ಮುಂದಿಲ್ಲ ಮೋದಿ- 2024 ಅಭಿಯಾನಕ್ಕೆ ಎಂ.ಕೆ.ಸೋಮಶೇಖರ್ ಚಾಲನೆ

| Published : Feb 10 2024, 01:46 AM IST

ಸಾರಾಂಶ

ಪ್ರಧಾನಿಯಾದವರನ್ನು ಗೋಡೆಯಲ್ಲಿ ಬರೆದು ಜನರಿಗೆ ತೋರಿಸುವ ಕೆಲಸ ಬಿಜೆಪಿಯವರು ಮಾಡುತ್ತಿದ್ದು, ಇದು ಬಿಜೆಪಿಗೆ ಬಂದಿರುವ ದುಸ್ಥಿತಿಯನ್ನು ಸೂಚಿಸುತ್ತದೆ. ಮೋದಿ ಮತ್ತೊಮ್ಮೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ ಹೊರತು ಈ ದೇಶದ ಜನರು ಹೇಳುತ್ತಿಲ್ಲ. ಹೀಗಾಗಿ, ನಾವು ಜನರ ಭಾವನೆಯಾದ ಮುಂದಿಲ್ಲ ಮೋದಿ 2024 ಅಭಿಯಾನವನ್ನು ಮೈಸೂರಿನಿಂದಲೇ ಪ್ರಾರಂಭಿಸಿದ್ದೇವೆ.

ಕನ್ನಡಪ್ರಭ ವಾರ್ತೆ ಮೈಸೂರು

ಬಿಜೆಪಿಯ ಮತ್ತೊಮ್ಮೆ ಮೋದಿ-2024 ಎಂಬ ಗೋಡೆ ಬರಹ ಅಭಿಯಾನಕ್ಕೆ ವಿರುದ್ಧವಾಗಿ ಮುಂದಿಲ್ಲ ಮೋದಿ- 2024 ಅಭಿಯಾನಕ್ಕೆ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಅವರು ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಶುಕ್ರವಾರ ಚಾಲನೆ ನೀಡಿದರು.

ಅಭಿಯಾನದಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರು, ಮುಂದಿಲ್ಲ ಮೋದಿ, ಬರಲ್ಲ ಮೋದಿ, ಬೇಡ ಬೇಡ ಮೋದಿ ಬೇಡ ಎಂಬ ಘೋಷಣೆಗಳನ್ನು ಕೂಗಿದರು.

ಈ ವೇಳೆ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಮತ್ತೊಮ್ಮೆ ಮೋದಿ- 2024 ಎಂಬ ಗೋಡೆ ಬರಹ ಅಭಿಯಾನಕ್ಕೆ ಗುರುವಾರವಷ್ಟೇ ಮೈಸೂರಿನಲ್ಲಿ ಚಾಲನೆ ನೀಡಿದ್ದಾರೆ. ಈ ಮೂಲಕ ಮತ್ತೊಮ್ಮೆ ದೇಶವನ್ನು ಕೋಮು ಗಲಭೆಯ, ಆರ್ಥಿಕ ಸುಭದ್ರವಿಲ್ಲದ, ಬಡ ಮಧ್ಯಮ ಮತ್ತು ಎಲ್ಲಾ ವರ್ಗದ ವಿರೋಧಿ ನಾಯಕನನ್ನು ಬೆಂಬಲಿಸಲು, ಅಭಿವೃದ್ಧಿ ಹೊರತಾಗಿ ರಾಮ ರಾಜಕೀಯ, ಧರ್ಮ ರಾಜಕೀಯ, ಭಾವನಾತ್ಮಕ ರಾಜಕೀಯದ ಮೂಲಕ ಆಡಳಿತಕ್ಕೇರುವ ಮತ್ತು ಏಕಾಧಿಪತಿ ಆಡಳಿತ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಇಂತಹ ವ್ಯಕ್ತಿ ಮತ್ತೊಮ್ಮೆ ದೇಶದ ಅಗ್ರಮಾನ್ಯ ಪದವಿಯಾದ ಪ್ರಧಾನಿ ಹುದ್ದೆಗೆ ಏರಬಾರದು, ಹಿಟ್ಲರ್ ಆಡಳಿತ ಇಲ್ಲಿಗೆ ಕೊನೆಯಾಗಲಿ ಎಂದು ಆಗ್ರಹಿಸಿದರು.

ಪ್ರಧಾನಿ ಮೋದಿ ಕಳೆದ 10 ವರ್ಷಗಳಿಂದ ಏಕಮುಖ ಭಾಷಣದಿಂದಲೇ ಕಾಲ ಕಳೆಯುತ್ತಿದ್ದಾರೆ. ದೇಶದಲ್ಲಿ ಹಸಿವು ಬಡತನ ನಿರುದ್ಯೋಗ ತಾಂಡವಾಡುತ್ತಿದೆ. ಹಸಿವಿನ ಸೂಚ್ಯಾಂಕದಲ್ಲಿ ಬಾಂಗ್ಲಾದೇಶಕ್ಕಿಂತಲೂ ಕಡೆಯಾಗಿದೆ. ಬಿಜೆಪಿಯವರು ಮೋದಿ ಎಂದು ಭ್ರಮೆಯನ್ನ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ, ನೈಜ ಪರಿಸ್ಥಿತಿಯೇ ಬೇರೆಯಾಗಿದೆ. ಚುನಾವಣೆ ಎಷ್ಟು ಬೇಗ ಬರುತ್ತದೆಯೋ ಮೋದಿಯವರನ್ನು ಅಧಿಕಾರದಿಂದ ಕಿತ್ತೊಗೆಯಲು ಜನ ತುದಿಗಾಲದಲ್ಲಿ ನಿಂತಿದ್ದಾರೆ ಎಂದು ದೂರಿದರು.

ಪ್ರಧಾನಿಯಾದವರನ್ನು ಗೋಡೆಯಲ್ಲಿ ಬರೆದು ಜನರಿಗೆ ತೋರಿಸುವ ಕೆಲಸ ಬಿಜೆಪಿಯವರು ಮಾಡುತ್ತಿದ್ದು, ಇದು ಬಿಜೆಪಿಗೆ ಬಂದಿರುವ ದುಸ್ಥಿತಿಯನ್ನು ಸೂಚಿಸುತ್ತದೆ. ಮೋದಿ ಮತ್ತೊಮ್ಮೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ ಹೊರತು ಈ ದೇಶದ ಜನರು ಹೇಳುತ್ತಿಲ್ಲ. ಹೀಗಾಗಿ, ನಾವು ಜನರ ಭಾವನೆಯಾದ ಮುಂದಿಲ್ಲ ಮೋದಿ 2024 ಅಭಿಯಾನವನ್ನು ಮೈಸೂರಿನಿಂದಲೇ ಪ್ರಾರಂಭಿಸಿದ್ದೇವೆ ಎಂದು ತಿಳಿಸಿದರು.

ಈ ವೇಳೆ ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್, ಬ್ಲಾಕ್ ಅಧ್ಯಕ್ಷರಾದ ಜಿ. ಸೋಮಶೇಖರ್, ಶ್ರೀಧರ್, ಮಾಜಿ ಮೇಯರ್ ಗಳಾದ ಚಿಕ್ಕಣ್ಣ, ಪುಷ್ಪಲತಾ ಚಿಕ್ಕಣ್ಣ, ಪಾಲಿಕೆ ಮಾಜಿ ಸದಸ್ಯ ಜೆ. ಗೋಪಿ, ಮುಖಂಡರಾದ ಜೋಗಿ ಮಹೇಶ್, ಮಂಜು, ವಿಜಯ್ ಕುಮಾರ್, ರವಿಶಂಕರ್, ಪರಶಿವಮೂರ್ತಿ, ಗುಣಶೇಖರ್, ವಿಶ್ವನಾಥ್, ರಮೇಶ್ ರಾಮಪ್ಪ, ಮಹ್ಮದ್ ಫಾರೂಖ್, ಮಧುರಾಜ್, ಇಂದಿರಾ, ಮನೋಜ್, ವಿನಯ್, ಕುಮಾರ್, ಲೋಕೇಶ್ ಕುಮಾರ್, ನಾಗರತ್ನ ಮಂಜುನಾಥ್, ಶಿವಣ್ಣ ಮೊದಲಾದವರು ಇದ್ದರು.

ಮೋದಿ ಹೆಸರನ್ನು ಗೋಡೆ ಮೇಲೆ ಬರೆಯುವ ದು‌ಸ್ಥಿತಿ: ವ್ಯಂಗ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಮುಂದೆ ಪ್ರಧಾನಿ ಮೋದಿ ಅವರ ಆಟ ನಡೆಯದು. ಈ ನಾಡಿನ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಇಂತಹ ಅಭಿಯಾನ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಈ ದೇಶದ, ಈ ರಾಜ್ಯದ ಜನರ ಮನಸ್ಸಿನಲ್ಲಿ ಮೋದಿಯವರು ಅಳಿಸಿ ಹೋಗಿದ್ದಾರೆ. ಹೀಗಾಗಿ, ಬಿಜೆಪಿಯವರು ಮೋದಿಯವರ ಹೆಸರನ್ನು ಗೋಡೆ ಮೇಲೆ ಬರೆಯುವ ಮೂಲಕ ಮೋದಿಯವರನ್ನು ನೆನಪಿಸುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಇದು ಮೋದಿ ಅವರಿಗೆ ಬಂದಿರುವ ದು‌ಸ್ಥಿತಿಯನ್ನು ಸೂಚಿಸುತ್ತದೆ ಎಂದು ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್ ವ್ಯಂಗ್ಯವಾಡಿದರು.

ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನಪರ: ಗಿರಿಧರ್

ಮೈಸೂರು:ಉಚಿತ ಯೋಜನೆಗಳ ಹೆಸರಿನಲ್ಲಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗಿ, ರಾಜ್ಯದ ಬೊಕ್ಕಸ ದಿವಾಳಿಯ ಅಂಚಿಗೆ ಬಂದು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದೆ. ಆದರೆ, ನಿಜವಾಗಿಯೂ ಒಂದು ಜನಪರ ಸರ್ಕಾರ ಹೇಗೆ ಕಾರ್ಯ ನಿರ್ವಹಿಸಬೇಕು ಎನ್ನುವುದಕ್ಕೆ ಪ್ರಧಾನಿ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಸಾಕ್ಷಿಯಾಗಿದೆ ಎಂದು ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಎಚ್‌.ಜಿ. ಗಿರಿಧರ್ ತಿಳಿಸಿದ್ದಾರೆ.ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಭಾರತ್ ಅಕ್ಕಿ ಯೋಜನೆಯನ್ನು ಭಾರತ ಸ್ವಾಗತಿಸಿದೆ. ಸಮಸ್ತ ಭಾರತೀಯರಿಗೆ ಕೈಗೆಟುಕುವ ಬೆಲೆಯಲ್ಲಿ ಅಕ್ಕಿ ಲಭಿಸಬೇಕು ಮತ್ತು ಕಾಳ ಸಂತೆಗೆ ಕಡಿವಾಣ ಹಾಕಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಭಾರತ್ ಅಕ್ಕಿ ಯೋಜನೆ ಜಾರಿಗೆ ತಂದಿದೆ ಎಂದು ಹೇಳಿದ್ದಾರೆ.ಈ ಯೋಜನೆಯಲ್ಲಿ ಕೇವಲ 29 ರು. ಒಂದು ಕೆ.ಜಿ ಉತ್ಕೃಷ್ಟ ಗುಣಮಟ್ಟದ ಅಕ್ಕಿಯನ್ನು ವಿತರಿಸಲಾಗುತ್ತಿದೆ. ಇದರಿಂದ ಎಲ್ಲರಿಗೂ ಆಹಾರ ಭದ್ರತೆ ಒದಗಿಸಲು ಸಾಧ್ಯವಾಗುತ್ತದೆ. ಸರ್ಕಾರದ ಬೊಕ್ಕಸಕ್ಕೂ ಹೊರೆಯಾಗದಂತೆ, ಜನರಿಗೂ ನೆರವಾಗುವಂತಹ ಜನಪರ ಯೋಜನೆಗಳನ್ನು ಮೋದಿ ಸರ್ಕಾರ ಜಾರಿಗೆ ತರುತ್ತಿದೆ. ಮೈಸೂರಿನ ನಾಗರಿಕರೂ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ವಿನಂತಿಸಿದ್ದಾರೆ.