ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ವಿರೋಧಿಗಳ ಭಾವನಾತ್ಮಕ ಹೇಳಿಕೆಗಳಿಗೆ ಜನ ಮಾರುಹೋದರೆ ಯಾರ ಹೊಟ್ಟೆಯೂ ತುಂಬುವುದಿಲ್ಲ. ಜನಪರ ಕಾರ್ಯಕ್ರಮಗಳಿಂದ ಮಾತ್ರ ಜನರ ಬದುಕು ಹಸನಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.ತಾಲೂಕಿನ ಅಂಚೆಚಿಟ್ಟನಹಳ್ಳಿ, ಹುಲಿಕೆರೆ, ಗೊಂಡೇನಹಳ್ಳಿ ಗ್ರಾಪಂ ವ್ಯಾಪ್ತಿ ಹಾಗೂ ಬೆಳ್ಳೂರು ಪಟ್ಟಣದಲ್ಲಿ ಸೋಮವಾರ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು)ಪರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು.
ಈ ಹಿಂದೆ ಮುಖ್ಯಮಂತ್ರಿಯಾಗಿದ್ದುಕೊಂಡು ಜಿಲ್ಲೆಗೆ ಏನು ಅಭಿವೃದ್ಧಿ ಮಾಡಿದ್ದಾರೆ ಎಂಬುದನ್ನು ತಿಳಿಸಲಿ. ಮಗನನ್ನು ಮಂಡ್ಯ ಲೋಕಸಭಾ ಚುನಾವಣೆಗೆ ನಿಲ್ಲಿಸುವ ಪ್ಲಾನ್ ಮಾಡಿ ಜಿಲ್ಲೆಯ ಅಭಿವೃದ್ಧಿಗೆ 8 ಸಾವಿರ ಅನುದಾನ ನೀಡುತ್ತೇನೆ ಎಂದು ಹೇಳಿ ಮಗ ಸೋತ ನಂತರ ಆ ಅನುದಾನ ವಾಪಸ್ ತೆಗೆದುಕೊಂಡು ಹೋದರು ಎಂದು ದೂರಿದರು.ರೈತರ ಜಮೀನುಗಳಿಗೆ ನಾಲೆಯಲ್ಲಿ ನೀರು ಹರಿಸಿ ಎಂದು ಕೇಳಿದರೆ ಕನ್ನಂಬಾಡಿ ಬೀಗದ ಕೀ ನನ್ನ ಕೈಯಲ್ಲಿಲ್ಲ. ದೆಹಲಿಗೆ ಹೋಗಿ ಕೇಳಿ ಎಂದು ಹೇಳಿದವರು ಇಂದು ಕಾವೇರಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.
ತಂದೆ ಪ್ರಧಾನಮಂತ್ರಿ , ಮಗ ಮುಖ್ಯ ಮಂತ್ರಿಯಾಗಿದ್ದಾಗಲೇ ಕಾವೇರಿ ಸಮಸ್ಯೆ ಬಗೆಹರಿಸದವರು ಈಗ ಬಗೆಹರಿಸಲು ಸಾಧ್ಯವೇ?, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳನ್ನು ಟೀಕಿಸಿ ಹೆಣ್ಣು ಮಕ್ಕಳ ನಡತೆ ಬಗ್ಗೆ ಮಾತನಾಡಿರುವ ಜೆಡಿಎಸ್ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ ಹೆಣ್ಣು ಕುಲವನ್ನೇ ಅವಮಾನಿಸಿದ್ದಾರೆ ಎಂದರು.ಹೆಣ್ಣಿಗೆ ಪ್ರಾಧಾನ್ಯತೆ ನೀಡುವ ನಮ್ಮ ದೇಶದಲ್ಲಿ ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಹೆಣ್ಣುಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದು ಸಾರ್ವಜನಿಕ ಸಭೆಯಲ್ಲೇ ಹೇಳಿರುವುದು ಅಕ್ಷಮ್ಯ ಅಪರಾಧ. ಎರಡು ಬಾರಿ ಮುಖ್ಯ ಮಂತ್ರಿಯಾಗಿದ್ದವರ ಬಾಯಲ್ಲಿ ಬರುವ ಮಾತು ಇದಲ್ಲ. ಇಂತಹ ನಡವಳಿಕೆಗಳು ನಿಮಗೆ ಶೋಭೆ ತರುವುದಿಲ್ಲ. ಮಹಿಳಾ ಮತದಾರರು ಇಂತಹ ಹೇಳಿಕೆಗಳ ವಿರುದ್ಧ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಮಾತನಾಡಿ, ನಾನು ಅಪ್ಪಟ ರೈತನ ಮಗ. ಕೃಷಿ ಚಟುವಟಿಕೆಗಳನ್ನೂ ಮಾಡಿದ್ದೇನೆ. ಜಿಲ್ಲೆಯ ಅಭಿವೃದ್ದಿ, ತಾಲೂಕಿನ ಜನತೆ ನನಗೆ ಹೆಚ್ಚಿನ ಮತಗಳನ್ನು ನೀಡುವ ಮೂಲಕ ಬೆಂಬಲಿಸಬೇಕು ಎಂದು ಕೋರಿದರು.ನಾನು ಉದ್ಯಮಿಯಾಗಿ ಸಾವಿರಾರು ಮಂದಿಗೆ ಕೆಲಸ ನೀಡಿದ್ದೇನೆ. ವಿರೋಧಿಗಳು ನನ್ನನ್ನು ಹಣವಂತ ಎಂದು ಟೀಕಿಸುತ್ತಿದ್ದಾರೆ. ನಾನು ಪಾಪದ ಹಣ, ಸುಲಿಗೆ, ದರೋಡೆ ಮಾಡಿ ಹಣಗಳಿಸಿಲ್ಲ. ಹಗಲಿರುಳು ಕಷ್ಟಪಟ್ಟು ದುಡಿದು ಉದ್ಯಮಿಯಾಗಿ ಗಳಿಸಿರುವ ಹಣದಲ್ಲಿ ನನ್ನ ಶಕ್ತಿ ಮೀರಿ ಸಮಾಜ ಸೇವಾ ಕಾರ್ಯಗಳಿಗೆ ನೀಡಿದ್ದೇನೆ ಎಂದರು.
ರಾಜಕೀಯವಾಗಿ ಶಕ್ತಿ ಪಡೆದರೆ ಜಿಲ್ಲೆಯ ರೈತರು ಮತ್ತು ಎಲ್ಲ ವರ್ಗಗಳ ಬಡಜನರ ಶ್ರೇಯೋಭಿವೃದ್ಧಿ ಜೊತೆಗೆ ಜಿಲ್ಲೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಬಹುದೆಂಬ ಕಾರಣಕ್ಕೆ ಚುನಾವಣೆಗೆ ಸ್ಪರ್ಧಿಸಿರುವುದಾಗಿ ಟೀಕಿಸುವವರಿಗೆ ತಿರುಗೇಟು ನೀಡಿದರು.ಈ ವೇಳೆ ಮಾಜಿ ಎಂಎಲ್‌ಸಿ ಅಪ್ಪಾಜಿಗೌಡ, ಚಲುವರಾಯಸ್ವಾಮಿ ಪುತ್ರ ಸಚ್ಚಿನ್, ಜಿಪಂ ಮಾಜಿ ಸದಸ್ಯ ಎಂ.ಪ್ರಸನ್ನ, ತಾಪಂ ಮಾಜಿ ಅಧ್ಯಕ್ಷ ನವೀನ್‌ಕುಮಾರ್, ಮುಖಂಡರಾದ ಶರತ್‌ರಾಮಣ್ಣ, ತ್ಯಾಪೇನಹಳ್ಳಿ ಶ್ರೀನಿವಾಸ್, ಕೆಲಗೆರೆ ದೇವರಾಜು ಸೇರಿದಂತೆ ಹಲವರು ಇದ್ದರು.