ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ: ಜಿಲ್ಲಾ ಚುನಾವಣಾಧಿಕಾರಿ ಡಾ.ಕುಮಾರ

| Published : Mar 28 2024, 12:46 AM IST

ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ: ಜಿಲ್ಲಾ ಚುನಾವಣಾಧಿಕಾರಿ ಡಾ.ಕುಮಾರ
Share this Article
  • FB
  • TW
  • Linkdin
  • Email

ಸಾರಾಂಶ

ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ೧೦೦ ಮೀ.ವರೆಗೆ ಮಾತ್ರ ಕೇವಲ ೩ ವಾಹನಗಳು ಪ್ರವೇಶಿಸಲು ಅವಕಾಶವಿರುತ್ತದೆ. ಚುನಾವಣಾಧಿಕಾರಿ ಕಚೇರಿಯಲ್ಲಿ ಸಿ.ಸಿ.ಟೀವಿ ಅಳವಡಿಸಲಾಗಿದ್ದು, ಪ್ರತ್ಯೇಕವಾಗಿ ವಿಡಿಯೋ ರೆಕಾರ್ಡಿಂಗ್ ಮಾಡಲಾಗುವುದು. ನಾಮಪತ್ರ ಸಲ್ಲಿಸಲು ಅವಶ್ಯಕವಾಗಿರುವ ದಾಖಲೆಗಳು ಮತ್ತು ಅನುಸರಿಸಬೇಕಾದ ವಿವಿಧ ಪ್ರಕ್ರಿಯೆಗಳ ಕುರಿತ ಮಾಹಿತಿಯನ್ನು ಚುನಾವಣಾಧಿಕಾರಿಗಳ ಕಾರ್ಯಾಲಯದಲ್ಲಿ ಪಡೆದುಕೊಳ್ಳಬಹುದು.

ಕನ್ನಡಪ್ರಭ ವಾರ್ತೆ ಮಂಡ್ಯ

ಲೋಕಸಭೆ ಸಾರ್ವತ್ರಿಕ ಚುನಾವಣೆ ಅಧಿಸೂಚನೆಯನ್ವಯ ಗುರುವಾರ (ಮಾ.೨೮)ದಿಂದ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ನಾಮಪತ್ರಗಳನ್ನು ಬೆಳಗ್ಗೆ ೧೧ ಗಂಟೆಯಿಂದ ಮಧ್ಯಾಹ್ನ ೩ ಗಂಟೆಯವರೆಗೆ ಜಿಲ್ಲಾಧಿಕಾರಿ ಕಚೇರಿಯ ಕೊಠಡಿ ಸಂಖ್ಯೆ ೨೯ರಲ್ಲಿ ಸ್ವೀಕರಿಸಲಾಗುವುದು. ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣಾಧಿಕಾರಿ ಕಾರ್ಯಾಲಯದ ೧೦೦ ಮೀ. ಪರಿಧಿಯ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿರುವುದಾಗಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ೧೦೦ ಮೀ.ವರೆಗೆ ಮಾತ್ರ ಕೇವಲ ೩ ವಾಹನಗಳು ಪ್ರವೇಶಿಸಲು ಅವಕಾಶವಿರುತ್ತದೆ. ಚುನಾವಣಾಧಿಕಾರಿ ಕಚೇರಿಯಲ್ಲಿ ಸಿ.ಸಿ.ಟೀವಿ ಅಳವಡಿಸಲಾಗಿದ್ದು, ಪ್ರತ್ಯೇಕವಾಗಿ ವಿಡಿಯೋ ರೆಕಾರ್ಡಿಂಗ್ ಮಾಡಲಾಗುವುದು. ನಾಮಪತ್ರ ಸಲ್ಲಿಸಲು ಅವಶ್ಯಕವಾಗಿರುವ ದಾಖಲೆಗಳು ಮತ್ತು ಅನುಸರಿಸಬೇಕಾದ ವಿವಿಧ ಪ್ರಕ್ರಿಯೆಗಳ ಕುರಿತ ಮಾಹಿತಿಯನ್ನು ಚುನಾವಣಾಧಿಕಾರಿಗಳ ಕಾರ್ಯಾಲಯದಲ್ಲಿ ಪಡೆದುಕೊಳ್ಳಬಹುದು ಎಂದರು.

ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ವಿಧಾನಸಭಾ ವಲಯಗಳಲ್ಲಿ ದಿನದ ೨೪ ಗಂಟೆ ಕಾರ್ಯನಿರ್ವಹಿಸಲು ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ. ಈ ಕಂಟ್ರೋಲ್‌ ರೂಂನಲ್ಲಿ ಕರ್ತವ್ಯನಿರ್ವಹಿಸಲು ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನೇಮಿಸಲಾಗಿದೆ.

೧.೦೪ ಕೋಟಿ ರು. ವಶ:

ಮಾದರಿ ನೀತಿ ಸಂಹಿತೆ ಜಾರಿಯಾದ ಮಾ.೧೬ರಿಂದ ಇಲ್ಲಿಯವರೆಗೆ ಎಂಟು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತೆರೆದಿರುವ ಚೆಕ್‌ ಪೋಸ್ಟ್‌ಗಳಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ೧,೦೪,೫೭,೪೯೦ ರು. ಹಣವನ್ನು ವಶಪಡಿಸಿಕೊಳ್ಳಲಾಗಿದೆ. ೭೧.೭೭ ಲಕ್ಷ ರು. ಮೌಲ್ಯದ ೩೬೫೬೯ ಅಕ್ರಮ ಮದ್ಯ ಹಾಗೂ ೬೪ ಸಾವಿರ ರು. ಮೌಲ್ಯದ ೧.೮ ಕೆಜಿ ತೂಕದ ಗಾಂಜಾ ಜಪ್ತಿ ಮಾಡಿರುವುದಾಗಿ ಹೇಳಿದರು.

೯೬ ವಾಹನಗಳಿಗೆ ಜಿಪಿಎಸ್:

ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂಮತೆ ಎಂಟು ವಿಧಾನಸಭಾ ಕ್ಷೇತ್ರಗಳ ಎಲ್ಲಾ ತಹಸೀಲ್ದಾರ್, ಸಹಾಯಕ ಚುನಾವಣಾಧಿಕಾರಿಗಳು ಮತ್ತು ವಿವಿಧ ತಂಡಗಳ ಅಧಿಕಾರಿಗಳ ೯೬ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ೫ ಸಹಾಯಕ ಚುನಾವಣಾಧಿಕಾರಿಗಳು, ೭ ತಹಸೀಲ್ದಾರ್‌ಗಳು, ೬೫ ಫ್ಲೈಯಿಂಗ್ ಸ್ಕ್ವಾಡ್, ೧೯ ವಿಡಿಯೋ ಕಣ್ಗಾವಲು ಘಟಕದ ವಾಹನಗಳಿಗೆ ಜಿಪಿಎಸ್ ಅಳವಡಿಸಿರುವುದಾಗಿ ತಿಳಿಸಿದರು.

ಮೊದಲ ಹಂತದ ಇವಿಎಂ ರ್‍ಯಾಂಡಮೈಜೇಷನ್ ಪ್ರಕ್ರಿಯೆ ಪೂರ್ಣಗೊಳಿಸಿದ್ದು, ಮಾ.೨೩ ಮತ್ತು ೨೪ರಂದು ಆಯಾ ವಿಧಾನಸಭಾ ವಲಯಗಳಿಗೆ ಜಿಪಿಎಸ್ ಆಧಾರಿತ ವಾಹನಗಳಲ್ಲಿ ಸೂಕ್ತ ಪೊಲೀಸ್ ಬಂದೋ ಬಸ್ತ್‌ನಲ್ಲಿ ಸಾಗಾಣಿಕೆ ಮಾಡಿ ಆಯಾ ತಾಲೂಕುಗಳಲ್ಲಿ ಸ್ಥಾಪಿಸಿರುವ ಇವಿಎಂ ಭದ್ರತಾ ಕೊಠಡಿಯಲ್ಲಿ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪದಾಧಿಕಾರಿಗಳ ಸಮ್ಮುಖದಲ್ಲಿ ಶೇಖರಿಸಿಡಲಾಗಿದೆ ಎಂದು ವಿವರಿಸಿದರು.

ಮಸ್ಟರಿಂಗ್ -ಡಿ- ಮಸ್ಟರಿಂಗ್ ಕೇಂದ್ರಗಳು:

ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಮಸ್ಟರಿಂಗ್ ಹಾಗೂ ಡಿ-ಮಸ್ಟರಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮಳವಳ್ಳಿ- ಶಾಂತಿ ಪಿಯು ಕಾಲೇಜು, ಮದ್ದೂರು- ಎಚ್.ಕೆ.ವೀರಣ್ಣಗೌಡ ಪಿಯು ಕಾಲೇಜು, ಮೇಲುಕೋಟೆ-ಪಾಂಡವಪುರ ರೈಲು ನಿಲ್ದಾಣದ ಪಿಎಸ್‌ಎಸ್‌ಕೆ ಪ್ರೌಢ ಶಾಲೆ, ಮಂಡ್ಯ-ಮಂಡ್ಯ ವಿಶ್ವವಿದ್ಯಾಲಯ, ಶ್ರೀರಂಗಪಟ್ಟಣ- ಸರ್ಕಾರಿ ಪದವಿಪೂರ್ವ ಕಾಲೇಜು, ನಾಗಮಂಗಲ-ಸರ್ಕಾರಿ ಪದವಿಪೂರ್ವ ಕಾಲೇಜು, ಕೆ.ಆರ್.ಪೇಟೆ-ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಹಾಗೂ ಕೆ.ಆರ್‌ನಗರ-ಸರ್ಕಾರಿ ಪದವಿ ಕಾಲೇಜು ಇಲ್ಲಿ ನಡೆಯಲಿದೆ.

೯೩೮೮ ಮತಗಟ್ಟೆ ಸಿಬ್ಬಂದಿ ನೇಮಕ:

ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ೨,೦೭೪ ಮತಗಟ್ಟೆಗಳಿದ್ದು, ಇದರಲ್ಲಿ ೨೫೨ ಮತಗಟ್ಟೆಗಳು ಮೈಸೂರು ಜಿಲ್ಲೆಯ ಕೆ.ಆರ್.ನಗರ ಕ್ಷೇತ್ರದ ಮತಗಟ್ಟೆಗಳಾಗಿವೆ. ಜಿಲ್ಲೆಯ ೧೮೨೨ ಮೂಲ ಮತಗಟ್ಟೆಗಳಿಗೆ ಮತ್ತು ಹೆಚ್ಚುವರಿ ೨ ಮತಗಟ್ಟೆಗಳು ಸೇರಿ ೧೮೨೪ ಮತಗಟ್ಟೆಗಳಿಗೆ ೨೩೪೭ ಪಿಆರ್‌ಒ, ೨೩೪೭ ಎಪಿಆರ್‌ಒ, ೪೬೯೪ ಪಿಒ ಸೇರಿ ೯೩೮೮ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.

೮೫ ವರ್ಷ ಮೇಲ್ಪಟ್ಟ ಮತದಾರರಿಗೆ ಮತ್ತು ವಿಶೇಷ ಚೇತನರಿಗೆ ಹಾಗೂ ಅಗತ್ಯ ಸೇವೆಗಳ ಗೈರು ಮತದಾರರಿಗೆ ನಮೂನೆ-೧೨ ಡಿ ವಿತರಿಸಲಾಗುತ್ತಿದೆ. ಜಿಲ್ಲೆಯಲ್ಲಿ ೮೫ ವರ್ಷ ಮೇಲ್ಪಟ್ಟವರು ೨೩,೦೨೩ ಜನರಿದ್ದು, ಇದರಲ್ಲಿ ೧೩,೦೧೩ ಜನರಿಗೆ, ೨೫,೦೨೦ ವಿಕಲಚೇತನರ ಪೈಕಿ ೧೬,೦೯೧ ಜನರಿಗೆ ಹಾಗೂ ಅಗತ್ಯ ಸೇವೆಯಲ್ಲಿ ಕರ್ತವ್ಯನಿರತರಾಗಿರುವ ೨೫೧೮ ಮಂದಿಗೆ ನಮೂನೆ ೧೨-ಡಿ ವಿತರಿಸಿರುವುದಾಗಿ ಹೇಳಿದರು.

ಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್ ಗೋಷ್ಠಿಯಲ್ಲಿದ್ದರು.

ಜಿ.ಕೆಬ್ಬಹಳ್ಳಿ ಪಟಾಕಿ ದುರಂತ: ಮೂವರ ಬಂಧನ

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಜಿ.ಕೆಬ್ಬಹಳ್ಳಿಯಲ್ಲಿ ಸಂಭವಿಸಿದ ಪಟಾಕಿ ದುರಂತಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್ ತಿಳಿಸಿದರು. ತಮಿಳುನಾಡು ಮೂಲದ ಇಬ್ಬರು ಹಾಗೂ ಆಲೆಮನೆ ಮಾಲೀಕರನ್ನು ಬಂಧಿಸಲಾಗಿದೆ. ಬಹಳ ಹಿಂದಿನಿಂದಲೂ ಜಿ.ಕೆಬ್ಬಹಳ್ಳಿಯ ಶ್ರೀಕಾಲಭೈರವೇಶ್ವರ ಸ್ವಾಮಿ ಹಬ್ಬಕ್ಕೆ ತಮಿಳುನಾಡಿನಿಂದಲೇ ಪಟಾಕಿ ಸಿಡಿಸುವವರನ್ನು ಕರೆತರಲಾಗುತ್ತಿತ್ತು. ಪಟಾಕಿ ಸಿಡಿಸುವುದಕ್ಕೆ ಅಧಿಕೃತ ಪರವಾನಗಿ ಹೊಂದಿರುವವರನ್ನು ಕರೆಸಬೇಕಿತ್ತು. ಪರವಾನಗಿ ಇಲ್ಲದ ವ್ಯಕ್ತಿಗಳನ್ನು ಕರೆಸಿ ಪಟಾಕಿ ಸಿಡಿಸಿರುವುದು ದುರಂತಕ್ಕೆ ಮುಖ್ಯ ಕಾರಣವಾಗಿದೆ. ಇಂತಹ ಪ್ರಕರಣಗಳು ಮರುಕಳಿಸಿದರೆ ಆಯೋಜಕರ ವಿರುದ್ಧ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.