇಶಕ ಕೆ.ಎಚ್. ರವಿ, ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ. ರಾಜು ದೇಶಮುಖ, ಜಿಪಂ ಮುಖ್ಯ ಲೆಕ್ಕಾಧಿಕಾರಿ ವೆಂಕಟೇಶ ಚಟ್ನಳ್ಳಿ, ನಗರಸಭೆ ಪೌರಾಯುಕ್ತ ಲಕ್ಷ್ಮಿಕಾಂತ, ಮಹಿಳಾ ಇಲಾಖೆ ಪ್ರಭಾರಿ ಉಪನಿರ್ದೇಶಕ ಪ್ರೇಮಮೂರ್ತಿ ಕೆ. ಇತರರಿದ್ದರು.