ಸಾರಾಂಶ
ಧಾರವಾಡ:
ಅನಿವಾಸಿ ಭಾರತೀಯರಾಗಿದ್ದ, ಆಸ್ಟ್ರೇಲಿಯಾ ಸರ್ಕಾರದ ವಶದಲ್ಲಿದ್ದ ಧಾರವಾಡ ಮೂಲದ ಪ್ರಿಯದರ್ಶಿನಿ ಪಾಟೀಲ ಅವರ ಇಬ್ಬರು ಮಕ್ಕಳನ್ನು ಮರಳಿ ಭಾರತಕ್ಕೆ ತರುವಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಯಶಸ್ವಿಯಾಗಿದ್ದಾರೆ.ಆಸ್ಟ್ರೇಲಿಯಾ ಸರ್ಕಾರದ ವಶದಲ್ಲಿರುವ ಮಕ್ಕಳನ್ನು ಬಿಡಿಸಿಕೊಳ್ಳಲು ಆಗದೆ ನೊಂದು ಅಲ್ಲಿಂದ ಮರಳಿ ಭಾರತಕ್ಕೆ ಬಂದು ಮಾನಸಿಕವಾಗಿ ನೊಂದಿದ್ದ ಅನಿವಾಸಿ ಭಾರತೀಯರಾದ ಪ್ರಿಯದರ್ಶಿನಿ ಪಾಟೀಲ 2023ರ ಆ. 20ರಂದು ಸವದತ್ತಿಯ ನವಿಲುತೀರ್ಥ ಅಣೆಕಟ್ಟಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದರು. ಇದಾದ ಬಳಿಕ ಈ ಸುದ್ದಿಯು ಸಾಕಷ್ಟು ವೈರಲ್ ಆಗಿತ್ತು.
ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಎಂಜಿನಿಯರ್ ಆಗಿ ಪ್ರಿಯದರ್ಶಿನಿ ಪಾಟೀಲ ಪತಿ ಲಿಂಗರಾಜ ಪಾಟೀಲ ಅವರೊಂದಿಗೆ ವಾಸವಾಗಿದ್ದರು. ಪ್ರಿಯದರ್ಶಿನಿ ಅವರಿಗೆ ಅಮೃತ್ಯ ಹಾಗೂ ಅಪರಾಜಿತಾ ಎಂಬ ಇಬ್ಬರು ಮಕ್ಕಳಿದ್ದು, ಪುತ್ರ ಅಮೃತ್ಯನಿಗೆ ಕರುಳಿಗೆ ಸಂಬಂಧಿಸಿದ ರೋಗವಿತ್ತು. ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಲಾಗಿದ್ದು, ಅಲ್ಲಿನ ಆಸ್ಪತ್ರೆ ವೈದ್ಯರು ವೈದ್ಯಕೀಯ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಪ್ರಿಯದರ್ಶಿನಿ ಸರ್ಕಾರಕ್ಕೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಪ್ರಿಯದರ್ಶಿನಿಯ ಇಬ್ಬರೂ ಮಕ್ಕಳನ್ನು ವಶಕ್ಕೆ ಪಡೆದಿತ್ತು. ಈ ಹಿನ್ನೆಲೆಯಲ್ಲಿ ಸಾಕಷ್ಟು ಹೋರಾಟ ಮಾಡಿದರೂ ತನ್ನ ಮಕ್ಕಳನ್ನು ಪ್ರಿಯದರ್ಶಿನಿಗೆ ಮರಳಿ ಪಡೆಯಲಾಗಿರಲಿಲ್ಲ. ಮಾನಸಿಕವಾಗಿ ಬೇಸತ್ತು ಭಾರತಕ್ಕೆ ಬಂದ ಪ್ರಿಯದರ್ಶಿನಿ ಕೋರಿಯರ್ ಮೂಲಕ ತನ್ನ ವಸ್ತುಗಳನ್ನು ಧಾರವಾಡದಲ್ಲಿದ್ದ ತಂದೆ ಸುಬ್ಬರಾಯ ದೇಸಾಯಿ ಅವರಿಗೆ ಕಳುಹಿಸಿ ನವಿಲು ತೀರ್ಥದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಜೊತೆಗೆ ಆಸ್ಟ್ರೇಲಿಯಾ ಸರ್ಕಾರದ ವಿರುದ್ಧ ಪತ್ರ ಸಹ ಬರೆದಿದ್ದರು.ಸುಬ್ಬರಾಯ ದೇಸಾಯಿ ಪುತ್ರಿಯನ್ನು ಕಳೆದುಕೊಂಡು ಕೊನೆಪಕ್ಷ ಮೊಮ್ಮಕ್ಕಳನ್ನಾದರೂ ಭಾರತಕ್ಕೆ ಕರೆ ತರಬೇಕೆಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಮೊರೆ ಹೋಗಿದ್ದರು. ಸತತ ಪ್ರಯತ್ನದ ನಂತರ ಇದೀಗ ಸುಬ್ಬರಾಯ ದೇಸಾಯಿ ಅವರಿಗೆ ಮೊಮ್ಮಕ್ಕಳು ದೊರಕಿದ್ದಾರೆ.
ಜೋಶಿಗೆ ಧನ್ಯವಾದ:ದೇಸಾಯಿ ಕುಟುಂಬ ಹಾಗೂ ಅವರ ಮೊಮ್ಮಕ್ಕಳು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಶನಿವಾರ ಭೇಟಿ ಮಾಡಿ ಅವರ ಸಹಾಯಕ್ಕೆ ಧನ್ಯವಾದ ಅರ್ಪಿಸಿದರು. ಈ ವೇಳೆ ಮಾತನಾಡಿದ ಪ್ರೊ. ಸುಬ್ಬರಾಯ ದೇಸಾಯಿ, ಜೋಶಿಯವರು ಇರದೇ ಹೋದಲ್ಲಿ ನಮ್ಮ ಮೊಮ್ಮಕ್ಕಳು ನಮ್ಮ ಮಡಿಲು ಸೇರುತ್ತಿರಲಿಲ್ಲ. ಮಗಳು ದೈವಾಧೀನರಾದ ಸಂದರ್ಭದಲ್ಲಿ ಸಾಂತ್ವನ ನೀಡಲು ಮನೆಗೆ ಆಗಮಿಸಿದ ಸಂದರ್ಭದಲ್ಲಿ ನೀಡಿದ ಮಾತಿನಂತೆ ಹಿರಿಯರ ಸಮ್ಮುಖದಲ್ಲಿ ಮೊಮ್ಮಕ್ಕಳು ನಮ್ಮ ಮಡಿಲು ಸೇರಿದ್ದಾರೆ ಎಂದರು.
ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಪ್ರಿಯದರ್ಶಿನಿ ಅವರ ಸಾವು ಆದಾಗ ಅವರ ಮಕ್ಕಳು ಆಸ್ಟ್ರೇಲಿಯಾದಲ್ಲಿ ಇದ್ದರು. ಅವರನ್ನು ಭಾರತಕ್ಕೆ ಕರೆ ತರಲು ಕೆಲವು ಕಾನೂನು ತೊಡಕುಗಳು ಇದ್ದವು. ಹೀಗಾಗಿ ವಿದೇಶಾಂಗ ಸಚಿವ ಜೈಶಂಕರ ಜತೆಗೆ ಸುದೀರ್ಘವಾಗಿ ಮಾತುಕತೆ ನಡೆಸಲಾಗಿತ್ತು. ಭಾರತದ ಹೈಕಮೀಶನ್ ಹಾಗೂ ಆಸ್ಟ್ರೇಲಿಯಾದ ಹೈಕಮೀಶನ ಮಾತುಕತೆ ಮೂಲಕ ಇದೀಗ ದೇಸಾಯಿ ಕುಟುಂಬದಲ್ಲಿ ಸಂತೋಷ ಕಂಡು ಬಂದಿದೆ ಎಂದರು.ಪ್ರೊ. ಮಲ್ಲಿಕಾರ್ಜುನ ಪಾಟೀಲ, ಡಾ. ಎಸ್.ಆರ್. ರಾಮನಗೌಡರ, ಸಿ.ಎಸ್. ಪಾಟೀಲ, ಮಾಜಿ ಮೇಯರ್ ಈರೇಶ ಅಂಚಟಗೇರಿ ಇದ್ದರು.