ಮನಸ್ಸಿನಲ್ಲಿ ಛಲ, ಸತತ ಪ್ರಯತ್ನವಿದ್ದಲ್ಲಿ ಅಸಾಧ್ಯವೆಂಬುದು ಇಲ್ಲವೇ ಇಲ್ಲ ಎಂದು ಶ್ರೀ ಆದಿ ಚುಂಚನಗಿರಿಯ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಕನ್ನಡಪ್ರಭ ವಾರ್ತೆ ತುರುವೇಕೆರೆ
ಮನಸ್ಸಿನಲ್ಲಿ ಛಲ, ಸತತ ಪ್ರಯತ್ನವಿದ್ದಲ್ಲಿ ಅಸಾಧ್ಯವೆಂಬುದು ಇಲ್ಲವೇ ಇಲ್ಲ ಎಂದು ಶ್ರೀ ಆದಿ ಚುಂಚನಗಿರಿಯ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.ತಾಲೂಕಿನ ಮಾಯಸಂದ್ರ ಟಿಬಿ ಕ್ರಾಸ್ ನಲ್ಲಿರುವ ಬಿಜಿಎಸ್ ಕ್ರೀಡಾಂಗಣದಲ್ಲಿ ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ, ರಾಜ್ಯ ಶಾಲಾ ಶಿಕ್ಷಣ ಇಲಾಖೆ. ತುಮಕೂರು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಮತ್ತು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ಸಹಯೋಗದಲ್ಲಿ 25 ರಿಂದ 29 ರ ವರೆಗೆ ನಡೆಯುವ 17 ವರ್ಷ ವಯೋಮಾನದ 69 ನೇ ರಾಷ್ಟ್ರೀಯ ಹ್ಯಾಂಡ್ ಬಾಲ್ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಈ ಹ್ಯಾಂಡ್ ಬಾಲ್ ಕ್ರೀಡಾ ಕೂಟಕ್ಕೆ ದೇಶದ 32 ರಾಜ್ಯಗಳಿಂದ ಸ್ಪರ್ಧಿಗಳು ಆಗಮಿಸಿದ್ದಾರೆ. ಸುಮಾರು 524 ಆಟಗಾರರು ಇದ್ದಾರೆ. ಎಲ್ಲರೂ ಸಹ ಸ್ಪರ್ಧಾತ್ಮಕ ಮನೋಭಾವದಿಂದ ಆಡಬೇಕು. ಯಾರೇ ಗೆದ್ದರೂ ಸಹ ಭಾರತಾಂಬೆಯ ಸುಪುತ್ರರೇ. ನಾವು ದೇಶಕ್ಕಾಗಿ ಆಡುತ್ತಿದ್ದೇವೆ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು. ಇತ್ತೀಚೆಗೆ ದೇಶದಲ್ಲಿ ಕ್ರೀಡೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ. ಎಲ್ಲರೂ ಶ್ರಮವಹಿಸಿ ತಾನೊಬ್ಬ ವಿಶ್ವವಿಖ್ಯಾತನಾಗಬೇಕು ಎಂಬ ಸಂಕಲ್ಪದೊಂದಿಗೆ ಕಣಕ್ಕೆ ಇಳಿಯಿರಿ. ಅಸಾಧ್ಯವೆಂಬುದು ಇಲ್ಲವೇ ಇಲ್ಲ. ಎಲ್ಲವೂ ನಿಮ್ಮ ಕೈಲಿದೆ. ಸೋಮಾರಿತನ ಬೇಡ. ಸಾಧನೆ ಸಾಧಕನ ಸ್ವತ್ತು. ಎಲ್ಲರೂ ಗೆಲುವಿನ ಆಕಾಂಕ್ಷೆಯೊಂದಿಗೇ ಆಡಿ. ಸೋತರೆ ಚಿಂತೆ ಬೇಡ. ಸೋಲೇ ಗೆಲುವಿನ ಮೆಟ್ಟಿಲು ಎಂಬ ಅಂಶ ಮನದಲ್ಲಿಟ್ಟುಕೊಂಡು ಮುಂದಿನ ಮೆಟ್ಟಿಲು ಹತ್ತಲು ಪ್ರಯತ್ನಿಸಿ ಎಂದು ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು. ಈ ಕ್ರೀಡಾಕೂಟ ಒಲಂಪಿಕ್ಸ್ ಗೆ ದಾರಿ ಮಾಡಿಕೊಡಲಿದೆ. ಹ್ಯಾಂಡ್ ಬಾಲ್ ಕ್ರೀಡೆ ವ್ಯಕ್ತಿ ವಿಕಸನವನ್ನೂ ಸಹ ಮಾಡುತ್ತದೆ. ಇದು ಅತ್ಯಂತ ವೇಗದ ಕ್ರೀಡೆಗಳಲ್ಲಿ ಇದೂ ಒಂದಾಗಿದೆ. ಈ ಕ್ರೀಡಾಕೂಟದಲ್ಲಿ ದೇಶದ ಹಲವಾರು ರಾಜ್ಯಗಳಿಂದ ಕ್ರೀಡಾಪಟುಗಳು ಬಂದಿರುವುದು ಸಂತಸ ತಂದಿದೆ. ಇದು ಒಂದು ಕುಟುಂಬದಂತೆ ಇದೆ ಎಂದು ಅವರು ಹೇಳಿದರು. ರಾಜ್ಯ ಶಾಲಾ ಶಿಕ್ಷಣ ಇಲಾಖಾ ಜಂಟಿ ನಿರ್ದೇಶಕರಾದ ನರಸಿಂಹಯ್ಯ ಮಾತನಾಡಿ ಸರ್ಕಾರ ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ. ಮಕ್ಕಳು ಇದರ ಸದುಪಯೋಪಡಿಸಿಕೊಳ್ಳಬೇಕು. ಮಕ್ಕಳು ತಮ್ಮಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರ ಸೂಸಬೇಕು. ಅವರ ಪ್ರತಿಭೆ ಅನಾವರಣಗೊಳ್ಳಲು ಸೂಕ್ತ ತರಬೇತಿಯನ್ನೂ ಸಹ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು. ಈ ಸಂಧರ್ಭದಲ್ಲಿ ಶ್ರೀ ಆದಿ ಚುಂಚನಗಿರಿ ಮಹಾ ಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಹಂಪಿ ಹೇಮಕೂಟದ ದಯಾನಂದ ಸ್ವಾಮೀಜಿ, ಸೋಮೇಶ್ವರನಾಥ ಸ್ವಾಮೀಜಿ, ಚಂದ್ರಶೇಖರ ಸ್ವಾಮೀಜಿ, ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾದ ಮೇಲ್ವಿಚಾರಕಿ ಕನಕಾ, ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಮಧುಚಂದ್ರ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸೋಮಶೇಖರ್, ಹ್ಯಾಂಡ್ ಬಾಲ್ ಅಸೋಷಿಯೇಷ್ ನ್ ಉಪಾಧ್ಯಕ್ಷ ಪ್ರೊ.ಪುಟ್ಟರಂಗಪ್ಪ, ಕಾರ್ಯದರ್ಶಿ ಡಿ.ಎನ್.ಲೋಕೇಶ್, ಹಾಲು ಒಕ್ಕೂಟದ ನಿರ್ದೇಶಕ ಸಿ.ವಿ.ಮಹಲಿಂಗಯ್ಯ, ಲಕ್ಷ್ಮೀನಾರಾಯಣ್, ಎಂ.ಶಿವಲಿಂಗಯ್ಯ, ಮಧು, ಎಚ್.ಎಸ್.ನಾಗರಾಜು, ಅರುಣ್ ಕುಮಾರ್, ವಕೀಲ ಪಿ.ಎಚ್.ಧನಪಾಲ್. ಎಂ.ಎನ್.ಚಂದ್ರೇಗೌಡ, ಎಸೈ ಮೂರ್ತಿ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ಆಡಳಿತಾಧಿಕಾರಿ ಶಿವರಾಂ, ಜಿಲ್ಲಾ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪರಶಿವಮೂರ್ತಿ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.