ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಸಂವಿಧಾನ ಸಮಸ್ಯೆಗೆ ಮೂಲವಲ್ಲ, ತಪ್ಪು ದೋಷವಿರುವುದು ನಮ್ಮಲ್ಲಿ ಮಾತ್ರ. ಏಕೆಂದರೆ ಸಂವಿಧಾನವನ್ನೇ ನಾವು ಪರಿಪೂರ್ಣವಾಗಿ ಅರ್ಥ ಮಾಡಿಕೊಂಡಿಲ್ಲ ಜೊತೆಗೆ ಜಾರಿಯೂ ಆಗಿಲ್ಲ ಹಾಗಾಗಿ ನಾವು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ವಿಷಾದಿಸಿದರು.ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ಸಂವಿಧಾನ ಓದು ಅಭಿಯಾನ- ಕರ್ನಾಟಕದ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಶನಿವಾರ ಆರಂಭವಾದ ಜಿಲ್ಲಾ ಮಟ್ಟದ ಸಂವಿಧಾನ ಓದು ಅಧ್ಯಯನ ಶಿಬಿರ ಉದ್ಘಾಟಿಸಿ, ಸಂವಿಧಾನ ರಚನೆ ಮತ್ತು ಮೂಲತತ್ವಗಳು ಎಂಬ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸಾಂಸ್ಕೃತಿಕ ದಿವಾಳಿತನ, ಭಯೋತ್ಪಾದನೆ, ದೌರ್ಜನ್ಯವೆಲ್ಲವನ್ನು ಮೆಟ್ಟಿ ನಿಲ್ಲುವ ಮೂಲಕ ದಬ್ಬಾಳಿಕೆಯನ್ನು ಬುಡ ಸಮೇತ ಕಿತ್ತುಹಾಕುವ ಆತ್ಮಸ್ಥೈರ್ಯವನ್ನು ಕೊಡುವುದೇ ನಮ್ಮ ಸಂವಿಧಾನ ಎನ್ನುವುದನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದರು.ಸಂವಿಧಾನದ ಮೂಲ ತತ್ವಗಳನ್ನೇ ಬಹುತೇಕ ಜನರು ಇನ್ನೂ ಓದಿಕೊಳ್ಳದಿರುವುದು ಬೇಸರ ತರಿಸಿದೆ. ದೇಶದಲ್ಲಿ ೬.೫೦ ಲಕ್ಷ ಹಳ್ಳಿಗಳಿವೆ. ಪ್ರತಿ ಹಳ್ಳಿಯಲ್ಲಿಯೂ ಚಮ್ಮಾರನಿಂದ ಹಿಡಿದು ಶ್ಯಾನುಭೋಗ ತನಕವೂ ನೋಡಿದ್ದೇವೆ. ಜೊತೆಗೆ ಕೃಷಿಕರೇ ಇಲ್ಲಿ ಪ್ರಧಾನ ಎಂಬುದನ್ನು ಅರಿತುಕೊಳ್ಳಬೇಕು. ಏಕೆಂದರೆ ಜನರ ಜೀವನ ನಿಂತಿರುವುದು ರೈತನ ಮೇಲೆ ಎನ್ನುವುದನ್ನು ಮರೆಯಬಾರದು, ಬೇರೆ ಬೇರೆ ಕಾರಣಕ್ಕೆ ನಾವು ಬಂದಿದ್ದೇವೆ, ನಾವೆಲ್ಲರೂ ಒಟ್ಟಿಗೆ ದೇಶದಲ್ಲಿ ಬಾಳಿದ್ದೇವೆ, ಬ್ರಿಟಿಷರ ವಿರುದ್ಧವೂ ಹೋರಾಡಿದ್ದೇವೆ, ಸ್ವಾತಂತ್ರ್ಯಹೋರಾಟದಲ್ಲಿ ಕೇವಲ ಹಿಂದೂಗಳ ರಕ್ತ ಮಾತ್ರವಲ್ಲ, ಕ್ರೈಸ್ತರ, ಮುಸಲ್ಮಾನರು, ಪಾರ್ಸಿಯಾ, ಸಿಕ್ಕರ ರಕ್ಷವೂ ಹರಿದಿದೆ. ಯಾವ ಧರ್ಮದ ರಾಷ್ಟ್ರ ಬೇಡ, ಬೇಕಿರುವುದೊಂದೇ ಜಾತ್ಯತೀತ ರಾಷ್ಟ್ರವೆಂದು ಜನರೇ ಒಪ್ಪಿದ್ದಾರೆ ಎಂದು ಪ್ರತಿಪಾದಿಸಿದರು.
ಸಂವಿಧಾನದಡಿಯಲ್ಲಿ ಯಾವುದೇ ಜಾತಿಯವರು ಅಧಿಕಾರ ಹಿಡಿಯಬಹುದು ಎನ್ನುವುದನ್ನು ನಾವು ನೋಡುತ್ತಿದ್ದೇವೆ. ಇದಕ್ಕೆ ಕಾರಣವಾಗಿರುವುದು ಸಂವಿಧಾನ. ಇಂತಹ ಸಂವಿಧಾನವನ್ನು ನಾವು ಓದಲೇ ಇಲ್ಲ, ಈಗಿನಿಂದಲೇ ಎಲ್ಲರೂ ಸಂವಿಧಾನ ಓದುವಂತಾಗಬೇಕು. ಇಷ್ಟೆಲ್ಲಾ ಸಾಧನೆಗಳು ನಮ್ಮ ದೇಶದಲ್ಲಿ ಆಗಿದ್ದರೂ ಕೂಡ ದೇಶದಲ್ಲಿ ಅಕ್ಷರ ಜ್ಞಾನವಿಲ್ಲ, ಬಡತನ ರೇಖೆಗಿಂತ ಕೆಳಗಿರುವವರು ಹೆಚ್ಚಿನ ಸಂಖ್ಯೆಯಯಲ್ಲಿದ್ದಾರೆ. ನಿರೋದ್ಯೋಗಿಗಳಿದ್ದಾರೆ, ವಸತಿ ಹೀನರಿದ್ದಾರೆ, ಕೃಷಿ ಮತ್ತು ಕೈಗಾರಿಕೆ ಬಿಕ್ಕಟ್ಟಿದೆ ಎಂದು ವಿಷಾದಿಸಿದರು.ಸಂವಿಧಾನ: ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆ ಕುರಿತು ನಿವೃತ್ತ ಉಪನ್ಯಾಸಕ ಕಿಗ್ಗ ರಾಜಶೇಖರ ಮಾತನಾಡಿ, ಜಿಲ್ಲೆಯಲ್ಲಿ ಹೋರಾಟದ ನಾಯಕರ ಕೊರತೆ ಕಾಣುತ್ತಿದೆ. ಮಂಡ್ಯದಂತಹ ಹೋರಾಟ ಜಿಲ್ಲೆಯಲ್ಲಿಯೂ ಕೂಡ ಹಣ ಕೊಟ್ಟರೆ ಚುನಾವಣೆ ಗೆಲ್ಲಬಹುದೆಂಬ ಸನ್ನಿವೇಶ ಇರುವುದು ದುರಂತ. ಜನ ಚುನಾವಣೆಯಲ್ಲಿ ಹಣ ತೆಗೆದುಕೊಳ್ಳುವುದಿಲ್ಲ ಎಂಬ ತೀರ್ಮಾನಕ್ಕೆ ಬರಬೇಕು. ಹೀಗಿದ್ದಾಗ ಉತ್ತಮ ಜನಪ್ರತಿನಿಧಿ ಆಯ್ಕೆಯಾಗಿ ಜನಪರ ಕೆಲಸಗಳು ಆಗುತ್ತವೆ ಎಂದು ಅಭಿಪ್ರಾಯಪಟ್ಟರು.
ರಾಜ್ಯ ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ನಂದಿನಿ ಜಯರಾಂ ಅವರು ನಿರ್ವಹಣೆಯಲ್ಲಿ ಸಂವಿಧಾನ ಮತ್ತು ಮಹಿಳೆ’ ಎಂಬ ವಿಷಯ ಕುರಿತು ಬೆಂಗಳೂರಿನ ಕಾನೂನು ವಿದ್ಯಾರ್ಥಿನಿ ಬಳ್ಳಾರಿ ಶಾಂತಿ ನಾಗಲಾಪುರ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನವೀರ್ ಆಸೀಫ್, ಎಸ್.ಬಿ. ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಿ.ಶಿವಲಿಂಗಯ್ಯ, ರೈತ ಮುಖಂಡರಾದ ಸುನಂದಾ ಜಯರಾಂ, ಮುಖಂಡರಾದ ಸಿ.ಕುಮಾರಿ, ಟಿ.ಎಲ್.ಕೃಷ್ಣೇಗೌಡ, ಎಂ.ಪುಟ್ಟಮಾದು, ಲಕ್ಷ್ಮಣ್ ಚೀರನಹಳ್ಳಿ ಭಾಗವಹಿಸಿದ್ದರು.