ಸಾರಾಂಶ
ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ತುಳುನಾಡಿನ ಸಂಸ್ಕೃತಿ ಭಿನ್ನವಾದುದು. ರಾತ್ರಿ ಹಗಲೆನ್ನದೆ ಇಲ್ಲಿ ವಿವಿಧ ಚಟುವಟಿಕೆಗಳು ನಡೆಯುವ ಮೂಲಕ ತುಳುನಾಡು ಹಬ್ಬದ ನಾಡಾಗಿದೆ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ಪಕ್ಷ, ಜಾತಿ, ಧರ್ಮ ಮರೆತು ಸಂಘಟಿತ ಪ್ರಯತ್ನ ನಡೆಸಬೇಕಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.ಅಖಿಲ ಭಾರತ ತುಳು ಒಕ್ಕೂಟ ವತಿಯಿಂದ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಶನಿವಾರ ತುಳುನಾಡ ಜಾನಪದ ಉಚ್ಚಯ’ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತುಳು ಭಾಷೆಗೆ ಮಾನ್ಯತೆ ಸಿಗಬೇಕೆಂದು ಅನೇಕ ವರ್ಷಗಳಿಂದ ಹೋರಾಟ ನಡೆಯುತ್ತಿದೆ. ನಮ್ಮದೇ ಊರಿನ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಈ ಬಗ್ಗೆ ಮುತುವರ್ಜಿ ವಹಿಸಬೇಕಾಗಿದ್ದು, ಕರಾವಳಿಯ ಶಾಸಕರೆಲ್ಲರೂ ಅವರೊಂದಿಗೆ ಇದ್ದೇವೆ ಎಂದರು.ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್. ಧರ್ಮ ಮಾತನಾಡಿ, ದೇಶದ ಯಾವುದೇ ಭಾಷೆಗೂ ಹೋರಾಟದಿಂದ ಮಾನ್ಯತೆ ಸಿಕ್ಕಿಲ್ಲ. ರಾಜಕೀಯ ಹಿತಾಸಕ್ತಿ ಹಾಗೂ ರಾಜ್ಯ, ಕೇಂದ್ರ ಸರ್ಕಾರ ಪ್ರೋತ್ಸಾಹ ನೀಡದಿದ್ದರೆ ಮಾನ್ಯತೆ ಸಿಗುವುದು ಕಷ್ಟ. ಒರಿಸ್ಸಾದಲ್ಲಿ ಎಲ್ಲ ರಾಜಕೀಯ ನಾಯಕರು ಜತೆಯಾಗಿ ಹೋರಾಟ ನಡೆಸಿದ ಪರಿಣಾಮ ಅವರ ಪ್ರಾದೇಶಿಕ ಭಾಷೆಗೆ ಮಾನ್ಯತೆ ಸಿಕ್ಕಿದೆ ಎಂದು ಹೇಳಿದರು.
ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ತುಳುನಾಡಿನ ಸಂಸ್ಕೃತಿ ಭಿನ್ನವಾದುದು. ರಾತ್ರಿ ಹಗಲೆನ್ನದೆ ಇಲ್ಲಿ ವಿವಿಧ ಚಟುವಟಿಕೆಗಳು ನಡೆಯುವ ಮೂಲಕ ತುಳುನಾಡು ಹಬ್ಬದ ನಾಡಾಗಿದೆ ಎಂದು ಹೇಳಿದರು.ಸ್ಥಾಪಕ ಅಧ್ಯಕ್ಷ ಡಾ.ಎ. ಸದಾನಂದ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮೂಲ್ಕಿ ಕರುಣಾಕರ ಶೆಟ್ಟಿ ಮಾತನಾಡಿದರು. ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ ಸ್ವಾಗತಿಸಿದರು. ಪ್ರಧಾನ ಸಂಚಾಲಕ ಕದ್ರಿ ನವನೀತ್ ಶೆಟ್ಟಿ ನಿರೂಪಿಸಿದರು.
ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಪುಣೆ ತುಳುಕೂಟದ ನಗ್ರಿಗುತ್ತು ರೋಹಿತ್ ಶೆಟ್ಟಿ, ಕನ್ನಡ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷೆ ಜಾನಕಿ ಬ್ರಹ್ಮಾವರ, ಪ್ರಮುಖರಾದ ಅಶೋಕ್ ಪಕ್ಕಳ, ಧರ್ಮಪಾಲ ದೇವಾಡಿಗ, ಸಾಂಗ್ಲಿ ದಿವಾಕರ್ ಶೆಟ್ಟಿ, ವಿವಿಧ ಅಕಾಡೆಮಿಯ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಆಳ್ವಾರಿಸ್, ತಾರಾನಾಥ ಗಟ್ಟಿ ಕಾಪಿಕಾಡ್, ತಲ್ಲೂರು ಶಿವರಾಮ ಶೆಟ್ಟಿ ಮತ್ತಿತರರು ಇದ್ದರು.