ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕಲುಷಿತ ನೀರು ಸೇವನೆಯಿಂದ ಸಾರ್ವಜನಿಕ ಆರೋಗ್ಯದ ಮೇಲಾಗುವ ದುಷ್ಟರಿಣಾಮವನ್ನು ತಡೆಗಟ್ಟಲು ಕುಡಿಯುವ ನೀರಿನ ಸರಬರಾಜು ಮಾಡುವ ಎಲ್ಲ ಜಲಮೂಲ ಮತ್ತು ಚರಂಡಿ ಸ್ವಚ್ಛಗೊಳಿಸುವಂತೆ ಜಿಲ್ಲಾಧಿಕಾರಿ ಡಾ. ಬಿ. ಸುಶೀಲಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ನಡೆಸಿದ ಸಭೆ ಅಧ್ಯಕ್ಷತೆ ವಹಿಸಿದ್ದ ಅವರು ಜಿಲ್ಲೆಯ ಶಹಾಪೂರ, ಸುರಪುರ, ಗುರುಮಠಕಲ್, ಯಾದಗಿರಿ, ವಡಗೇರಾ ಹಾಗೂ ಹುಣಸಗಿ ಸೇರಿ ಜಿಲ್ಲೆಯಾದ್ಯಂತ ಮುಂಗಾರು, ಮಳೆ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದರು.
ಸಾರ್ವಜನಿಕರು ಆರೋಗ್ಯದ ಮೇಲೆ ಆಗಬಹುದಾದ ದುಷ್ಟರಿಣಾಮ ತಡೆಯಲು ಕುಡಿಯುವ ನೀರು ಸರಬರಾಜು ಜಲಮೂಲ ಮತ್ತು ಚರಂಡಿ ಸ್ವಚ್ಛಗೊಳಿಸಬೇಕು. ಪರೀಕ್ಷೆಗೆ ಒಳಪಡಿಸಿ ಖಾತ್ರಿ ಪಡಿಸಿಕೊಂಡು ಶುದ್ಧ ಕುಡಿಯುವ ನೀರು ಪೂರೈಸಬೇಕೆಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.ಪ್ರತಿ ವರ್ಷದಂತೆ ಈ ವರ್ಷವು ಮೇ ಅಂತ್ಯಕ್ಕೆ ಮುಂಗಾರು ಮಳೆ ಪ್ರಾರಂಭಗೊಳ್ಳಲಿದ್ದು, ಇದರಿಂದ ಜಿಲ್ಲಾ ವ್ಯಾಪ್ತಿಯ ಗ್ರಾಮೀಣ ಜನ ವಸತಿ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಸುವಲ್ಲಿ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸುವಂತೆ ಸೂಚಿಸಲಾಯಿತು.
ಮಳೆ ನೀರು ಕಲುಷಿತ ನೀರಿನೊಂದಿಗೆ ಬೆರೆತು ಕುಡಿಯಲು ಸರಬರಾಜು ಮಾಡುವ ನೀರಿನ ಮೂಲಗಳಿಗೆ ಸೇರುವ ಸಾಧ್ಯತೆ ಹೆಚ್ಚಾಗಿದ್ದು, ಸದರಿ ನೀರಿನ ಸೇವನೆಯಿಂದ ಜನ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರುದಲ್ಲದೆ, ಸಾಮೂಹಿಕ ಅವಘಡ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಎಚ್ಚರಿಕೆ ನೀಡಿದರು.ಕುಡಿಯುವ ನೀರಿನ ಮೂಲಗಳ ಸುತ್ತಮುತ್ತಲೂ ಮಳೆ, ಕೊಳಚೆ ನೀರು ನಿಲ್ಲದಂತೆ ಸೂಕ್ತ ಚರಂಡಿ ವ್ಯವಸ್ಥೆ ಕೈಗೊಳ್ಳಬೇಕು. ಹಾಗೂ ನೀರು ಸರಬರಾಜು ವ್ಯವಸ್ಥೆಗೆ ಕಲುಷಿತ ನೀರು ಸೇರದಂತೆ ಮೇಲ್ವಿಚಾರಣೆ ಮತ್ತು ಕಣ್ಗಾವಲು ನಡೆಸಲು ನಿರ್ದೇಶಿಸಲಾಯಿತು.
ಎಲ್ಲಾ ಗ್ರಾಮ ಪಂಚಾಯತಿ ಹಾಗೂ ಎಲ್ಲಾ ಗ್ರಾಮೀಣ ಜನವಸತಿ ಪ್ರದೇಶಗಳ ಎಲ್ಲ ಕುಡಿಯುವ ನೀರಿನ ಮೂಲ ಪ್ರಾಥಮಿಕ ಹಂತದಲ್ಲಿ FTK & H2S Vials ಗಳನ್ನು ಉಪಯೋಗಿಸಿ ನೀರಿನ ಗುಣಮಟ್ಟ ಪರೀಕ್ಷೆ ಕಡ್ಡಾಯವಾಗಿ ಕೈಗೊಳ್ಳಬೇಕು. ಕಲುಷಿತ ಕಂಡುಬಂದ ನೀರಿನ ಮೂಲ ಸ್ಥಗಿತಗೊಳಿಸಿ, ಶುದ್ಧ ಕುಡಿವ ನೀರಿನ ವ್ಯವಸ್ಥೆ ಪರ್ಯಾಯ ಮೂಲಗಳಿಂದ ಒದಗಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಲಾಯಿತು.