ಕಾಂಗ್ರೆಸ್ ಒಬ್ಬ ಶಾಸಕನೂ ಬಿಜೆಪಿ ಆಮಿಷಕ್ಕೊಳಗಾಗುವುದಿಲ್ಲ: ಸಿಎಂ
KannadaprabhaNewsNetwork | Published : Oct 29 2023, 01:00 AM IST
ಕಾಂಗ್ರೆಸ್ ಒಬ್ಬ ಶಾಸಕನೂ ಬಿಜೆಪಿ ಆಮಿಷಕ್ಕೊಳಗಾಗುವುದಿಲ್ಲ: ಸಿಎಂ
ಸಾರಾಂಶ
ಒಮ್ಮೆ ಆಪರೇಷನ್ ಕಮಲ ಮಾಡಿ ಯಶಸ್ವಿ ಆಗಿರಬಹುದು, ಆದರೆ ಈ ಬಾರಿ ಆಗುವುದಿಲ್ಲ. ನಮ್ಮ ಪಕ್ಷದ ಒಬ್ಬ ಶಾಸಕನೂ ಅವರ ಆಮಿಷಕ್ಕೆ ಒಳಗಾಗುವುದಿಲ್ಲ
ಕನ್ನಡಪ್ರಭ ವಾರ್ತೆ ಉಡುಪಿ ಬಿಜೆಪಿ ಮತ್ತೆ ಆಪರೇಶನ್ ಕಮಲ ಮಾಡಲು ಹೊರಟಿರುವುದು ನಿಜ. ಆದರೆ ಈ ಬಾರಿ ಬಿಜೆಪಿಯವರು ಸಫಲ ಆಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಶನಿವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರು.ಗಳ ಆಫರ್ ಬಂದಿದೆ ಎಂಬ ಕಾಂಗ್ರೆಸ್ ಶಾಸಕ ರವಿ ಗಣಿಗ ಆರೋಪಕ್ಕೆ ಪ್ರತಿಕ್ರಿಯೆ ನೀಡಲಿಚ್ಛಿಸದೆ ಅದನ್ನು ರವಿ ಗಣಿಗ ಬಳಿಯೇ ಕೇಳಿ ಎಂದಷ್ಟೇ ಹೇಳಿದರು. ಅವರು ಒಮ್ಮೆ ಆಪರೇಷನ್ ಕಮಲ ಮಾಡಿ ಯಶಸ್ವಿ ಆಗಿರಬಹುದು, ಆದರೆ ಈ ಬಾರಿ ಆಗುವುದಿಲ್ಲ. ನಮ್ಮ ಪಕ್ಷದ ಒಬ್ಬ ಶಾಸಕನೂ ಅವರ ಆಮಿಷಕ್ಕೆ ಒಳಗಾಗುವುದಿಲ್ಲ ಎಂದು ಭರವಸೆ ವ್ಯಕ್ತಪಡಿಸಿದರು. ರಾಮನಗರ ವಿದಾನಸಭಾ ಕ್ಷೇತ್ರವನ್ನು ಬೆಂಗಳೂರು ಜಿಲ್ಲೆಗೆ ಸೇರ್ಪಡೆಗೊಳಿಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಈ ವಿಚಾರವಾಗಿ ನನ್ನ ಜೊತೆ, ಯಾರು ಚರ್ಚೆ ಮಾಡಿಲ್ಲ, ಸರ್ಕಾರದ ಮಟ್ಟದಲ್ಲಿಯೂ ಈ ಬಗ್ಗೆ ಚರ್ಚೆ ಆಗಿಲ್ಲ ಎಂದರು. ಕಾರ್ಕಳ- ಬ್ರಹ್ಮಾವರ ಹಗರಣ ತನಿಖೆ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ 14 ಕೋಟಿ ಹಗರಣ ಆಗಿರುವ ಬಗ್ಗೆ ಮಾಹಿತಿ ಬಂದಿದೆ. ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಅವ್ಯವಹಾರವೂ ಗೊತ್ತಿದೆ. ಎರಡೂ ಹಗರಣಗಳ ಬಗ್ಗೆ ನಾವು ತನಿಖೆ ಮಾಡಿಸುತ್ತೇವೆ, ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದರು.