ಕಲ್ಮಷ ಆಗುತ್ತಿರುವ ತುಂಗಾನದಿ ನೀರು: ಪ್ರೊ ಬಿ.ಎಂ.ಕುಮಾರಸ್ವಾಮಿ

| Published : Oct 29 2023, 01:00 AM IST

ಸಾರಾಂಶ

ತುಂಗಾ ಉಳಿಸಿ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಛಾಯಾಚಿತ್ರ ಪ್ರದರ್ಶನ ಮತ್ತು ನದಿ ಉಳಿಸೋಣ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಕುಡಿಯುವ ನೀರಿಗೆ ಹೆಸರಾಗಿರುವ ತುಂಗಾ ನದಿ ನೀರು ಇಂದು ಕುಡಿಯಲು ಯೋಗ್ಯವಾಗಿಲ್ಲ. ಶೃಂಗೇರಿಯಿಂದ ಹಿಡಿದು ಶಿವಮೊಗ್ಗದವರೆಗೂ ಕೊಳಚೆಯನ್ನು ತುಂಬಿಕೊಂಡೇ ಹರಿಯುತ್ತಿದ್ದಾಳೆ ಎಂದು ಪರಿಸರವಾದಿ ಪ್ರೊ.ಬಿ.ಎಂ.ಕುಮಾರಸ್ವಾಮಿ ಹೇಳಿದರು. ನಿರ್ಮಲ ತುಂಗಾ ಅಭಿಯಾನ, ಗೋಪಾಳದ ಚಂದನವನ ಪಾರ್ಕ್ ಬಳಗಗಳ ಸಹಯೋಗದಲ್ಲಿ ಆಯೋಜಿಸಿದ್ದ ತುಂಗಾ ಉಳಿಸಿ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಛಾಯಾಚಿತ್ರ ಪ್ರದರ್ಶನ ಮತ್ತು ನದಿ ಉಳಿಸೋಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಇಂದು ತುಂಗೆ ಸಾಕಷ್ಟು ಮಲಿನಗೊಂಡಿದ್ದಾಳೆ. ಗಂಗಾ ಸ್ನಾನ, ತುಂಗಾಪಾನ ಎಂಬ ಮಾತು ಈಗ ಸುಳ್ಳಾಗಿದೆ ಎಂದು ಬೇಸರ ವ್ಯಕ್ತಪಡಸಿದರು. ಶುದ್ಧೀಕರಣ ಘಟಕಗಳನ್ನು ಜಿಲ್ಲಾಡಳಿತವಾಗಲಿ, ಮಹಾನಗರ ಪಾಲಿಕೆಯಾಗಲಿ ಮಾಡಿಲ್ಲ. ನದಿಗೆ ಸಾರ್ವಜನಿಕರು ತಮ್ಮ ದಿಂಬು, ಹಾಸಿಗೆಯಿಂದ ಹಿಡಿದು ಹೋಟೆಲ್‌ಗಳವರು ಮಾಂಸ, ದನ-ಕರುಗಳ ಶವಗಳನ್ನು ಕೂಡ ಎಸೆಯುತ್ತಿದ್ದಾರೆ. ಜಲಚರ ಪ್ರಾಣಿಗಳೆಲ್ಲ ಸತ್ತು ಹೋಗಿವೆ. ಈ ಜಲಜಾಗೃತಿ ಜನಜಾಗೃತಿ ಆಗಬೇಕಾಗಿದೆ. ಈಹಿನ್ನೆಲೆಯಲ್ಲಿ ನಿರ್ಮಲ ತುಂಗಾ ಅಭಿಯಾನ ಕಳೆದ ಒಂದು ವರ್ಷದಿಂದ ತುಂಗಾ ನದಿ ಉಳಿವಿಗಾಗಿ ಹೋರಾಡುತ್ತಾ ಬಂದಿದೆ ಎಂದು ತಿಳಿಸಿದರು. ಡಾ. ಶ್ರೀಪತಿ ಮಾತನಾಡಿ, ಸಾರ್ವಜನಿಕರು ಎಲ್ಲೋ ಎಸೆದ ಒಂದು ಪ್ಲಾಸ್ಟಿಕ್ ವಸ್ತು ಸಹ ರಾಜಕಾಲುವೆಗಳ ಮೂಲಕ ತುಂಗಾ ನದಿ ಸೇರುತ್ತದೆ. ಜೊತೆಗೆ ನದಿಯ ಆಸುಪಾಸಿನ ಗದ್ದೆ-ತೋಟಗಳಲ್ಲಿ ಬಳಸುವ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳು ಕೂಡ ನದಿಗೆ ಸೇರುತ್ತಿವೆ. ಶುದ್ಧ ಕುಡಿಯುವ ನೀರಿನ ಸಮಸ್ಯೆ ಸಾಕಷ್ಟಿದೆ. ಜನರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ನಾವು ನಿರ್ಮಲ ತುಂಗಾ ಅಭಿಯಾನದ ಮೂಲಕ ಗಾಜನೂರಿನಿಂದ ಹೊನ್ನಾಳಿಯವರೆಗೆ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಜೊತೆಗೆ ನಗರದ ಸಾರ್ವಜನಿಕ ಸ್ಥಳಗಳಲ್ಲಿ ಈ ಜಾಗೃತಿ ಕ್ರಮ ನಿರಂತರವಾಗಿ ನಡೆಯುತ್ತಿದೆ ಎಂದರು. ನಿವೃತ್ತ ಎಂಜಿನಿಯರ್‌ ಎ.ಹಾಲೇಶಪ್ಪ ಮಾತನಾಡಿ, ನದಿಯ ನೀರು ಸ್ವಚ್ಛವಾಗಿಡಲು ಸಾರ್ವಜನಿಕರ ಪಾತ್ರವೂ ಇದೆ. ತಮ್ಮ ತಮ್ಮ ಮನೆಗಳಲ್ಲಿ ಕಸಗಳನ್ನು ಸರಿಯಾಗಿ ವಿಂಗಡಣೆ ಮಾಡಿದರೆ ಸಾಕು. ಜೊತೆಗೆ ನೀರನ್ನು ಮಿತವಾಗಿ ಬಳಸಬೇಕು. ಎಲ್ಲರೂ ಸ್ವಚ್ಛತೆಗೆ ಆದ್ಯತೆ ಕೊಟ್ಟರೆ ಜೊತೆಗೆ ಸಂಬಂಧಪಟ್ಟ ಇಲಾಖೆಗಳು ನಗರದ ಎಲ್ಲ ಕೊಳಚೆ ನೀರನ್ನು ಸರಿಯಾದ ರೀತಿಯಲ್ಲಿ ಶುದ್ಧೀಕರಣ ಮಾಡಿ ನದಿಗೆ ಬಿಟ್ಟರೆ ಸಮಸ್ಯೆ ಸ್ಪಲ್ಪಮಟ್ಟಿಗಾದರೂ ಬಗೆಹರಿಯುತ್ತದೆ ಎಂದರು. ಈ ಸಂದರ್ಭದಲ್ಲಿ ನಿರ್ಮಲ ತುಂಗಾ ಅಭಿಯಾನದ ಪ್ರಮುಖರಾದ ತ್ಯಾಗರಾಜ್ ಮಿತ್ಯಾಂತ, ಬಾಲಕೃಷ್ಣ ನಾಯ್ಡು, ಡಾ.ಶ್ರೀಧರ್, ಜಗನ್ನಾಥ್, ರಾಜೇಶ್ ಹಾಗೂ ಚಂದನವನ ಪಾರ್ಕಿನ ಪ್ರಮುಖರಾದ ಜಯಣ್ಣ, ಜಿ.ನಾಗಪ್ಪ, ದೇವರಾಜ್, ನಾಗರಾಜ್ ಸೇರಿದಂತೆ ಹಲವರಿದ್ದರು. - - - -26ಎಸ್‌ಎಂಜಿಕೆಪಿ03: