ಅರಣ್ಯವಾಸಿಗಳ ಒಕ್ಕಲೆಬ್ಬಿಸಲು ನೋಟಿಸ್ ಕಳವಳಕಾರಿ: ರವೀಂದ್ರ ನಾಯ್ಕ

| Published : Jul 02 2024, 01:40 AM IST

ಸಾರಾಂಶ

ತಾಲೂಕಿನ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ನ್ಯಾಯಾಲಯದ ಪ್ರಾಧಿಕಾರದಿಂದ ಕ್ಯಾದಗಿ ವ್ಯಾಪ್ತಿಯಲ್ಲಿ ಬಿಳೂಮನೆ ಹಳ್ಳಿಯ ಅರಣ್ಯವಾಸಿ ಕನ್ನಾ ಪುಟ್ಟಾ ನಾಯ್ಕ ಮತ್ತು ಕನ್ನಾ ಮಾರ್ಯ ನಾಯ್ಕ ಇನ್ನಿತರರಿಗೆ ಒಕ್ಕಲೆಬ್ಬಿಸುವ ಪ್ರಕ್ರಿಯೆ ನೋಟಿಸ್‌ಗಳು ಜಾರಿಯಾಗಿದ್ದು, ಜು. ೩ರಂದು ಪ್ರಾಧಿಕಾರದ ನ್ಯಾಯಾಲಯಕ್ಕೆ ಹಾಜರಿರುವಂತೆ ನೋಟಿಸ್ ನೀಡಿದ್ದಾರೆ.

ಸಿದ್ದಾಪುರ: ಅನಾದಿ ಕಾಲದಿಂದ ಸಾಗುವಳಿ ಮಾಡುತಿದ್ದು, ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಸಲ್ಲಿಸಿದ ಅರ್ಜಿ ಮಂಜೂರಿಗೆ ಸಂಬಂಧಪಟ್ಟಂತೆ ವಿಚಾರಣೆ ಹಂತದಲ್ಲಿರುವ ಸಂದರ್ಭದಲ್ಲಿ ಅರಣ್ಯವಾಸಿಗಳಿಗೆ ಅರಣ್ಯ ಕಾಯಿದೆ ಅಡಿಯಲ್ಲಿ ಒಕ್ಕಲೆಬ್ಬಿಸುವ ಪ್ರಕ್ರಿಯೆಗೆ ಕಾನೂನುಬದ್ಧ ಪ್ರಾಧಿಕಾರದ ಮೂಲಕ ವಿಚಾರಣಾ ನೋಟಿಸ್ ನೀಡುತ್ತಿರುವುದು ಅರಣ್ಯವಾಸಿಗಳಿಗೆ ಆತಂಕ ಉಂಟಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ತಾಲೂಕಿನ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ನ್ಯಾಯಾಲಯದ ಪ್ರಾಧಿಕಾರದಿಂದ ಕ್ಯಾದಗಿ ವ್ಯಾಪ್ತಿಯಲ್ಲಿ ಬಿಳೂಮನೆ ಹಳ್ಳಿಯ ಅರಣ್ಯವಾಸಿ ಕನ್ನಾ ಪುಟ್ಟಾ ನಾಯ್ಕ ಮತ್ತು ಕನ್ನಾ ಮಾರ್ಯ ನಾಯ್ಕ ಇನ್ನಿತರರಿಗೆ ಒಕ್ಕಲೆಬ್ಬಿಸುವ ಪ್ರಕ್ರಿಯೆ ನೋಟಿಸ್‌ಗಳು ಜಾರಿಯಾಗಿದ್ದು, ಜು. ೩ರಂದು ಪ್ರಾಧಿಕಾರದ ನ್ಯಾಯಾಲಯಕ್ಕೆ ಹಾಜರಿರುವಂತೆ ನೋಟಿಸ್ ನೀಡಿದ್ದಾರೆ.

ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದಂತ ಅರಣ್ಯವಾಸಿಯ ಅರ್ಜಿಗೆ ಸಂಬಂಧಿಸಿ ಮಾನ್ಯತೆ ಮತ್ತು ಪರಿಶೀಲನಾ ಪ್ರಕ್ರಿಯೆಯು ಪೂರ್ಣ ಆಗುವವರೆಗೆ ಸಾಗುವಳಿ ಅರಣ್ಯ ಭೂಮಿ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸತಕ್ಕದ್ದಲ್ಲ ಅಥವಾ ಹೊರಹಾಕ ತಕ್ಕದ್ದಲ್ಲ ಎಂಬ ಸ್ಪಷ್ಟ ಅಂಶ ಕಾನೂನಿನಲ್ಲಿ ಉಲ್ಲೇಖವಿದ್ದಾಗಲೂ ಒಕ್ಕಲೆಬ್ಬಿಸುವ ಅರಣ್ಯ ಇಲಾಖೆ ವಿಚಾರಣೆ ನೋಟಿಸ್ ನೀಡುತ್ತಿರುವುದು ಖೇದಕರವೆಂದು ರವೀಂದ್ರ ನಾಯ್ಕ ಅರಣ್ಯ ಇಲಾಖೆಯ ಕ್ರಮವನ್ನು ಆಕ್ಷೇಪಿಸಿದ್ದಾರೆ.

ಸಾಗುವಳಿ ಕ್ಷೇತ್ರದಲ್ಲಿ ೩೦-೩೫ ವರ್ಷದ ತೆಂಗು, ಅಡಕೆ ಮರ, ಬಾಳೆಹಣ್ಣು, ಭತ್ತ, ಬೇಸಾಯ ಮಾಡುತ್ತಾ ಜೀವನ ನಿರ್ವಹಿಸುವ ಸಂದರ್ಭದಲ್ಲಿ ಒಕ್ಕಲೆಬ್ಬಿಸುವ ಪ್ರಕ್ರಿಯೆ ನೋಟಿಸ್ ಜಾರಿಯಾಗಿರುವುದರಿಂದ ಅರಣ್ಯವಾಸಿಗಳು ಆತಂತಕ್ಕೆ ಒಳಗಾಗಿದ್ದಲ್ಲದೇ, ಮಾನಸಿಕ ಕಿರುಕುಳಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರ ಈ ಹಿಂದೆ ಅರಣ್ಯವಾಸಿಯ ಒಟ್ಟು ಸಾಗುವಳಿ ಕ್ಷೇತ್ರ ೩ ಎಕರೆಗಿಂತ ಎಕರೆ ಕಡಿಮೆ ಇರುವ ಒತ್ತುವರಿದಾರರನ್ನು ಮುಂದಿನ ಸೂಚನೆವರೆಗೆ ಒಕ್ಕಲೆಬ್ಬಿಸಬಾರದೆಂದು ಕಾಗೋಡು ತಿಮ್ಮಪ್ಪ ಅವರು ಸಭಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಮಾಡಿದ ಸರ್ಕಾರದ ಆದೇಶವನ್ನು ಉಲ್ಲಂಘಿಸಿ, ಒಕ್ಕಲೆಬ್ಬಿಸುವ ಪ್ರಕ್ರಿಯೆ ಜರುಗುತ್ತಿರುವುದು ಖಂಡನಾರ್ಹ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.