ಬೆಲೆ ಏರಿಕೆ ನಡುವೆ ಸಂಭ್ರಮದ ನೋಮುಲ ಪಂಡಗ

| Published : Oct 21 2025, 01:00 AM IST

ಸಾರಾಂಶ

ದೀಪಾವಳಿ ಹಬ್ಬವನ್ನು ಹಣತೆಗಳನ್ನು ಆಚರಿಸುವ ಹಲವಾರು ಮಂದಿ ವಿವಿಧ ಮಾದರಿಗಳ ಹಣತೆ ಖರೀದಿಯಲ್ಲಿ ತೊಡಗಿದ್ದುದು ಕಂಡು ಬಂತು. ಆಧುನಿಕತೆ ಭರಾಟೆಯಲ್ಲಿ ಮಣ್ಣಿನ ಹಣತೆಗಳು ಮಾಯವಾಗಿದ್ದು, ಪಿಂಗಾಣಿಯ ಹಣತೆಗಳ ಕಾರುಬಾರು ಮಾರುಕಟ್ಟೆಯಲ್ಲಿ ಕಂಡು ಬರುತ್ತಿದೆ. ಮಣ್ಣಿನ ಹಣತೆಗಳು ಗಾತ್ರವಾರು ಡಜನ್‌ಗೆ ೬೦ ರಿಂದ ೧೫೦ ರವರೆಗೂ ಮಾರಾಟವಾಗುತ್ತಿದೆ

ಕನ್ನಡಪ್ರಭ ವಾರ್ತೆ ಕೋಲಾರಬೆಲೆ ಏರಿಕೆಯ ತಾಪಕ್ಕೆ ಜಗ್ಗದೇ ಹಬ್ಬದ ಸಂಭ್ರಮಕ್ಕೆ ಜನತೆ ಸಿದ್ಧತೆ ನಡೆಸಿದ್ದಾರೆ. ಜಿಲ್ಲಾಡಳಿತ ಹಸಿರು ಪಟಾಕಿ ಮಾರಾಟಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ನಗರದ ಜೂನಿಯರ್ ಕಾಲೇಜು ಮೈದಾಣದಲ್ಲಿ ಪಟಾಕಿ ಅಂಗಡಿಗಳಿಗೆ ಅನುಮತಿ ನೀಡಿದೆ. ದೊಡ್ಡಪೇಟೆ ಮತ್ತಿತರ ಕಡೆಗಳಲ್ಲಿ ನೋಮುದಾರ, ಹಣತೆ, ದಿನಸಿ ಖರೀದಿ ಜೋರಾಗಿಯೇ ನಡೆದಿದೆ. ಈ ಬಾರಿ ದೀಪಾವಳಿ ಅಮಾವಾಸ್ಯೆ ಅ.೨೧ರ ಮಂಗಳವಾರ ಬಂದಿದೆ, ಇದೇ ದಿನ ಕೇದಾರೇಶ್ವರ ವ್ರತ ಮಾಡಲು ಆಗಮಿಕರು ಸೂಚಿಸಿರುವ ಹಿನ್ನೆಲೆಯಲ್ಲಿ ಹಬ್ಬದ ಸಿದ್ಧತೆಗಳು ಜೋರಾಗಿಯೇ ನಡೆದಿವೆ. ಅ೨೨ ರಂದು ಬಲಿಪಾಢ್ಯಮಿ ಇದೆ. ವ್ಯಾಪಾರ ವಹಿವಾಟು ಚುರುಕು

ನಗರದಲ್ಲಿ ಪ್ರಮುಖ ವ್ಯಾಪಾರ, ವಹಿವಾಟು ನಡೆಯುವ ಎಂ.ಜಿ.ರಸ್ತೆ, ದೊಡ್ಡಪೇಟೆ, ಕಾಳಮ್ಮ ಗುಡಿ ಬೀದಿಗಳ ಎಲ್ಲಾ ಅಂಗಡಿಗಳಲ್ಲಿ ಜನವೋ ಜನ, ಬಟ್ಟೆ ಅಂಗಡಿಗಳಂತೂ ತುಂಬಿ ತುಳುಕುತ್ತಿವೆ, ದಿನಸಿ ಅಂಗಡಿಗಳಲ್ಲಿ ಹಬ್ಬದ ಸರಕು ಖರೀದಿಯಲ್ಲಿ ಜನತೆ ಬ್ಯುಸಿಯಾಗಿದ್ದಾರೆ. ದೀಪಾವಳಿ ಹಬ್ಬದಲ್ಲಿ ಪೂಜೆಗೆ ಅತಿ ಮುಖ್ಯವಾಗಿರುವ ಗೋಟು ಅಡಿಕೆ, ಅರಿಶಿನ ಕೊಂಬು, ನೋವುದಾರಗಳ ವ್ಯಾಪಾರ ಜೋರಾಗಿಯೇ ನಡೆದಿದ್ದು, ನಗರದ ದೊಡ್ಡಪೇಟೆಯಲ್ಲಿ ನೋಮುದಾರಗಳ ಮಾರಾಟಕ್ಕಾಗಿಯೇ ಪ್ರತ್ಯೇಕ ಅಂಗಡಿಗಳು ತಲೆಯೆತ್ತಿದ್ದಿದ್ದು, ಬಣ್ಣಬಣ್ಣದ ನೋಮುದಾರಗಳು ಕೈಬೀಸಿ ಕರೆಯುತ್ತಿವೆ.

ದೀಪಾವಳಿ ಹಬ್ಬವನ್ನು ಹಣತೆಗಳನ್ನು ಆಚರಿಸುವ ಹಲವಾರು ಮಂದಿ ವಿವಿಧ ಮಾದರಿಗಳ ಹಣತೆ ಖರೀದಿಯಲ್ಲಿ ತೊಡಗಿದ್ದುದು ಕಂಡು ಬಂತು. ಆಧುನಿಕತೆ ಭರಾಟೆಯಲ್ಲಿ ಮಣ್ಣಿನ ಹಣತೆಗಳು ಮಾಯವಾಗಿದ್ದು, ಪಿಂಗಾಣಿಯ ಹಣತೆಗಳ ಕಾರುಬಾರು ಮಾರುಕಟ್ಟೆಯಲ್ಲಿ ಕಂಡು ಬರುತ್ತಿದೆ. ಮಣ್ಣಿನ ಹಣತೆಗಳು ಗಾತ್ರವಾರು ಡಜನ್‌ಗೆ ೬೦ ರಿಂದ ೧೫೦ ರವರೆಗೂ ಮಾರಾಟವಾಗುತ್ತಿದೆ, ನೋಮುದಾರಗಳು ಡಜನ್‌ಗೆ ೮೦ ರಿಂದ ೧೦೦ ರೂ ವರೆಗೂ ತನ್ನ ಬೆಲೆ ಹೆಚ್ಚಿಸಿಕೊಂಡಿವೆ.

ಹೂವಿನ ಬೆಲೆ ಗಗನಕ್ಕೆ

ದೀಪಾವಳಿ ಹಬ್ಬದಂದು ಕೆಲವರು ಆಯುಧಪೂಜೆ, ಅಂಗಡಿ ಪೂಜೆ, ಲಕ್ಷ್ಮೀ ಪೂಜೆ ಮಾಡುವ ಪದ್ದತಿಯೂ ಇದೆ, ಅದ್ದರಿಂದಾಗಿ ಹೂವಿನ ಬೆಲೆ ಗಗನಕ್ಕೇರಿದ್ದು, ಕನಕಾಂಬರ ಕನಕದಷ್ಟೇ ಬೆಲೆ ಏರಿಸಿಕೊಂಡು ಕೆಜಿಗೆ ೧೦೦೦ರೂ ಆಗಿದೆ. ಇನ್ನು ಮಲ್ಲಿಗೆ ೮೦೦ ರೂ, ಕಾಕಡಾ ೧೨೦೦ ರೂಗಳಿಗೆ ಮಾರಾಟವಾಗುತ್ತಿದೆ. ಸಣ್ಣ ರೋಸ್ ಕೆಜಿಗೆ ೨೦೦ ರಿಂದ ೨೫೦ರೂಗೆ ಮಾರಾಟವಾಗುತ್ತಿದ್ದು,ಸೇವಂತಿಕೆ ೧೫೦ ರೂ, ಚೆಂಡು ಹೂ ೮೦ ರಿಂದ ೧೦೦ಗೆ ಬೆಲೆ ಹೆಚ್ಚಿಸಿಕೊಂಡಿದ್ದು, ಹಳೆ ಬಸ್ ನಿಲ್ದಾಣದ ಹೂ ಮಾರುಕಟ್ಟೆಯಲ್ಲಿ ಜನ ಖರೀದಿಗೆ ಜಮಾಯಿಸಿದ್ದಾರೆ.

ಜಿಲ್ಲೆಯಲ್ಲಿ ದೀಪಾವಳಿ ಹಬ್ಬಕ್ಕೆ ತನ್ನದೇ ಆದ ವಿಶೇಷವಿದ್ದು, ಆಂಧ್ರಪ್ರದೇಶ ಮತು ತಮಿಳುನಾಡಿನ ಗಡಿಗೆ ಹೊಂದಿಕೊಂಡಿರುವ ಕಾರಣ ಜಿಲ್ಲೆಯಲ್ಲಿ ಎಲ್ಲಾ ಹಬ್ಬಗಳಲ್ಲಿಯೂ ಈ ರಾಜ್ಯಗಳ ಆಚಾರ ವಿಚಾರ ಸಂಪ್ರದಾಯಗಳ ಪ್ರಭಾವ ಕಂಡು ಬರುತ್ತದೆ. ದೀಪಾವಳಿ ಹಬ್ಬವನ್ನು ಕೋಲಾರ ಜಿಲ್ಲೆಯಲ್ಲಿ ನೋಮುಲ ಪಂಡುಗ (ಹಬ್ಬ) ಎಂದೇ ಕರೆಯುತ್ತಾರೆ. ಉತ್ತರ ಭಾಗದ ರಾಖೀ ಹಬ್ಬದ ಮಾದರಿಯಲ್ಲಿ ದೀಪಾವಳಿ ಸಂದರ್ಭದಲ್ಲಿ ಬಣ್ಣ ಬಣ್ಣದ ನೋಮು ದಾರವನ್ನು ಕೈಗೆ ಕಟ್ಟಿಕೊಳ್ಳುವ ಸಂಪ್ರದಾಯ ಇರುವುದರಿಂದ ದೀಪಾವಳಿ ಹಬ್ಬಕ್ಕೆ ಈ ಹೆಸರು ಬಂದಿದೆ.

ಕೇದಾರೇಶ್ವರ ವ್ರತಾಚರಣೆ

ದೀಪಾವಳಿಯ ದಿನ ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಗೌರಿಯ ಕಳಸವನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿ ಕೇದಾರೇಶ್ವರ ವ್ರತವನ್ನು ಆಚರಿಸಲಾಗುತ್ತದೆ. ದೇವಾಲಯದಲ್ಲಿ ಅರ್ಚಕರು ಪೂಜೆ ಸಲ್ಲಿಸಿ ಕೇದಾರೇಶ್ವರ ವ್ರತದ ಮಹತ್ವವನ್ನು ಓದಿ ಹೇಳುತ್ತಾರೆ. ನಂತರ ಹಳೆ ನೋಮು ದಾರಗಳನ್ನು ಪಡೆದುಕೊಂಡು ಹೊಸ ದಾರಗಳನ್ನು ಪೂಜೆ ಸಲ್ಲಿಸಿ ನೀಡುತ್ತಾರೆ. ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನೋಮು ದಾರಗಳಿಗೆ ಮನೆಯಲ್ಲಿ ಪುನಃ ಪೂಜೆ ಸಲ್ಲಿಸಿ ಕುಟುಂಬದ ಹಿರಿಯ ಸದಸ್ಯರಿಂದ ಆರಂಭಿಸಿ ಎಲೆ ಅಡಿಕೆ ಬಾಳೇಹಣ್ಣು ನೋಮುದಾರವನ್ನು ಕಜ್ಜಾಯ ಸಮೇತ ನೀಡಲಾಗುತ್ತದೆ. ನೋಮುದಾರ ಸ್ಪೀಕರಿಸಿದವರು ದಾರವನ್ನು ಕೈಗೆ ಕಟ್ಟಿಕೊಂಡು ಸಿಹಿ ತಿಂದು ಕಿರಿಯರನ್ನು ಆಶೀರ್ವದಿಸುತ್ತಾರೆ.